Advertisement

ಸಮಾಜ ಸುಧಾರಣೆಗೆ ಅಪ್ಪಣ್ಣ ಕೊಡುಗೆ ಅಪಾರ

12:29 PM Jul 31, 2019 | Suhan S |

ಹಾವೇರಿ:ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಮುಂದಾದ ಮಹಾನ್‌ ವ್ಯಕ್ತಿ ಎಂದು ಗದುಗಿನ ಕನ್ನಡ ಉಪನ್ಯಾಸಕಿ ಗುರಬಸಮ್ಮ ಕಾಯಕದ ಹೇಳಿದರು.

Advertisement

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಮಂಗಳವಾರ ನಗರದ ಜಿಲ್ಲಾ ಗುರುಭವನದಲ್ಲಿ ಆಯೋಜಿಸಲಾಗಿದ್ದ ಶಿವಶರಣ ಶ್ರೀಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕೆಲ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಶ್ರಮಿಸಿದರು. ಅವರ ವಚನಗಳು ಸಮಾಜಕ್ಕೆ ಮಾರ್ಗದರ್ಶಕವಾಗಿ, ಹಡಪದ ಅಪ್ಪಣ್ಣ ಅವರು ಸದಾ ಸ್ಮರಣೀಯರು. ಅವರು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್‌ ಪುರುಷ ಎಂದರು.

ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಶಿವಶರಣ ಹಡಪದ ಅಪ್ಪಣ್ಣ ಅವರ ಬದುಕು ಕುರಿತು ಎಲ್ಲರೂ ತಿಳಿಸಿದುಕೊಳ್ಳಬೇಕು. ಸಮಾಜ ಬಾಂಧವರು ಸಾಮಾಜಿಕವಾಗಿ, ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಯಬೇಕು ಹಾಗೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಕೆಎಎಸ್‌ ಹಾಗೂ ಐಎಎಸ್‌ ಅಧಿಕಾರಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.

ತಹಶೀಲ್ದಾರ್‌ ಶಿವಕುಮಾರ ಮಾತನಾಡಿ, ಶಿವಶರಣ ಶ್ರೀಹಡಪದ ಅಪ್ಪಣ್ಣ ಗೃಹಸ್ಥಾಶ್ರಮದಲ್ಲಿದ್ದು ಮುಕ್ತಿಹೊಂದಿದ ಮಹಾನ್‌ ಪುರುಷ. ಇಂತಹ ಶರಣರ ತತ್ವ ಸಿದ್ಧಾಂತಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ ಎಂದರು.

Advertisement

ಮಾಜಿ ಸೈನಿಕ ಚಂದ್ರಶೇಖರ ಶಿಶುವಿನಹಳ್ಳಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಅನೇಕ ಶರಣರು ಸಮಾಜದಲ್ಲಿನ ಜಾತಿ ಪದ್ಧತಿ ಹಾಗೂ ಮೇಲು ಕೀಳೆಂಬ ತಾರತಮ್ಯ ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಇಂಥ ಮಹಾನ್‌ ಪುರುಷರು ಒಂದು ಸಮುದಾಯಕ್ಕೆ ಸೀಮಿತರಾಗಿಲ್ಲ. ಎಲ್ಲ ಸಮುದಾಯದವರು ಇಂತಹ ಮಹಾನ್‌ ಪುರುಷರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಮಾಲತೇಶ ನರೇಗಲ್ ಮಾತನಾಡಿದರು. ಹುಕ್ಕೆರಿಮಠದ ಸದಾಶಿವ ಸ್ವಾಮೀಜಿ, ತಂಗಡಗಿ ಶಿವಶರಣ ಶ್ರೀಹಡಪದ ಅಪ್ಪಣ್ಣ ಮಹಾಸಂಸ್ಥಾನಮಠದ ಅನ್ನದಾನಿ ಭಾರತಿ ಸ್ವಾಮೀಜಿ ಹಾಗೂ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಇದ್ದರು. ಇದೇ ಸಂದರ್ಭದಲ್ಲಿ ‘ವಚನಾಮೃತ’ ಎಂಬ ಕಿರುಪುಸ್ತಕ ಹಾಗೂ ಶಿವಶರಣ ಹಡಪದ ಅಪ್ಪಣ್ಣವರ ಭಾವಚಿತ್ರವಿರುವ ಸ್ಟಿಕ್ಕರ್‌ನ್ನು ಬಿಡುಗಡೆಗೊಳಿಸಲಾಯಿತು ಹಾಗೂ ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಗುಡ್ಡಪ್ಪ ಮಲ್ಲೂರ ಹಾಗೂ ತಾಲೂಕು ಅಧ್ಯಕ್ಷ ಬಸವರಾಜ ದೊಡ್ಡಮನಿ ಹಾಗೂ ಸಿದ್ದಪ್ಪ ಹಡಪದ, ನಿಂಗಪ್ಪ ದೇವಗಿರಿ, ವೀರಣ್ಣ ಇತರರು ಇದ್ದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಶಿವಶರಣ ಶ್ರೀಹಡಪದ ಅಪ್ಪಣ್ಣ ಅವರ ಭಾವಚಿತ್ರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next