ಸಿರುಗುಪ್ಪ: ತಾಲೂಕಿನ ರೈತರು ಪೂರ್ವಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ಸಮೀಕ್ಷೆಗೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ನಡೆದ ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಬೆಳೆಸಾಲ, ವಿಮೆ, ಬೆಂಬಲ ಬೆಲೆಯಲ್ಲಿ ಧಾನ್ಯ ಖರೀದಿ, ಬೆಳೆ ಪರಿಹಾರ ಮತ್ತಿತರ ಯೋಜನೆಯ ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಮಾಹಿತಿಯನ್ನು ಮಾನದಂಡವಾಗಿ ಪರಿಗಣಿಸಲಾಗುತ್ತಿದೆ. ಆದ್ದರಿಂದ ಬೆಳೆ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದರೆ ರೈತರಿಗೆ ಅನುಕೂಲವಾಗಲಿದೆ. ಆದ್ದರಿಂದ ಬೆಳೆ ಸಮೀಕ್ಷೆ ಮಾಡುವ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ನಜೀರ ಅಹಮ್ಮದ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ಸಮೀಕ್ಷೆಯನ್ನು ಮೊಬೈಲ್ ಆ್ಯಪ್ ಮೂಲಕ ದಾಖಲಿಸಲಾಗುತ್ತದೆ. ಜಮೀನಿನಲ್ಲಿ ಬೆಳೆದ ಬೆಳೆಗಳವಿವರಗಳನ್ನು ರೈತರೇ ಮೊಬೈಲ್ ಆ್ಯಪ್ ಮೂಲಕ ದಾಖಲಿಸಿ ಬೆಳೆ ಸಮೀಕ್ಷೆ ಮಾಡಬೇಕು. ರೈತರ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಷನ್ ಬಳಸಲು ಆಯಾ ಗ್ರಾಮಕ್ಕೆ ನೇಮಕವಾದ ಖಾಸಗಿ ವ್ಯಕ್ತಿಗಳ ಸಹಾಯ ಪಡೆಯಬಹುದಾಗಿದೆ.
ರೈತರೇ ತಮ್ಮ ಮೊಬೈಲ್ ನ ಪ್ಲೇಸ್ಟೋರ್‌ನಲ್ಲಿ ಪೂರ್ವ ಮುಂಗಾರು ರೈತರ ಬೆಳೆ ಸಮೀಕ್ಷೆ 2021-22 ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆರ್ಥಿಕ ವರ್ಷ, ಋತು ದಾಖಲಿಸಬೇಕು. ರೈತರು ತಮ್ಮಹೆಸರು, ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸಿದಾಗ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ನಂತರ ಒಟಿಪಿ ದಾಖಲಿಸಬೇಕು. ಮಾಸ್ಟರ್ ವಿವರ, ಪಹಣಿ, ಮಾಲೀಕರ ವಿವರ, ಪಾಲಿಗ್ರಾನ್ ನಮೂದಿಸಿ ಜಿಐಎಸ್ ಮ್ಯಾಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು, ಹೆಚ್ಚಿನ ಮಾಹಿತಿಗಾಗಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ,ಕಂದಾಯ ನಿರೀಕ್ಷಕರಾದ ಬಸವರಾಜ, ಮಂಜುನಾಥ, ಶೆಕ್ಷಾವಲಿ, ಕೃಷಿ ಅಧಿಕಾರಿಗಳಾದ ವಾಣಿಶ್ರೀ, ಗರ್ಜೆಪ್ಪ, ಬಾಲಾಜಿನಾಯ್ಕ, ಪರಮೇಶ್ವರರೆಡ್ಡಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಅಧಿಕಾರಿಗಳು ಇದ್ದರು.