ಬೆಂಗಳೂರು: 2013-14ನೇ ಸಾಲಿನಲ್ಲಿ ನಡೆದ 197 ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ (ಎಪಿಪಿ) ನೇಮಕಾತಿಯ ಉತ್ತರ ಪತ್ರಿಕೆಗಳನ್ನು ತಿರುಚಲಾಗಿದ್ದು, ಮೌಲ್ಯಮಾಪನ ಮಾಡಿದ್ದ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಕೈಬರಹ ಹಾಗೂ ಸಹಿಯನ್ನು ನಕಲು ಮಾಡಲಾಗಿದೆ ಎಂದು ಲೋಕಾಯುಕ್ತ ಸಂಸ್ಥೆ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.
ಈ ಕುರಿತು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಪಕ ಎಸ್.ಆರ್. ಹಿರೇಮಠ ಹಾಗೂ ವಕೀಲೆ ಸುಧಾ ಕಾಟವಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ. ಎ.ಎಸ್. ಓಕಾ ಹಾಗೂ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಯಿತು.
ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಎಸ್. ಅರಬಟ್ಟಿ ವಾದ ಮಂಡಿಸಿ, 197 ಎಪಿಪಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಉತ್ತರ ಪತ್ರಿಕೆಗಳನ್ನು ತಿರುಚಲಾಗಿದ್ದು, ಮೌಲ್ಯಮಾಪನ ಮಾಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳ ಕೈಬರಹ ಮತ್ತು ಸಹಿಯನ್ನು ನಕಲು ಮಾಡಿರುವುದು ವಿಧಿವಿಜ್ಞಾನ ಪ್ರಯೋಗಾಲಯ ದೃಢಪಡಿಸಿದೆ. ಕಳಂಕಿತ 61 ಅಭ್ಯರ್ಥಿಗಳು ಮತ್ತು 2 ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವಂತೆ ಉಪಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕಳಂಕಿತರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎನ್ನುವುದು ಲೋಕಾಯುಕ್ತದ ಶಿಫಾರಸು ಆಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಳಂಕಿತರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ? ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ಸರ್ಕಾರಿ ವಕೀಲರು ಉತ್ತರಿಸಿ, ಈ ಕುರಿತು ಸರ್ಕಾರದಿಂದ ಅಗತ್ಯ ಮಾಹಿತಿ ಪಡೆದು ತಿಳಿಸಲಾಗುವುದು. ಅದಕ್ಕಾಗಿ ಕಾಲಾವಕಾಶ ಕೋರಿದರು. ಪೀಠ ವಿಚಾರಣೆಯನ್ನು ಅ.16ಕ್ಕೆ ಮುಂದೂಡಿತು.
ಅಭಿಯೋಜನಾ ಇಲಾಖೆಯ 197 ಎಪಿಪಿ ಹುದ್ದೆಗಳ ಭರ್ತಿಗೆ 2013ರಲ್ಲಿ ಪೂರ್ವಭಾವಿ ಹಾಗೂ 2014ರಲ್ಲಿ ಮುಖ್ಯಪರೀಕ್ಷೆ ನಡೆದಿತ್ತು. ಅಕ್ರಮ ನಡೆದಿರುವ ವಿಚಾರ ಹೊರಬಂದಿತ್ತು. ಸಮಗ್ರ ತನಿಖೆ ನಡೆಸಿ 2018ರ ಮಾ.15ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ಯಾರಿಗೂ ಶಿಕ್ಷೆ ಆಗಿಲ್ಲ. ಸರ್ಕಾರವೂ ಕ್ರಮ ಕೈಗೊಂಡಿಲ್ಲ. ಹೀಗಾಗಿ, 197 ಎಪಿಪಿಗಳ ನೇಮಕಾತಿ ಪಟ್ಟಿ ರದ್ದುಪಡಿಸಬೇಕು. ಹೊಸದಾಗಿ ಆರೋಪಪಟ್ಟಿಯಲ್ಲಿ ಎಪಿಪಿಗಳ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.