Advertisement

ಶಾಸಕ ಕಾಮತ್‌ ಅವರಿಂದ ಸಿಎಂಗೆ ಮನವಿ

12:36 PM Sep 10, 2018 | Team Udayavani |

ಮಹಾನಗರ: ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಮುಖ್ಯಮಂತ್ರಿ ಎಚ್‌.ಡಿ . ಕುಮಾರಸ್ವಾಮಿಯವರಿಗೆ ನಗರದಲ್ಲಿ ಲಿಖೀತ ಮನವಿ ಸಲ್ಲಿಸಿದರು.

Advertisement

ಸ್ಮಾರ್ಟ್‌ಸಿಟಿ ಯೋಜನೆಗೆ ವೇಗ ನೀಡಬೇಕು ಹಾಗೂ ಕಾಲಮಿತಿಯಡಿ ಯೋಜನೆ ಪೂರ್ಣಗೊಳಿಸಬೇಕು, ಪೂರ್ಣ ಪ್ರಮಾಣದ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಬೇಕು, ಮಲ್ಟಿಲೇವಲ್‌ ಕಾರು ಪಾರ್ಕಿಂಗ್‌, ಮಾರುಕಟ್ಟೆಗಳ ನಿರ್ಮಾಣ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಮಂಗಳೂರು ನಗರ ದಕ್ಷಿಣದಲ್ಲಿ ಮನೆಗಳು, ಕಟ್ಟಡಗಳು ಹಾಗೂ ಸಾರ್ವಜನಿಕ ಸ್ವತ್ತುಗಳಿಗೆ ಅಪಾರ ಹಾನಿ ಸಂಭವಿಸಿದೆ. ಸುಮಾರು 50 ಕೋಟಿ ರೂಪಾಯಿ ನಷ್ಟದ ಅಂದಾಜು ಮಾಡಲಾಗಿದೆ. ಇದರೊಂದಿಗೆ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ, ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಉತ್ಸವ ಮತ್ತು ಸಂಚಾರಕ್ಕೆ ರಸ್ತೆಗಳಲ್ಲಿ ಬಿದ್ದಿರುವ ಹೊಂಡ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಳ್ಳಲು ಕೂಡ ಅನುದಾನದ ಬಿಡುಗಡೆ ಮಾಡಲೇಬೇಕಿದೆ.

ಈ ಎಲ್ಲ ಕಾಮಗಾರಿಗಳಿಗೆ ಕನಿಷ್ಠ 50 ಕೋಟಿ ರೂ. ತತ್‌ಕ್ಷಣ ಬಿಡುಗಡೆ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿ ಒಟ್ಟು ಇರಬೇಕಾಗಿರುವ ಸಿಬಂದಿ ಸಂಖ್ಯೆ 1,725. ಆದರೆ ಅದರಲ್ಲಿ 1,084 ಹುದ್ದೆಗಳು ಖಾಲಿ ಇವೆ. ಕೂಡಲೇ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಮಹಾಕಾಳಿಪಡ್ಪು  ಪ್ರದೇಶದಲ್ಲಿ ರೈಲ್ವೆ ಇಲಾಖೆಯಿಂದ ಜಿಎಡಿ ನಕ್ಷೆ ಅನುಮೋದನೆಗೊಂಡಿದ್ದು ರೈಲ್ವೇ ಕೆಳಸೇತುವೆಯ ನಿರ್ಮಾಣಕ್ಕೆ ರಾಜ್ಯ ಸರಕಾರದ ಪಾಲು ಇಪ್ಪತ್ತು ಕೋಟಿ ರೂಪಾಯಿಯನ್ನು ಆದಷ್ಟು ಶೀಘ್ರ ಮಂಜೂರು ಮಾಡಿದರೆ ಸಂಚಾರಕ್ಕೆ ಅನುಕೂಲವಾಗುತ್ತದೆ. 

ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳನ್ನು ಹೆಚ್ಚಿಸಬೇಕು, ಆರೋಗ್ಯ ಕರ್ನಾಟಕ ಯೋಜನೆಗೆ ಹೆಚ್ಚುವರಿ ಕೌಂಟರ್‌ ತೆರೆಯಬೇಕು. ಯಾಂತ್ರೀಕೃತ ನಾಡದೋಣಿಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಕ ಸೀಮೆ ಎಣ್ಣೆಯನ್ನು ಪೂರೈಸಲಾಗುತ್ತಿತ್ತು. ಆದರೆ ಈ ಬಾರಿ ಅದನ್ನು ಮೀನುಗಾರಿಕಾ ಇಲಾಖೆಯ ಮೂಲಕ ನೀಡಲಾಗುತ್ತಿದೆ. ಈಗಾಗಲೇ ಮೀನುಗಾರಿಕಾ ಇಲಾಖೆಗೆ ನೀಡಿರುವ ಅನುದಾನವನ್ನು ರಾಜ್ಯ ಸರಕಾರ ಕಡಿತ ಮಾಡಿರುವುದರಿಂದ ಮೀನುಗಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆ ಸರಿಪಡಿಸಬೇಕು. ಕಂದಾಯ ಇಲಾಖೆಯಲ್ಲಿ ಕೆಲವು ನಿಯಮಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ನಿವಾರಿಸಬೇಕು ಎಂದವರು ಕೋರಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next