ಹೊಸದಿಲ್ಲಿ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಿರುವುದರಿಂದ ಕ್ರಿಕೆಟಿಗೂ ಹೊಡೆತ ಬಿದ್ದಿದೆ. ಕೇಂದ್ರ ಸರಕಾರದ ಭದ್ರತಾ ಸಲಹೆಯಂತೆ ರಾಜ್ಯದಿಂದ ಶೀಘ್ರವೇ ತೆರಳುವಂತೆ ಭಾರತ ತಂಡದ ಆಲ್‌ರೌಂಡರ್ ಇರ್ಫಾನ್ ಪಠಾಣ್ ಮತ್ತು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಬೆಂಬಲ ಸಿಬಂದಿಗಳಿಗೆ ಮನವಿ ಮಾಡಲಾಗಿದೆ.
ಪಠಾಣ್ ಜಮ್ಮು ಮತ್ತು ಕಾಶ್ಮೀರ ತಂಡದ ಆಟಗಾರ ಮತ್ತು ಮೆಂಟರ್ ಆಗಿದ್ದಾರೆ. ಅವರ ಸಹಿತ ಕೋಚ್ ಮಿಲಾಪ್ ಮೆವಾಡ ಮತ್ತು ಟ್ರೈನರ್ ಸುದರ್ಶನ್ ವಿ.ಪಿ. ಅವರು ಶೀಘ್ರ ಅಲ್ಲಿಂದ ವಾಪಸಾಗಲಿದ್ದಾರೆ.
“ಹೌದು, ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಶನ್ (ಜೆಕೆಸಿಎ) ಈಗಾಗಲೇ ಕಾಶ್ಮೀರ ತೊರೆಯುವಂತೆ ಪಠಾಣ್ ಮತ್ತು ಇತರ ಬೆಂಬಲ ಸಿಬಂದಿಗಳಿಗೆ ಸಲಹೆ ಮಾಡಿದೆ. ಅವರೆಲ್ಲ ಸಾಧ್ಯವಾದಷ್ಟು ಬೇಗ ಕಾಶ್ಮೀರದಿಂದ ಹೊರಡಲಿದ್ದಾರೆ. ರಾಜ್ಯ ಕ್ರಿಕೆಟಿಗರನ್ನು ಹೊರತುಪಡಿಸಿ ಉಳಿದ ಆಟಗಾರರ್ಯಾರಾದರೂ ಇದ್ದರೆ ಕಾಶ್ಮೀರದಿಂದ ತೆರಳುವಂತೆ ಸೂಚಿಸಲಾಗಿದೆ’ ಎಂದು ಜೆಕೆಸಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಯ್ಯದ್ ಆಶಿಕ್ ಹುಸೈನ್ ಬುಕಾರಿ ಹೇಳಿದ್ದಾರೆ.
ಕ್ರಿಕೆಟ್ ಸಿದ್ಧತೆಗೆ ಹೊಡೆತ
ಮೆಂಟರ್ ಮತ್ತು ಬೆಂಬಲ ಸಿಬಂದಿಗಳ ನಿರ್ಗಮನದಿಂದ ಜಮ್ಮು ಮತ್ತು ಕಾಶ್ಮೀರ ತಂಡದ ಮುಂಬರುವ ದೇಶಿ ಋತುವಿನ ಸಿದ್ಧತೆಗೆ ದೊಡ್ಡ ಹೊಡೆತ ಬೀಳಲಿದೆ. ಆ. 17ರಿಂದ ದುಲೀಪ್ ಟ್ರೋಫಿ ಆರಂಭವಾಗಲಿದೆ. ಆಬಳಿಕ ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ಆರಂಭವಾಗಲಿವೆ.
ರಾಜ್ಯದಲ್ಲಿನ ಉದ್ವಿಗ್ನ ಸ್ಥಿತಿಯಿಂದ ಜೆಕೆಸಿಎ ಎಲ್ಲ ಕ್ರಿಕೆಟ್ ಚಟುವಟಿಕೆಗಳನ್ನು ನಿಷೇಧಿಸಿದೆ. ಶ್ರೀನಗರದ ಶೇರ್-ಎ-ಕಾಶ್ಮೀರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ ವಿವಿಧ ವಯೋಮಿತಿಯ ನೂರಕ್ಕೂ ಹೆಚ್ಚಿನ ಕ್ರಿಕೆಟಿಗರನ್ನು ಮನೆಗೆ ತೆರಳುವಂತೆ ಸೂಚಿಸಿದೆ.
ನಾವು ಈಗಾಗಲೇ ನೂರಕ್ಕೂ ಹೆಚ್ಚಿನ ಆಟಗಾರರಿಗೆ ಮನೆಗೆ ತೆರಳುವಂತೆ ಸೂಚಿಸಿದ್ದೇವೆ. ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಮುಂದೆ ಏನಾಗಬಹುದು ಎಂಬುದು ತಿಳಿದಿಲ್ಲ. ಹೀಗಾಗಿ ಕ್ರಿಕೆಟಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದೂಡಿದ್ದೇವೆ ಮತ್ತು ಸರಿಯಾದ ಸಮಯಕ್ಕಾಗಿ ಕಾದು ನೋಡುತ್ತಿದ್ದೇವೆ.
-ಸಯ್ಯದ್ ಆಶಿಕ್ ಹುಸೈನ್ ಬುಕಾರಿ