Advertisement

ನೇಮಕ ತಡೆಗೆ ಮನವಿ, ತಪ್ಪಿದಲ್ಲಿ  ಹೋರಾಟ ಎಚ್ಚರಿಕೆ

01:00 AM Feb 06, 2019 | Team Udayavani |

ಕಾಸರಗೋಡು: ಬಂದಡ್ಕ ಸರಕಾರಿ ಹೈಸ್ಕೂಲ್‌ನ ಕನ್ನಡ ಮಾಧ್ಯಮ ತರಗತಿಗೆ ಫಿಸಿಕಲ್‌ ಸಯನ್ಸ್‌ ವಿಭಾಗಕ್ಕೆ ಮಲಯಾಳಿ ಅಧ್ಯಾಪಿಕೆಯನ್ನು ನೇಮಿಸುವ ಕುರಿತು ಮಾಹಿತಿಯ ಹಿನ್ನೆಲೆಯಲ್ಲಿ ಮಲಯಾಳಿ ಅಧ್ಯಾಪಿಕೆಯನ್ನು ನೇಮಿಸದಂತೆ ವಿದ್ಯಾರ್ಥಿಗಳ ಹೆತ್ತವರು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆ ಪ್ರತಿನಿಧಿಗಳು ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ| ಸಜಿತ್‌ ಬಾಬು ಮತ್ತು ಶಿಕ್ಷಣ ಇಲಾಖೆಯ ಅಡ್ಮಿನಿಸ್ಟ್ರೇಶನ್‌ ಅಸಿಸ್ಟೆಂಟ್‌ ರಾಧಾಕೃಷ್ಣನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

Advertisement

ಈಗಾಗಲೇ ಹಲವು ಶಾಲೆಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮಲಯಾಳಿ ಅಧ್ಯಾಪಕರನ್ನು ನೇಮಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಪರಿಸ್ಥಿತಿ ಇದೀಗ ಬಂದಡ್ಕ ಶಾಲೆಗೂ ಬಂದಿದೆ. ಬಂದಡ್ಕ ಸರಕಾರಿ ಹೈಸ್ಕೂಲಿನ ಕನ್ನಡ ಮಾಧ್ಯಮ ಫಿಸಿಕಲ್‌ ಸಯನ್ಸ್‌ ಅಧ್ಯಾಪಕರನ್ನು ಇನ್ನೊಂದು ಶಾಲೆಗೆ ವರ್ಗಾಯಿಸಿ ಆ ಹುದ್ದೆಗೆ ಕನ್ನಡ ತಿಳಿಯದ ಮಲಯಾಳಿ ಅಧ್ಯಾಪಿಕೆಯೋರ್ವರನ್ನು ನೇಮಿಸುವ ಕುರಿತು ಮಾಹಿತಿ ಲಭಿಸಿದೆ. ಈ ಅಧ್ಯಾಪಿಕೆ ಇಲ್ಲಿ ಸೇವೆಗೆ ಸೇರ್ಪಡೆಗೊಂಡಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಸಂಕಷ್ಟಕ್ಕೆ ತುತ್ತಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಅಧ್ಯಾಪಿಕೆ ಶಾಲೆಯಲ್ಲಿ ಸೇವೆಗೆ ಸೇರ್ಪಡೆಯಾಗುವ ಮುನ್ನವೇ ಎಚ್ಚೆತ್ತುಕೊಂಡ ಸ್ಥಳೀಯರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಕನ್ನಡ ತಿಳಿಯದ ಅಧ್ಯಾಪಿಕೆಯನ್ನು ನೇಮಿಸದಂತೆ  ತಡೆಹಿಡಿಯಬೇಕೆಂದು ವಿನಂತಿಸಿದ್ದಾರೆ.

ಹಿಂದುಳಿದ ಪ್ರದೇಶ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಹಿಂದುಳಿದ ವಿಭಾಗದ ಬಡ ಕನ್ನಡಿಗರ ಮಕ್ಕಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಿಯುತ್ತಿದ್ದಾರೆ. ಸಾರ್ವಜನಿಕ ಪರೀಕ್ಷೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಭವಿಷ್ಯದ ಮೇಲೆ ಇದು ತೀವ್ರ ಪರಿಣಾಮ ಬೀರಲಿದೆ. ಆದುದರಿಂದ ಪ್ರಸ್ತುತ ಶಾಲೆಗೆ ಫಿಸಿಕಲ್‌ ಸಯನ್ಸ್‌ ಹುದ್ದೆಗೆ ಕನ್ನಡ ಬಲ್ಲ ಅಧ್ಯಾಪಕರನ್ನೇ ನೇಮಿಸಬೇಕೆಂದು ವಿನಂತಿಸಿದ್ದಾರೆ.

ಮನವಿಗೆ ಸ್ಪಂದನೆ  
ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆಯ ಆಡ್ಮಿನಿ ಸ್ಟ್ರೇಶನ್‌ ಅಸಿಸ್ಟೆಂಟ್‌ ರಾಧಾಕೃಷ್ಣನ್‌ ಅವರು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಎದುರಿಸಬೇಕಾದ ಸಮಸ್ಯೆಗಳನ್ನು ಅರ್ಥೈಸಿಕೊಂಡು ಶಾಲೆಗೆ ಮಲಯಾಳಿ ಅಧ್ಯಾಪಿಕೆಯನ್ನು ಕಳುಹಿಸುವುದಿಲ್ಲವೆಂದು ಭರವಸೆ ನೀಡಿದ್ದಾರೆ. ಅಲ್ಲದೇ ಈ ಶಾಲೆಯಲ್ಲಿ ಇದೀಗ ತಾತ್ಕಾಲಿಕವಾಗಿ ದುಡಿಯುತ್ತಿರುವ ಅಧ್ಯಾಪಕರನ್ನು ಮುಂದುವರಿಸುವುದಾಗಿಯೂ ಹೇಳಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ  
ಭಾಷಾ ಅಲ್ಪಸಂಖ್ಯಾಕ‌ ಪ್ರದೇಶ ಕಾಸರಗೋಡಿನಲ್ಲಿ ಕನ್ನಡಿಗರಿಗೆ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿರುವಂತೆಯೇ ಕನ್ನಡ ತಿಳಿಯದ ಮಲಯಾಳಿ ಅಧ್ಯಾಪಿಕೆಯನ್ನು ಬಂದಡ್ಕ ಸರಕಾರಿ ಹೈಸ್ಕೂಲ್‌ನ ಕನ್ನಡ ಮಾಧ್ಯಮ ಫಿಸಿಕಲ್‌ ಸಯನ್ಸ್‌ ವಿಭಾಗಕ್ಕೆ ನೇಮಿಸುವ ಕುರಿತು ಮಾಹಿತಿ ಲಭಿಸಿದ್ದು ಇದರಿಂದ ಕನ್ನಡ ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಲಿದ್ದಾರೆ. ಈ ಕಾರಣದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ತಿಳಿಯದ ಮಲಯಾಳಿ ಅಧ್ಯಾಪಿಕೆಯನ್ನು ನೇಮಿಸದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು. 

Advertisement

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ| ಸಜಿತ್‌ಬಾಬು ಅವರು ಡಿ.ಡಿ.ಇ. ಡಾ| ಗಿರೀಶ್‌ ಚೋಲಯಿಲ್‌ ಅವರೊಂದಿಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ತೀವ್ರ ಹೋರಾಟ 
ಮನವಿಗೆ ಸ್ಪಂದಿಸಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ತಿಳಿಯದ ಮಲಯಾಳಿ ಅಧ್ಯಾಪಿಕೆಯನ್ನು ನೇಮಿಸುವುದಿಲ್ಲ ಎಂದು ಆಡ್ಮಿನಿಸ್ಟ್ರೇಶನ್‌ ಅಸಿಸ್ಟೆಂಟ್‌ ರಾಧಾಕೃಷ್ಣನ್‌ ಅವರು ನೀಡಿದ ಭರವಸೆಯನ್ನು ಪಾಲಿಸದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು. ಅಗತ್ಯವಿದ್ದಲ್ಲಿ ತೀವ್ರ ಹೋರಾಟ ನಡೆಸಲು ಬಂದಡ್ಕದ ಕನ್ನಡಿಗರು ಸಿದ್ಧರಾಗಿದ್ದಾರೆ. 
-ಪುರುಷೋತ್ತಮ ಬೊಡ್ಡನಕೊಚ್ಚಿ  ಅಧ್ಯಕ್ಷ,, ಗಡಿನಾಡ ಕನ್ನಡ ಸಂಘ, ಬಂದಡ್ಕ ಘಟಕ 

ಪೂರ್ಣ ಬೆಂಬಲ 
 ಮಲಯಾಳಿ ಅಧ್ಯಾಪಿಕೆಯನ್ನು ನೇಮಿಸಿದ್ದಲ್ಲಿ  ಎಂದಿನಂತೆ ತೀವ್ರ ಹೋರಾಟ ನಡೆಸಲಾಗುವುದು. ಇದೇ ನೀತಿಯನ್ನು ಬಂದಡ್ಕ ಶಾಲೆಗೂ ಅನ್ವಯಿಸಲಾಗುವುದು. ಬಂದಡ್ಕದ ಕನ್ನಡಿಗರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಲ್ಲದೆ ಮುಂಚೂಣಿಯಲ್ಲಿರುತ್ತೇವೆ.
– ಕೆ. ಭಾಸ್ಕರ ಪ್ರಧಾನ ಕಾರ್ಯದರ್ಶಿ ಕನ್ನಡ ಹೋರಾಟ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next