Advertisement

ಮೀಸಲಾತಿ ಹೆಚ್ಚಿಸದೆ ಎಸ್‌ಟಿಗೆ ಬುಡಕಟ್ಟು ಸೇರ್ಪಡೆ ಸಲ್ಲ 

04:53 PM Sep 21, 2018 | |

ಧಾರವಾಡ: ಎಸ್‌.ಟಿ. ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇ.7 ಕ್ಕೆ ಹೆಚ್ಚು ಮಾಡದೇ ಬೇರೆ ಯಾವುದೇ ಬುಡಕಟ್ಟುಗಳನ್ನು ಎಸ್‌ಟಿಗೆ ಸೇರಿಸಬಾರದು ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಜಿಲ್ಲೆಯ ವಾಲ್ಮೀಕಿ ಸಮುದಾಯದ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದವು. ನಗರದ ಡಿಸಿ ಕಚೇರಿಯಲ್ಲಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಸದಸ್ಯರಾದ ಮಾಯಾ ಚಿಂತಾಮಣಿ ವನಾತೆ ಹಾಗೂ ಹರ್ಷದ್‌ ಬಾಯ್‌ ಚುನಿಲಾಲ್‌ ಅವರಿಗೆ ಜಿಲ್ಲೆಯ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ, ವೀರ ಸಿಂಧೂರ ಲಕ್ಷ್ಮಣ ಹೋರಾಟ ಸಮಿತಿ, ಎಸ್‌ಟಿ ನೌಕರರ ಸಂಘಗಳಿಂದ ಮನವಿ ಸಲ್ಲಿಸಲಾಯಿತು.

Advertisement

ಕರ್ನಾಟಕ ಏಕೀಕರಣಗೊಂಡ ಸಮಯದಲ್ಲಿ ರಾಜ್ಯದಲ್ಲಿ ಎಸ್‌ಟಿ ವರ್ಗದಲ್ಲಿ ಕೇವಲ ಆರು ಸಮುದಾಯಗಳಿದ್ದವು. ಈಗ 51 ಸಮುದಾಯಗಳಿವೆ. ಆದರೆ ಮೀಸಲು ಪ್ರಮಾಣ ಮಾತ್ರ ಹೆಚ್ಚಾಗಿಲ್ಲ. ಜಾತಿಗಣತಿ ವರದಿ ಬಹಿರಂಗವಾದರೆ ನಮ್ಮ ಜನಸಂಖ್ಯೆಯ ಅನುಪಾತದಲ್ಲಿ ಶೇ. 7.5ಕ್ಕಿಂತ ಅಧಿಕ ಮೀಸಲಾತಿ ಸಿಗಲು ಸಾಧ್ಯವಿದೆ. ಸದ್ಯ ಇರುವ ಸಮುದಾಯಗಳಿಗೆ ನ್ಯಾಯ ಸಿಗದಿರುವಾಗ ಹೊಸ ಹೊಸ ಜನಾಂಗಗಳನ್ನು ಸೇರ್ಪಡೆ ಮಾಡುತ್ತ ಹೋದರೆ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟು ಮಾಡಿದಂತಾಗುತ್ತದೆ. ಈಗಿನ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕು. ನಂತರ ಎಸ್‌ಟಿ ಸೇರಲು ಅರ್ಹತೆ ಹೊಂದಿರುವ ಶೋಷಿತ ಸಮುದಾಯಗಳನ್ನು ಆ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯಲ್ಲಿ ಹೆಚ್ಚಳ ಮಾಡಿ ಸೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ರವೀಂದ್ರ ಬೆಂತೂರ, ಡಾ| ತ್ಯಾಗರಾಜ, ಮಂಜುನಾಥ ಹುಡೇದ, ಮಂಜುನಾಥ ಓಲೇಕಾರ, ಬಸವರಾಜ ವಾಲೀಕಾರ, ಲಕ್ಷ್ಮಣ ಬಕ್ಕಾಯಿ, ಚಂದ್ರು ನೂಲ್ವಿ, ಮಹಾಂತೇಶ ಹವಳಣ್ಣವರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next