ಪಣಜಿ: ಗೋವಾ ರಾಜ್ಯಕ್ಕೆ ಸ್ಥಗಿತಗೊಂಡಿರುವ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪುನರಾರಂಭಿಸುವಂತೆ ಕರ್ನಾಟಕ ರಕ್ಷಣಾ ವೇದಿಗೆ ಪ್ರವೀಣ ಕುಮಾರ್ ಶೆಟ್ಟಿ ಬಣದ ಗೋವಾ ಘಟಕದ ವತಿಯಿಂದ ಕರ್ನಾಟಕ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ರವರ ಬಳಿ ಮನವಿ ಸಲ್ಲಿಸಲಾಯಿತು.
ಈ ಕುರಿತು ಸುದ್ಧಿಗಾರರಿಗೆ ಕರವೇ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ಮಾಹಿತಿ ನೀಡಿ,ಉತ್ತರ ಕರ್ನಾಟಕದ ಬೆಳಗಾವಿ ವಿಜಯಪುರ, ಕಲಬುರ್ಗಿ, ಯಾದಗಿರಿ, ಗದಗ, ಹಾವೇರಿ, ಕಾರವಾರ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಂದ ಗೋವಾಕ್ಕೆ ವಲಸೆ ಬಂದು ಇಲ್ಲಿ 4-5 ದಶಕಗಳಿಂದ ಬಂದು ಬದುಕು ಕಟ್ಟಿಕೊಂಡಿದ್ದಾರೆ.
ಗೋವಾಕ್ಕೆ ಬರುವ ಕೆಎಸ್‌ಆರ್‌ಟಿಸಿ ಕೆಲ ಬಸ್‌ಗಳನ್ನು ಕಳೆದ ಎರಡು ವರ್ಷಗಳಿಂದ ಬಂದ್ ಮಾಡಲಾಗಿದೆ. ಇದರಿಂದಾಗಿ ಗೋವಾ ಕನ್ನಡಿಗರಿಗೆ ತೊಂದರೆಯಾಗಿದೆ.
ಸಿಂಧಗಿ-ವಾಸ್ಕೋ, ಮುದ್ದೇಬಿಹಾಳ-ವಾಸ್ಕೋ, ತಾಳಿಕೋಟಿ-ವಾಸ್ಕೋ, ವಾಸ್ಕೋ-ಹುಬ್ಬಳ್ಳಿ, ಮೈಸೂರು-ಪಣಜಿ, ಗುಲ್ಬರ್ಗಾ-ಪಣಜಿ. ಈ ಬಸ್‌ಗಳ ಓಡಾಟ ಪುನರಾರಂಭಿಸಬೇಕು ಎಂದು ಸಚಿವ ರಾಮಲಿಂಗ ರೆಡ್ಡಿ ರವರ ಬಳಿ ಮನವಿ ಮಾಡಲಾಯಿತು ಎಂಬ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಪ್ರವೀಣಕುಮಾರ್ ಶೆಟ್ಟಿ, ಕರವೇ ಗೋವಾ ರಾಜ್ಯಾಧ್ಯಕ್ಷರಾದ ಮಂಜುನಾಥ ನಾಟೀಕರ್, ಖಜಾಂಚಿ ವೈ.ಎಸ್.ಬಿರಾದಾರ್, ರಾಜ್ಯ ಕಾರ್ಯದರ್ಶಿ ಶಿವಾನಂದ ಮಸಬಿನಾಳ, ಗೋವಾ ರಾಜ್ಯ ಸಂಚಾಲಕ ಯಶವಂತ್ ಕಿಂಗ್, ಶಿವಶರಣ ಹಡಪದ ಸಮಾಜದ ರಾಜ್ಯಾಧ್ಯಕ್ಷ ಮಹೇಶ್ ಹಡಪದ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ರುದ್ರಯ್ಯ ಹಿರೇಮಠ, ಕರವೇ ಸಡಾ ನಗರ ಘಟಕದ ಉಪಾಧ್ಯಕ್ಷ ಶಿವಾನಂದ ತಳವಾರ, ಬಸವರಾಜ್ ಮೂರ್ನಾಳ, ಕರವೇ ಜುವಾರಿ ನಗರ ಘಟಕದ ಕಾರ್ಯದರ್ಶಿ ರಮೇಶ್ ಗೌಡರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮನವಿ ಪತ್ರ ಸಲ್ಲಿಸಿದರು.