ಮೂಡಿಗೆರೆ: ಅತಿವೃಷ್ಟಿಯಿಂದಾಗಿ ಮನೆ ಹಾಗೂ ಕೃಷಿ ಜಮೀನು ಕಳೆದುಕೊಂಡಿರುವ ಮಧುಗುಂಡಿ ಹಾಗೂ ಅಲೇಕಾನ್ ಹೊರಟ್ಟಿ ಆದಿವಾಸಿ ಬುಡಕಟ್ಟು ಜನಾಂಗದ ಮಲೆಕುಡಿ ಸಮುದಾಯದವರು ಪುನರ್ವಸತಿ ಹಾಗೂ ಪರಿಹಾರ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ನೂರಾರು ಮಲೆಕುಡಿ ಸಮುದಾಯದ ಕುಟುಂಬಗಳು ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿದ್ದು, ಕೃಷಿ ಮತ್ತು ಕೂಲಿಯಿಂದ ಜೀವನ ನಡೆಸುತ್ತಿದ್ದಾರೆ. ಕಳೆದ ತಿಂಗಳು ಸುರಿದ ಮಳೆ ಗ್ರಾಮಗಳನ್ನು ಹಾನಿಗೊಳಗಾಗಿಸಿದೆ. ಈ ವೇಳೆ ಮಧುಗುಂಡಿಯ ಆದಿವಾಸಿ ಜನಾಂಗದ 12 ಕುಟುಂಬಗಳು ಮನೆ ಹಾಗೂ ಕೃಷಿ ಜಮೀನು ಕಳೆದುಕೊಂಡಿವೆ. ಅಲ್ಲದೇ, ಅಲೇಕಾನ್ ಹೊರಟ್ಟಿಯ ರಸ್ತೆಗಳು ನಿರ್ಣಾಮಗೊಂಡಿವೆ. ಇಲ್ಲಿನ ವಾಸಿಗಳಿಗೆ ದಿಕ್ಕು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡರು.
ಈಗಾಗಲೇ ಫಾರಂ ನಂ. 50, 53 ಮತ್ತು 57 ರಲ್ಲಿ ಭೂ ದಾಖಲಾತಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದು, ಕೆಲವರನ್ನು ಹೊರತುಪಡಿಸಿ ಉಳಿದವರಿಗೆ ಹಕ್ಕುಪತ್ರ ದೊರೆತಿಲ್ಲ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರಗಳನ್ನು ಪಡೆಯಲಾಗಿದೆ. ಈ ಕಾರಣದಿಂದ ಪುನರ್ವಸತಿ ಸಂದರ್ಭದಲ್ಲಿ ಹಕ್ಕುಪತ್ರ ಇದ್ದವರಿಗೆ ಮಾತ್ರ ಆದ್ಯತೆ ನೀಡುತ್ತಿರುವುದರಿಂದ ದಾಖಲೆ ಇಲ್ಲದವರು ತೊಂದರೆಗೀಡಾಗಿದ್ದಾರೆ. ಎಲ್ಲ ನೆರೆ ಸಂತ್ರಸ್ತರಿಗೂ ಸಮಾನ ಪರಿಹಾರ ನೀಡಬೇಕೆಂದರು. ಬೇರೆ ಜಿಲ್ಲೆಗಳಲ್ಲಿ ಆದಿವಾಸಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ.
ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಲ್ಲಿನ ಮೂಲ ನಿವಾಸಿಗಳೇ ಆಗಿರುವ ತಮ್ಮ ಸಮುದಾಯದ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದಾರೆ. ಯಾವುದೇ ರೀತಿಯ ಸರ್ಕಾರಿ ಸವಲತ್ತು ನೀಡುತ್ತಿಲ್ಲ. ವಲಸಿಗರಿಗೆ ಮಾತ್ರ ಸಮಾಜ ಕಲ್ಯಾಣ ಇಲಾಖೆಯಿಂದ ಪೌಷ್ಟಿಕಾಂಶ ಆಹಾರ ನೀಡುತ್ತಿದ್ದಾರೆ. ಹಾಗಾಗಿ, ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಮಲೆಕುಡಿ ಜನಾಂಗಗಳಿಗೂ ಸರ್ಕಾರಿ ಸವಲತ್ತು ವಿಸ್ತರಿಸಬೇಕೆಂದರು. ಮಲೆಕುಡಿ ಸಂಘದ ಜಿಲ್ಲಾದ್ಯಕ್ಷ ಎಚ್. ಎಸ್.ಗೋಪಾಲ್, ಕಾರ್ಯದರ್ಶಿ ರಂಜಿತ್, ಎಂ.ಸಿ.ಉದೇಶ್, ಕೆ.ಎಸ್.ಜಗಧೀಶ್, ಸುರೇಶ್, ಪ್ರವೀಣ್, ವಿಶೃತ್ ಹಾಜರಿದ್ದರು.