ಶ್ರೀರಂಗಪಟ್ಟಣ: ತಾಲೂಕಿನ ದಲಿತ ಕೇರಿಗಳ ಸಮಸ್ಯೆ ಆಲಿಸಲು ಡಿವೈಎಸ್ಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ದಲಿತ ಮುಖಂಡರೊಂದಿಗೆ ಕುಂದುಕೊರತೆ ಸಭೆ ನಡೆಯಿತು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ದಲಿತ ಸಂಘಟನೆಗಳ ಮುಖಂಡರು ಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು. ತಾಲೂಕಿನ ಗೌರಿಪುರದ ಮನೆಯಲ್ಲಿ ಕಳ್ಳರು ಕುರಿ, ಕೋಳಿ, ಮತ್ತಿತರ ವಸ್ತು ಕಳ್ಳತನ ಮಾಡುತ್ತಿದ್ದಾರೆ. ಜತೆಗೆ ಗ್ರಾಮದ ಬಳಿ ಇರುವ ನಾಲೆ ಏರಿ ಮೇಲೆ ಪುಂಡು ಪೋಕರಿಗಳಿಂದ ಅಕ್ರಮ ಜೂಜಾಟ ನಡೆಯುತ್ತಿದ್ದು ಪೊಲೀಸರು ಗಮನಹರಿಸಬೇಕು ಎಂದು ಗ್ರಾಮದ ಮಹಿಳೆಯೊಬ್ಬರು ಸಭೆಯಲ್ಲಿ ಸಮಸ್ಯೆ ಹೇಳಿ ಕೊಂಡರು. ಕರೀಘಟ್ಟ ದೇವಾಲಯದ ಬಳಿ ಪ್ರತಿ ಶನಿವಾರ ಭಾನುವಾರ ಎಲ್ಲಿಂದಲೋ ಅನೇಕ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರವಾಸಕ್ಕೆ ಬೈಕ್‌ನಲ್ಲಿ ಬಂದ ದೇವಾಲಯ ಎನ್ನದೆ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಶೆಟ್ಟಹಳ್ಳಿ ಸುರೇಶ್ ಪೊಲೀಸರಿಗೆ ತಿಳಿಸಿದರು.
ಪ್ರತಿ ದಿನ ಹೆದ್ದಾರಿಯಲ್ಲಿ ಹೋಗುವ ಜಲ್ಲಿಪುಡಿ ತುಂಬಿದ ಟಿಪ್ಪರ್, ಲಾರಿಗಳ ಮೇಲೆ ಮುಚ್ಚದೆ ಗಾಳಿಯಲ್ಲಿ ಬೀಸಿದ ದೂಳಿನ ಕಣಗಳು ರಸ್ತೆಯಲ್ಲಿ ಹೋಗುವ ಜನರ ಕಣ್ಣಿಗೆ ಬಿದ್ದು ಹಾನಿಯಾಗುತ್ತಿದೆ. ಈ ಬಗ್ಗೆ ಲಾರಿ ಚಾಲಕರು ಡಸ್ಟ್ ತುಂಬಿ ಹೋಗುವಾಗ ಟಾರ್ಪಲ್ ಮುಚ್ಚಬೇಕೆಂದು ಡಿವೈಎಸ್ಪಿ ಅವರಿಗೆ ಮುಂಡುಗದೊರೆ ಮೋಹನ ಮನವಿ ಮಾಡಿದರು.
ಆಗ್ರಹ: ಪ್ರತಿ ಠಾಣಾ ವ್ಯಾಪ್ತಿಯಲ್ಲಿ ದಲಿತರ ಸಮಸ್ಯೆ ಆಲಿಸಲು ಸಭೆ ಕರೆಯಲು ತಿಳಿಸಬೇಕು ಎಂದು ದಲಿತ ಮುಖಂಡ ಮಹದೇವಸ್ವಾಮಿ ಮನವಿ ಮಾಡಿದರು. ದೊಡ್ಡಪಾಳ್ಯ ಗ್ರಾಮದ ಶಾಲೆಯಲ್ಲಿ ಕಳೆದ 3 ವರ್ಷದಿಂದ 9 ಬಾರಿ ಕಳ್ಳತನ ಮಾಡಲಾಗಿದ್ದು ಕಳ್ಳರು ಯಾರು ಎಂಬುದೇ ಇನ್ನು ಪತ್ತೆಯಾಗಿಲ್ಲ. ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಮುಖಂಡರು ಆಗ್ರಹಿಸಿದರು.
ಸೂಚನೆ ನೀಡುತ್ತೇನೆ: ಹಲವು ಗ್ರಾಮಗಳಿಂದ ಬಂದಿದ್ದ ದಲಿತ ಮುಖಂಡರ ಸಮಸ್ಯೆ ಆಲಿಸಿದ ಡಿವೈಎಸ್ಪಿ ಅರುಣ್‌ನಾಗೇಗೌಡ, ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆ ಹರಿಸಲು ಪೊಲೀಸರಿಗೆ ಸೂಚಿಸಿದರು. ಇನ್ನು ಉಳಿದ ಸಮಸ್ಯೆ ವರದಿ ಮಾಡಿ ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆಯಲು ಸೂಚಿಸಿ ರಸ್ತೆಯಲ್ಲಿ ಡಸ್ಟ್ ತುಂಬಿದ ಟಿಪ್ಪರ್ ಲಾರಿಗಳಿಂದ ರಸ್ತೆಯಲ್ಲಿ ಹೋಗುವ ಪಾದಚಾರಿಗಳಿಗಾಗುವ ಅನಾನುಕೂಲ ತಡೆಯಲು ಸಂಚಾರ ಪೊಲೀಸರಿಗೆ ಸೂಚನೆ ನೀಡಲಾಗುವುದೆಂದರು.
ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು, ರವಿಚಂದ್ರ, ನಗುವನಹಳ್ಳಿ ಮಹದೇವಸ್ವಾಮಿ , ಹೊನ್ನಯ್ಯ ಮತ್ತಿತರರಿದ್ದರು.