ವಿಜಯಪುರ: ಮೇಕೆದಾಟು ವಿವಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ವಿವಿಧ ಠಾಣೆಗಳಲ್ಲಿ ಮೊಕದ್ದಮೆ ದಾಖಲಿಸಲು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ಹಾಗೂ ದಲಿತ ಸಮುದಾಯಗಳ ಹಿರಿಯ ಮುಖಂಡರಾದ ಚಂದ್ರಶೇಖರ ಕೊಡಬಾಗಿ, ಸುರೇಶ ಘೋಣಸಗಿ, ಅಡಿವೆಪ್ಪ ಸಾಲಗಲ್ ಅವರು, ಯಾವ ಸಂಘಟನೆಗಳೂ ತಮ್ಮ ವರ್ತನೆಯಿಂದ ಸಚಿವರಾದ ಕಾರಜೋಳ ಹಾಗೂ ಮಾಜಿ ಸಚಿವ ಪಾಟೀಲ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು.
ಅರೋಪ-ಪ್ರತ್ಯಾರೋಪ ಇಷ್ಟಕ್ಕೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು. ಜಲಕ್ರಾಂತಿ ಮೂಲಕ ಜಿಲ್ಲೆಯನ್ನು ಸಮಗ್ರ ನೀರಾವರಿ ಮಾಡುವಲ್ಲಿ ಪಾಟೀಲ ಅವರ ಕೊಡುಗೆ ಅನುಪಮ. ಟೀಕೆ-ಟಿಪ್ಪಣಿಗಳು ಗೌರವಯುತವಾಗಿ ಇರಬೇಕು. ಬದಲಾಗಿ ಕಾರಜೋಳ ಅವರಂಥ ಹಿರಿಯ ರಾಜಕೀಯ ನಾಯಕರು ಪಾಟೀಲ ಅವರ ಮನೆಗೆ ಮುತ್ತಿಗೆ ಹಾಕಿಸುವ, ಪ್ರಕರಣ ದಾಖಲಿಸುವ ಹಂತಕ್ಕೆ ಹೋಗಬಾರದು ಎಂದು ಮನವಿ ಮಾಡಿದರು. ತಮ್ಮಣ್ಣ ಮೇಲಿನಕೇರಿ, ರಾಹುಲ್ ಕುಬಕಡ್ಡಿ, ಸುನೀಲ ಉಕ್ಕಲಿ, ಅಶೋಕ ಚಲವಾದಿ, ಕುಮಾರ ಶಹಾಪುರ, ಸಂತೋಷ ಶಹಾಪುರ ಇದ್ದರು.