ಬೆಂಗಳೂರು: ರೈತರ ಉತ್ಪನ್ನಗಳನ್ನು ಮಾರುಕಟ್ಟೆಗಳಿಗೆ ಸಾಗಣೆ ಮಾಡಲು ಓಲಾ-ಊಬರ್ ಬಾಡಿಗೆ ಕಾರು ಮಾದರಿಯಲ್ಲಿ ಟ್ರಾಕ್ಟರ್ ಸೇವೆ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕೃಷಿ ಸಚಿವ ಬಂಡೆಪ್ಪ ಕಾಶಂಪೂರ ಟ್ರಾಕ್ಟರ್ ಸೇವೆಯ ಆ್ಯಪ್ ಸಿದ್ಧಪಡಿಸಿ ರೈತರು ತಮ್ಮ ಉತ್ಪನ್ನ ಮಾರುಕಟ್ಟೆ ಸಾಗಿಸಲು ಬೇಕಾದಾಗ ಬಾಡಿಗೆ ಆಧಾರದಲ್ಲಿ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಇದಕ್ಕಾಗಿ ರೈತರ ಟ್ರಾಕ್ಟರ್‌ಗಳನ್ನೇ ಬಳಕೆ ಮಾಡಲಾಗುವುದು. ರೈತರು ತಮ್ಮ ಬಳಿ ಇರುವ ಟ್ರಾಕ್ಟರ್ ನೋಂದಣಿ ಮಾಡಿಸಿದರೆ, ಬಾಡಿಗೆ ಆಧಾರದಲ್ಲಿ ಬೇಕಾದಾಗ ಮೊಬೈಲ್ ಫೋನ್ ಮೂಲಕ ಸಂದೇಶ ರವಾನಿಸಿ ನಿಗದಿತ ಸ್ಥಳಕ್ಕೆ ತೆರಳಲು ಸೂಚಿಸಲಾಗುವುದು. ಇಂತಿಷ್ಟು ಬಾಡಿಗೆ ದರ ನಿಗದಿಪಡಿಸಲಾಗುವುದು ಎಂದು ತಿಳಿಸಿದರು. ಇದರ ನಿರ್ವಹಣೆ ಸಹಕಾರ ಇಲಾಖೆಯು ಕೃಷಿ, ತೋಟಗಾರಿಕೆ ಇಲಾಖೆ ಜತೆಗೂಡಿ ಮಾಡಲಿದೆ ಎಂದು ತಿಳಿಸಿದರು.
ಸಹಕಾರ ವಲಯದಲ್ಲಿ 300 ಎಕರೆ ಕೃಷಿ ಭೂಮಿಯಲ್ಲಿ 100 ರೈತರನ್ನು ಒಳಗೊಂಡ 500 ಸಂಯುಕ್ತ ಬೇಸಾಯ (ಲ್ಯಾಂಡ್ ಆಪರೇಷನ್ ಸಹಕಾರ ಸಂಘ )ಇದೇ ವರ್ಷ ಸ್ಥಾಪಿಸಲಾಗುವುದು ಎಂದು ಹೇಳಿದರು.
ರೈತರ ಉತ್ಪನ್ನಗಳನ್ನು ಖರೀದಿ ಮತ್ತು ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾತ್ರ ಅವಕಾಶವಿತ್ತು. ಆದರೆ, ಇದೀಗ ರೈತ ಕಣಜ ಯೋಜನೆಯಡಿ ಶೀತಲ ಕೇಂದ್ರಗಳಲ್ಲಿಯೂ ಆ ವ್ಯವಸ್ಥೆ ಕಲ್ಪಿಸಲಾಗುವುದು. ರೈತರು ತಮ್ಮ ಉತ್ಪನ್ನಗಳನ್ನು ಎಂಟು ತಿಂಗಳು ಉಚಿತವಾಗಿ ದಾಸ್ತಾನು ಮಾಡಲು ಅವಕಾಶ ಕೊಟ್ಟು ದರ ಬಂದಾಗ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ರಾಜ್ಯದಲ್ಲಿ 20 ಲಕ್ಷ ಟನ್ ಕೃಷಿ ಉತ್ಪನ್ನ ದಾಸ್ತಾನು ಮಾಡುವ ಸಾಮರ್ಥ್ಯ ಹೊಂದಿರುವ ಗೋದಾಮುಗಳಿವೆ ಎಂದು ಹೇಳಿದರು.
ರೈತರ ಬೆಳೆ ಕುಸಿತದಾಗ ಕೇಂದ್ರ ಸರ್ಕಾರವನ್ನು ಕಾಯದೆ 12 ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರವೇ ಖರೀದಿ ಮಾಡಲಿದೆ. ಏಪ್ರಿಲ್‌ನಲ್ಲಿ ಯೋಜನೆ ಜಾರಿಯಾಗಲಿದೆ ಎಂದರು.