ಕೊರಟಗೆರೆ: ದೋಷಮುಕ್ತ ಭಾವಚಿತ್ರವಿರುವ ಪರಿಷ್ಕರಣೆಗೊಂಡ ಮತದಾರರ ಗುರುತಿನ ಚೀಟಿ ಪಡೆಯಲು ಚುನಾವಣಾ ಆಯೋಗ ನೂತನ ವೋಟರ್ ಹೆಲ್ಪ್ಲೈನ್ ಮೊಬೈಲ್ ಆ್ಯಪ್ ಪರಿಚಯಿಸಿದೆ ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಶೇಷ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಐಒಎಸ್ ಪ್ಲೇ ಸ್ಟೋರ್‌ಗಳಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿ ಕೊಂಡು ಮತದಾರರ ಪಟ್ಟಿಯಲ್ಲಿ ಮಾಹಿತಿ ಪರಿಶೀಲಿಸುವುದು, ಹೆಸರು ನೋಂದಣಿ ಸೇರಿ ಹೆಸರು, ವಿಳಾಸ, ವಯಸ್ಸು ಇನ್ನಿತರ ಮಾಹಿತಿಗಳು ತಪ್ಪಿದ್ದಲ್ಲಿ ತಿದ್ದುಪಡಿ ಮಾಡಿಸಬಹುದು. ಕಾಲೇಜು ಗಳ ಪ್ರಾಂಶುಪಾಲರು ವ್ಯಾಪ್ತಿಯಲ್ಲಿನ 18 ವರ್ಷ ತುಂಬಿದ ವಿದ್ಯಾರ್ಥಿಗಳನ್ನು ಗುರುತಿಸಿ ನೋಂದಾ ಯಿಸುವುದು ಹಾಗೂ ನೋಂದಾಯಿತ ವಿದ್ಯಾರ್ಥಿಗಳ ಎಪಿಕ್ ಸಂಖ್ಯೆ ಪೋರ್ಟಲ್‌ನಲ್ಲಿ ದೃಢೀಕರಿಸಬೇಕು ಎಂದು ತಿಳಿಸಿದರು.
ಪಟ್ಟಿಯಲ್ಲಿನ ಮಾಹಿತಿ ಪರಿಶೀಲನೆ, ಅಧಿಕೃತ ಗೊಳಿಸಲು ಹಾಗೂ ತಿದ್ದುಪಡಿ ಮಾಡಲು, ತೆಗೆದುಹಾಕಲು, ವರ್ಗಾವಣೆ ಮಾಡಲು, ಅಲ್ಲದೆ ಕುಟುಂಬದಲ್ಲಿರುವ ಇತರೆ ಮತದಾರರನ್ನು ಒಂದು ಭಾಗಕ್ಕೆ ಸೇರ್ಪಡಿಸುವ ಮಹತ್ವಾಕಾಂಕ್ಷೆಯಿಂದ ಆ್ಯಪ್ ಪರಿಚಯಿಸಿದ್ದು, ಆನ್‌ಲೈನ್ ಮೂಲಕ ಸಾರ್ವಜನಿಕರು ಅಗತ್ಯ ದಾಖಲೆ ಸಲ್ಲಿಸಲು ಅವಕಾಶವಿದೆ.
ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಿಸುತ್ತಿದ್ದು, ಮತದಾರರು ಹೆಸರು ನೋಂದಣಿ ಮಾಡಿಸಿ, ತಿದ್ದುಪಡಿಗೆ ಅಗತ್ಯ ದಾಖಲೆ ಹಾಗೂ ಮಾಹಿತಿ ನೀಡಿ ದೋಷ ರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಮನವಿ
ಮಾಡಿದರು. ಕಾಲೇಜು ಪ್ರಾಂಶುಪಾಲ ಡಾ. ಬಾಲಪ್ಪ, ಕಂದಾಯ ಇಲಾಖಾ ಅಧಿಕಾರಿಗಳಾದ ನರಸಿಂಹ ಮೂರ್ತಿ, ಚಿನ್ನವೀರಯ್ಯ ಇತರರಿದ್ದರು.