ಹಾವೇರಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಹಾಗೂ ನೌಕರರ ಹೋರಾಟ ಸಮಿತಿ ಜಿಲ್ಲಾಧಿಕಾರಿ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿತು.
1995ರ ನಂತರ ಪ್ರಾರಂಭವಾದ ಶಾಲೆ, ಕಾಲೇಜುಗಳಿಗೆ ಅನುದಾನ ನೀಡಬೇಕು. ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಕಾಲ್ಪನಿಕ ವೇತನ ಬಡ್ತಿ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕು. ಅನುದಾನಿತ ಪ್ರೌಢಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು. ಜ್ಯೋತಿ ಸಂಜೀವಿನಿ ಅನದಾನಿತ ಶಾಲಾ ಕಾಲೇಜುಗಳ ನೌಕರರಿಗೆ ಜಾರಿಗೊಳಿಸಬೇಕು. ಶಿಕ್ಷಕರ ಮತ್ತು ಮಕ್ಕಳ ಅನುಪಾತ 1:50 ಜಾರಿಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಕಾರ್ಯಾಧ್ಯಕ್ಷ ಎಸ್.ಎಸ್. ಬೇವಿನಮರದ ಮಾತನಾಡಿ, ಕಳೆದ ದಶಕಗಳಿಂದ ರಾಜ್ಯದ ಸರ್ಕಾರಿ ಖಾಸಗಿ ಅನುದಾನಿತ, ಅನುದಾನ ರಹಿತ ಶಾಲಾ, ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು, ವಿದ್ಯಾರ್ಥಿಗಳು ಹಾಗೂ ಸಂಸ್ಥೆ ಆಡಳಿತ ಮಂಡಳಿಯವರು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಅನೇಕ ಭಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು ಸೂಕ್ತ ಸ್ಪಂದನೆ ದೊರಕದೇ ನಮ್ಮೇಲ್ಲ ಬೇಡಿಕೆಗಳು ಇನ್ನೂ ಭರವಸೆಗಳಾಗಿಯೇ ಉಳಿದಿವೆ ಎಂದು ದೂರಿದರು.
ನಮ್ಮ ಸಮಸ್ಯೆಗಳ ತೀವ್ರತೆ ಅರಿತು 2017ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳು ಸಭೆ ಕರೆದು ಚರ್ಚಿಸಿ ಕೆಲವು ಬೇಡಿಕೆ ಈಡೇರಿಸಿದ್ದರು. ಆದರೆ ಪ್ರಮುಖ ಬೇಡಿಕೆಗಳಿಗೆ ಇನ್ನು ಪರಿಹಾರ ದೊರಕದೇ ನೌಕರರು, ಶಿಕ್ಷಣ ಸಂಸ್ಥೆಗಳು ಸಮಸ್ಯೆಯಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎಚ್.ಪಿ.ಬಣಕಾರ, ತಾಲೂಕು ಅಧ್ಯಕ್ಷ ಎಂ.ಬಿ.ರಮೇಶ, ಎನ್.ಎನ್. ಕುಂದೂರ, ಎಂ.ಎಸ್. ಬಿಷ್ಟನಗೌಡ್ರ, ಸುನೀಲ ಮಳೆಪ್ಪನವರ, ಎಂ.ಪಿ. ನವಲೆ ಇದ್ದರು.