ಬೀದರ: ಕಬ್ಬಿಗೆ ವೈಜ್ಞಾನಿಕ ಬೆಲೆ ಪಾವತಿ ಸೇರಿದಂತೆ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾ ರೈತ ಸಂಘ ಮತ್ತು ಹಸಿರು ಆಗ್ರಹಿಸಿದೆ.
ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದಲ್ಲಿ ಪ್ರಮುಖರು ಜಿಲ್ಲಾಧಿಕಾರಿ ರಾಮಚಂದ್ರನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಕಬ್ಬು ಸಾಗಿಸಿದ ನಾಲ್ಕೈದು ತಿಂಗಳ ನಂತರ ಕಾರ್ಖಾನೆಯವರು ಕಬ್ಬಿನ ಹಣ ಪಾವತಿಸುತ್ತಿದ್ದಾರೆ. ಅದು ಸಹ ಮನಬಂದಂತೆ ದರ ನೀಡುತ್ತಿದ್ದಾರೆ. ಕಳೆದ ಸಾಲಿನಲ್ಲಿ ಪ್ರತಿ ಟನ್‌ಗೆ 2400 ರೂ. ನೀಡುವುದಾಗಿ ವಾಗ್ಧಾನ ಮಾಡಿದರೂ ಕೂಡ 1950 ರೂ. ಮಾತ್ರ ನೀಡಲಾಗಿದೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಈ ವರ್ಷ ರಾಜ್ಯದಲ್ಲಿ ಎಲ್ಲ ಕಾರ್ಖಾನೆಯವರು 2500 ರೂ. ಕ್ಕಿಂತ ಹೆಚ್ಚಿನ ಹಣವನ್ನು ಸಂದಾಯ ಮಾಡುತ್ತಿದ್ದಾರೆ. ಆದರೆ, ಬೀದರ ಜಿಲ್ಲೆಯ ಕೇವಲ 2,000 ರೂ. ನೀಡುತ್ತಿರುವುದು ನಾಚಿಕೆಗೇಡು ವಿಷಯ. ಈ ಬಗ್ಗೆ ವಿಚಾರಿಸಿದರೆ ಎಫ್‌ಆರ್‌ಪಿ ಪ್ರಕಾರ ದರ ಇದಾಗಿದೆ ಎನ್ನುತ್ತಿದ್ದರೆ. ಕಾರ್ಖಾನೆಯವರು ಕೇವಲ ಶೇ.9ರಷ್ಟು ಕಬ್ಬು ರಿಕವರಿ ತೋರಿಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಮ್ಮ ಜಿಲ್ಲೆಯ ಕಬ್ಬಿಗೆ ಶೇ.11ರಷ್ಟು ರಿಕವರಿ ಬರುತ್ತಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ಕಾರ್ಖಾನೆಗಳಿಗೆ ಒಳ್ಳೆಯ ಕೇಮಿಸ್ಟ್ ರವರನ್ನು ನೇಮಕ ಮಾಡಿ ರಿಕವರಿ ಚೆಕ್ ಮಾಡಿ, ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಬ್ಬಿನ ನಂತರ ತೊಗರಿ ವಾಣಿಜ್ಯ ಬೆಳೆ ಆಗಿದ್ದು, ಈ ವರ್ಷ ಅತಿವೃಷ್ಠಿ ಹಾಗೂ ರೋಗದಿಂದ ಬೆಳೆ ನಾಶವಾಗಿ ಸುಮಾರು 8-10 ಕ್ವಿಂಟಲ್ ಬದಲು ಕೇವಲ 2-3 ಕ್ವಿಂಟಲ್ ಬರುತ್ತಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದು, ತಾವು ಸರಕಾರಕ್ಕೆ ಒತ್ತಾಯ ಮಾಡಿ ಪರಿಹಾರ ಒದಗಿಸಬೇಕು. ರೈತರು ಸಾಲ-ಸೂಲ ಮಾಡಿ ಬೆಳೆವಿಮೆ ಕಟ್ಟಿದ್ದಾರೆ. ಆದರೆ, ಸಂಕಷ್ಟದಲ್ಲಿರುವ ರೈತರಿಗೆ ಕಡಲೇ ವಿಮೆ ಪಾವತಿಗೆ ಕ್ರಮ ವಹಿಸಬೇಕು. ಕಳೆದ ಸಾಲಿನಲ್ಲಿ ಬಾಕಿ ಉಳಿದಿರುವ ವಿಮೆ ಹಣ ಸಹ ಜಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಮಸ್ಯೆಗಳಿಗೆ ಒಂದು ವಾರದಲ್ಲಿ ಸ್ಪಂದಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಶ್ರೀಮಂತ ಬಿರಾದಾರ, ದಯಾನಂದ ಸ್ವಾಮಿ ಸಿರ್ಸಿ, ಶಂಕ್ರೆಪ್ಪ ಪಾರಾ, ಬಾಬುರಾವ ಜೋಳದಾಬಕ, ಪ್ರವೀಣ ಕುಲಕಣಿ, ನಾಗಯ್ಯ ಸ್ವಾಮಿ ಇದ್ದರು.