Advertisement

Dengue: ಡೆಂಘೀ ನಿಯಂತ್ರಣಕ್ಕೆ ಕಣ್ಗಾವಲು ಆ್ಯಪ್‌ ಸಾಥ್‌

01:12 PM Aug 22, 2023 | Team Udayavani |

ಬೆಂಗಳೂರು: ನಗರದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ನಿಯಂತ್ರಿಸಲು ಬಿಬಿಎಂಪಿ ಮುಂದಾಗಿದ್ದು, ಇದೀಗ ಕೃತಕ ಬುದ್ಧಿ ವಂತಿಕೆಯ ಕಣ್ಗಾವಲು ಆ್ಯಪ್‌ ಬಳಸಿಕೊಂಡು ಸಾಂಕ್ರಾಮಿಕ ರೋಗ ತಡೆಗೆ ಸಿದ್ಧತೆ ನಡೆಸುತ್ತಿದೆ.

Advertisement

ಕೋವಿಡ್‌ ಸಂದರ್ಭದಲ್ಲಿ ಬಳಸುತ್ತಿದ್ದ ಆರೋಗ್ಯ ಸೇತು ಆ್ಯಪ್‌ನಂತೆಯೇ ಈ ಕಣ್ಗಾವಲು ಆ್ಯಪ್‌ ಕಾರ್ಯಾಚರಿಸಲಿದೆ. ಇಲ್ಲಿ ಮಾತ್ರ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು, ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳ ಸಿಬ್ಬಂದಿಗೆ ಮಾತ್ರ ಆ್ಯಪ್‌ ಆಪ್‌ಡೇಟ್‌ ಮಾಡುವ ಅವಕಾಶವಿದೆ. ಇದರಿಂದ ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಸಮಗ್ರ ಸಾಂಕ್ರಾಮಿಕ ರೋಗಗಳ ವರದಿ ಒಂದೆಡೆ ಲಭ್ಯವಾಗಲಿದೆ.

ಮೊದಲ ಹಂತ ಡೆಂಘೀ: ಡೆಂಘೀ ಪ್ರಕರಣ ಮೊದಲ ಹಂತದಲ್ಲಿ ಟ್ರ್ಯಾಕ್‌ ಮಾಡಲು ಬಿಬಿಎಂಪಿ ಮುಂದಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ಆಶಾ, ಆರೋಗ್ಯ ಕಾರ್ಯಕರ್ತರ ಮೂಲಕ ಮನೆ ಸರ್ವೇ ಮಾಡಲಾಗುತ್ತದೆ. ಈ ವೇಳೆ ನೀರು ನಿಲುಗಡೆಯಾಗುವ ಪ್ರದೇಶಗಳು ಪತ್ತೆಯಾದರೆ, ಫೋಟೋ ಸಹಿತ ಇತರೆ ಮಾಹಿತಿ ಆ್ಯಪ್‌ಗೆ ಆಪ್‌ಲೋಡ್‌ ಮಾಡಲಿದ್ದಾರೆ. ಈ ಮಾಹಿತಿ ದೊರೆತ ತಕ್ಷಣ, ಬಿಬಿಎಂಪಿ ಸಿಬ್ಬಂದಿ ಲಾರ್ವಾ ಸ್ಥಳಕ್ಕೆ ಭೇಟಿ ನೀಡಿ, ಔಷಧ ಸಿಂಪಡಿಸಿ, ಪ್ರಾರಂಭಿಕ ಹಂತದಲ್ಲಿಯೇ ಸೊಳ್ಳೆಗಳ ಮೊಟ್ಟೆ ನಾಶ ಮಾಡಲಿದ್ದಾರೆ. ಇದರ ಫೋಟೋ ಆ್ಯಪ್‌ನಲ್ಲಿ ಆಪ್‌ಲೋಡ್‌ ಮಾಡಲಿದ್ದಾರೆ. ಅನಂತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿಯನ್ನು ಆ್ಯಪ್‌ನಲ್ಲಿ ಸಲ್ಲಿಕೆ ಮಾಡಲಿದ್ದಾರೆ. ಇಲ್ಲಿ ಪ್ರತಿಯೊಂದು ಪ್ರಕ್ರಿಯೆ ಆನ್‌ಲೈನ್‌ ಆ್ಯಪ್‌ನಲ್ಲಿ ಆಪ್‌ಲೋಡ್‌ ಆಗಲಿದೆ. ಇಷ್ಟೆಲ್ಲ ಮುನ್ನೆಚ್ಚರಿಕೆ ಕ್ರಮದ ಬಳಿಕವೂ ವಾರ್ಡ್‌ನಲ್ಲಿ ಡೆಂಘೀ ವರದಿಯಾದರೆ ಈ ಬಗ್ಗೆ ತನಿಖೆ ನಡೆಸಲಿದೆ.

ಫೀವರ್‌ ಸರ್ವೇಗೆ ಅನುಕೂಲ: ಕಣ್ಗಾವಲು ಆ್ಯಪ್‌ನಲ್ಲಿ ಫೀವರ್‌ ಸರ್ವೇಗೂ ಅವಕಾಶ ಕಲ್ಪಿಸಲಾಗಿದೆ. ವಾರ್ಡ್‌ನಲ್ಲಿ ಜ್ವರದ ಪ್ರಕರಣಗಳ ರಕ್ತದ ಮಾದರಿ ಸಂಗ್ರಹಿಸಲಾಗುತ್ತದೆ. ಇದನ್ನು ಸಮೀಪದ ಖಾಸಗಿ, ಪಿಎಚ್‌ಸಿ ಅಥವಾ ಸಾರ್ವಜನಿಕ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ. ಈ ವರದಿಯನ್ನು ಆಯಾ ಲ್ಯಾಬ್‌ ಸಿಬ್ಬಂದಿ ಕಣ್ಗಾವಲು ಆ್ಯಪ್‌ಗೆ ಆಪ್‌ಲೋಡ್‌ ಮಾಡಬೇಕು. ಆ ಮೂಲಕ ಡೆಂಘೀ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ದೃಢಗೊಂಡು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಯ ಮಾಹಿತಿ ಈ ಆ್ಯಪ್‌ನಲ್ಲಿ ಲಭ್ಯವಾಗಲಿದೆ.

ಡೆಂಘೀ ಅಧ್ಯಯನ ವರದಿ!: ಪ್ರಸ್ತುತ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್‌ ಎಐ ಮತ್ತು ರೊಬೊಟಿಕ್ಸ್‌ ಟೆಕ್ನಾಲಜಿ ಪಾರ್ಕ್‌ ತಂಡ ಈಗಾಗಲೇ ಕಡಿಮೆ ಹಾಗೂ ಹೆಚ್ಚು ಮಳೆಯಾಗುವ ಪ್ರದೇಶಗಳ ಬಗ್ಗೆ ಅಧ್ಯಯನ ನಡೆಸಿ, ಮುಂದೆ ಎಲ್ಲೆಲ್ಲಿ ಡೆಂಘೀ ವರದಿಯಾಗಲಿದೆ, ಯಾವ ಪ್ರದೇಶದಲ್ಲಿ ಡೆಂಘೀ ಸ್ಫೋಟಗೊಳ್ಳಲಿದೆ ಎನ್ನುವ ಸಂಪೂರ್ಣ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಮುಂದಿನ 15 ದಿನಗಳಲ್ಲಿ ಐಎ ವರದಿಯನ್ನು ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿ ವರದಿ ಬಿಡುಗಡೆ ಮಾಡಲಿದೆ.

Advertisement

ಮುಂದೆ ಆ್ಯಪ್‌ ಅಭಿವೃದ್ಧಿ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್‌ ಎಐ ಮತ್ತು ರೊಬೊಟಿಕ್ಸ್‌ ಟೆಕ್ನಾಲಜಿ ಪಾರ್ಕ್‌ನ 6 ರಿಂದ 8 ಮಂದಿಯ ತಂಡ ಕಣ್ಗಾವಲು ಅಭಿವೃದ್ಧಿ ಪಡಿಸಿದೆ.

ಆ್ಯಪ್‌ ಪ್ರಾಯೋಗಿಕ ಹಂತವಾಗಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗಿದೆ. ಆ್ಯಪ್‌ ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಜತೆಗೆ ಈಗಾಗಲೇ ಡೆಂಘೀ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಸಲ್ಲಿಸಲಾಗಿದೆ. -ಭಾಸ್ಕರ್‌ ರಾಜಕುಮಾರ್‌,  ಆರೋಗ್ಯ ನಿರ್ದೇಶಕ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್  ಆರ್ಟ್‌ಪಾಕ್‌

8 ತಿಂಗಳಲ್ಲಿ 3,454 ಮಂದಿಗೆ ಡೆಂಘೀ

ಬಿಬಿಎಂಪಿ ವ್ಯಾಪ್ತಿಯಲ್ಲಿ 2023ರ ಜನವರಿಯಿಂದ ಆ.18ರ ವರೆಗೆ 7,867 ಶಂಕಿತ ವ್ಯಕ್ತಿಯ ಮಾದರಿ ಸಂಗ್ರಹಿಸಲಾಗಿದೆ. ಅದರಲ್ಲಿ 6,558 ಮಂದಿ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 3,454 ಮಂದಿಗೆ ಡೆಂಘೀ ದೃಢವಾಗಿದೆ. ಜು.18ರಿಂದ ಆ.18ರ ವರೆಗೆ ಒಂದು ತಿಂಗಳಿನಲ್ಲಿ 2,436 ಪ್ರಕರಣಗಳ ವರದಿಯಾಗಿದೆ.

ಸಮಯ ತೆಗೆದುಕೊಳ್ಳುತ್ತಿದ್ದ ಈ ಹಿಂದಿನ ಸರ್ವೇ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಬಹಳ ಹಿಂದಿನಿಂದಲೂ ಡೆಂಘೀ ಪ್ರಕರಣಗಳ ಕುರಿತು ಮನೆ ಮನೆ ಸರ್ವೇ ನಡೆಸಲಾಗುತ್ತಿತ್ತು. ಆದರೆ, ಈ ವೇಳೆ ಮಾಹಿತಿಯನ್ನು ಮ್ಯಾನುವಲ್‌ ಆಗಿ ಸಂಗ್ರಹಿಸಲಾಗುತ್ತಿತ್ತು. ಈ ಮಾಹಿತಿ ಬಿಬಿಎಂಪಿ ಅಧಿಕಾರಿಗಳಿಗೆ ಸಿಗುವ ಹೊತ್ತಿಗೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಕೆಲವೊಮ್ಮೆ ಮಾಹಿತಿಗಳು ಕಳೆದು ಹೋಗುತ್ತಿತ್ತು. ಇದರಿಂದಾಗಿ ಸರ್ವೇ ಸಂದರ್ಭದಲ್ಲಿ ಪತ್ತೆಯಾದ ಲಾರ್ವಾ ನಾಶವಾಗದೆ ಡೆಂಘೀ ಹೆಚ್ಚಳಕ್ಕೆ ಕಾರಣವಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next