Advertisement

ಗಂಗಾವತಿ: ಕಾರ್ಯಕರ್ತರಿಗೆ ಪುನರ್ವಸತಿ ಕಲ್ಪಿಸಲು ಎಪಿಎಂಸಿ ವಿಭಜನೆಗೆ ಮುಂದಾದ ಸರಕಾರ

07:17 PM Jan 11, 2022 | Team Udayavani |

ಗಂಗಾವತಿ : ಬಿಜೆಪಿ ಕಾರ್ಯಕರ್ತರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಲು ರಾಜ್ಯ ಸರಕಾರ ಗಂಗಾವತಿಯ ಎಪಿಎಂಸಿಯನ್ನು ವಿಭಜನೆ ಮಾಡಿ ಗಂಗಾವತಿ, ಕನಕಗಿರಿ ಮತ್ತು ಕಾಟರಗಿ ಎಪಿಎಂಸಿಗಳನ್ನು ಪ್ರತೇಕವಾಗಿಸುವ ಪ್ರಸ್ತಾಪ ಸರಕಾರದ ಮಟ್ಟದಲ್ಲಿದ್ದು ಶೀಘ್ರವೇ ಸರಕಾರಿ ಆದೇಶ ಹೊರಬೀಳುವ ಸಾಧ್ಯತೆ ಇದೆ.

Advertisement

ಆದಾಯದಲ್ಲಿ ಯಶವಂತಪುರ ಎಪಿಎಂಸಿಯ ನಂತರ ಗಂಗಾವತಿಗೆ ಎಪಿಎಂಸಿಗೆ ದ್ವಿತಿಯ ಸ್ಥಾನವಿತ್ತು. ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಎಪಿಎಂಸಿ ಸಚಿವರಾಗಿದ್ದ ಶಿವರಾಜ ಎಸ್ ತಂಗಡಗಿ ಕಾರಟಗಿ ವಿಶೇಷ ಎಪಿಎಂಸಿ ರಚನೆ ಮಾಡಿ ಗಂಗಾವತಿ ಎಪಿಎಂಸಿ ಆದಾಯಕ್ಕೆ ಕೊಕ್ಕೆ ಹಾಕಿದ್ದರು. ಕಾರಟಗಿ ಭಾಗದ ಅಭಿವೃದ್ಧಿ ದೃಷ್ಠಿಯಿಂದ ಭತ್ತ ಮತ್ತು ಅಕ್ಕಿ ವಿಶೇಷ ಎಪಿಎಂಸಿಯನ್ನು ಕೆಲವರ ವಿರೋಧದ ನಡುವೆಯೂ ರಚನೆ ಮಾಡಲಾಗಿತ್ತು. ಇದರಿಂದಾಗಿ ಪ್ರತಿ ವರ್ಷ ಗಂಗಾವತಿ ಎಪಿಎಂಸಿಗೆ ಬರುತ್ತಿದ್ದ ಕೋಟ್ಯಾಂತರ ರೂ.ಗಳ ಆದಾಯ ನಿಲುಗಡೆಯಾಗಿ ಬರುವ ಮಾರ್ಕೆಟ್ ಶುಲ್ಕ ಎಪಿಎಂಸಿ ಅಭಿವೃದ್ಧಿ ಕಾಮಗಾರಿಗಳಿಗೆ ಬ್ಯಾಂಕುಗಳಿಂದ ಪಡೆದ ಸಾಲ ಪಾವತಿಗೆ ಸೀಮಿತವಾಗಿ ಅಭಿವೃದ್ದಿ ಕಾರ್ಯಗಳು ಕುಂಠಿತವಾದವು. ಇದೀಗ ಬಿಜೆಪಿ ಸರಕಾರ ಸ್ಥಳೀಯ ಶಾಸಕರ ಶಿಫಾರಸ್ಸಿನಂತೆ ಗಂಗಾವತಿ ಎಪಿಎಂಸಿಯನ್ನು ವಿಭಜನೆ ಮಾಡಿ ಮೂರು ಪ್ರತೇಕ ಎಪಿಎಂಸಿ ರಚನೆ ಮಾಡಿ ಎರಡು ವರ್ಷಗಳ ಅವಧಿಗೆ ಬಿಜೆಪಿ ಕಾರ್ಯಕರ್ತರನ್ನು ಎಪಿಎಂಸಿ ಆಡಳಿತ ಮಂಡಳಿಗೆ ಅಧ್ಯಕ್ಷರ ಸೇರಿ ಇತರೆ  ನಿರ್ದೇಶಕರನ್ನು ನಾಮನಿರ್ದೇಶನ ಮಾಡಲು ಮುಂದಾಗಿದೆ. ಫೆ.04ಕ್ಕೆ ಪ್ರಸ್ತುತ ಆಡಳಿತ ಮಂಡಳಿ ಅವಧಿ ಮುಕ್ತಾಯವಾಗಲಿದ್ದು ಈಗಾಗಲೇ ಚುನಾವಣಾ ಆಯೋಗ ಎಪಿಎಂಸಿ ಕ್ಷೇತ್ರಗಳ ರಚನೆ ಮೀಸಲಾತಿ ನಿಗದಿ ಮತ್ತು ಮತದಾರರ ಪಟ್ಟಿ ತಯಾರಿಸಿ ಪ್ರಕಟಿಸುವ ಹಂತದಲ್ಲಿದೆ. ಈ ಮಧ್ಯೆ ಕನಕಗಿರಿ ಮತ್ತು ಗಂಗಾವತಿ ಶಾಸಕರು ಎಪಿಎಂಸಿ ವಿಭಜನೆ ಮಾಡಿ ತಮ್ಮ ಕಾಯಕರ್ತರನ್ನು ನಾಮನಿರ್ದೇಶನ ಮಾಡಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಿದ್ದಾರೆನ್ನಲಾಗಿದೆ.

ಮತ್ತೆ ಆದಾಯಕ್ಕೆ ಕೊಕ್ಕೆ: ಈಗಾಗಲೇ ಕಾರಟಗಿಯಲ್ಲಿ ವಿಶೇಷ ಎಪಿಎಂಸಿ ರಚನೆ ಮಾಡಿ ಗಂಗಾವತಿ ಎಪಿಎಂಸಿಯನ್ನು ಡಿಗ್ರೇಡ್ ಮಾಡಲಾಗಿದೆ. ಭತ್ತ ಕಟಾವು ಸಂದರ್ಭದಲ್ಲಿ ಮಾತ್ರ ಪ್ರತಿ ತಿಂಗಳಿಗೆ 50-60 ಲಕ್ಷ ಮಾರ್ಕೆಟ್ ಶುಲ್ಕದ ಆದಾಯ ಬರುತ್ತದೆ. ನಂತರ ಪ್ರತಿ ತಿಂಗಳು 10-20 ಸಾವಿರ ರೂ.ಗಳ ಮಾರ್ಕೆಟ್ ಶುಲ್ಕದ ಆದಾಯ ಬರುತ್ತದೆ. ಕನಕಗಿರಿ ಎಪಿಎಂಸಿಯ ನಿರ್ವಾಹಣೆ ಗಂಗಾವತಿ ಎಪಿಎಂಸಿಯಿಂದ   ಮಾಡಲಾಗುತ್ತಿದ್ದು ಪ್ರೆತೇಕವಾಗಿ ವಿಭಜನೆ ಮಾಡುವುದರಿಂದ ಕನಕಗಿರಿ ಎಪಿಎಂಸಿಯನ್ನು ನಿರ್ವಾಹಣೆ ಮಾಡಲು ಹಣ ಇಲ್ಲದಂತಾಗುತ್ತದೆ. ಅಭಿವೃದ್ಧಿ ಕಾರ್ಯ ದೂರ ಉಳಿಯಿತು. ಕಾರಟಗಿಯಲ್ಲಿ ವಿಶೇಷ ಎಪಿಎಂಸಿ ಇದ್ದು ಇದನ್ನು ಭತ್ತದ ಎಪಿಎಂಸಿ ಎಂದು ಸರಕಾರ ನಿಗದಿ ಮಾಡಿರುವುದರಿಂದ ಸರಕಾರಕ್ಕೆ ಆದಾಯ ಬರದಿದ್ದರೂ ಕಚೇರಿ ನಿರ್ವಾಹಣೆಗೆ ತೊಂದರೆಯಿಲ್ಲ.

ಸದ್ಯ ಗಂಗಾವತಿ ಅಖಂಡ ತಾಲೂಕಿನಲ್ಲಿ 11 ರೈತ ಪ್ರತಿನಿಧಿ ಕ್ಷೇತ್ರಗಳು, ವರ್ತಕರು,ಟಿಎಪಿಸಿಎಂ, ತೋಟಗಾರಿಕೆ ಆಹಾರ  ಮತ್ತು ಸಂಸ್ಕರಣಾ ಘಟಕದ ವತಿಯಿಂದ ಒಟ್ಟು 03 ಹಾಗೂ ಸರಕಾರದಿಂದ 03 ನಿರ್ದೇಶಕರ ಸೇರಿ ಒಟ್ಟು 17 ಜನ ನಿರ್ದೇಶಕರಿದ್ದಾರೆ. ರಾಜ್ಯ ಚುನಾವಣಾ ಆಯೋಗ ಈಗಾಗಲೇ ಕ್ಷೇತ್ರ ವಿಂಗಡನೆ ಮತದಾರರ ಪಟ್ಟಿ ತಯಾರಿಕೆ ಸೇರಿ ಚುನಾವಣಾ ಸಿದ್ದತೆ ಮಾಡಿಕೊಂಡಿದ್ದರೂ ರಾಜ್ಯ ಸರಕಾರ ವಿಶೇಷ ಅಧಿಕಾರ ಬಳಸಿ ನೂತನವಾಗಿ ರಚನೆಯಾಗುವ ಎಪಿಎಂಸಿಗಳಿಗೆ ನಾಮನಿರ್ದೇಶನ ಆಡಳಿತ ಮಂಡಳಿ ನೇಮಕ ಮಾಡುವುದು ಪಕ್ಕಾ ಆಗಿದೆ.

ಪುನರ್ವಸತಿಗೆ ವಿಭಜನೆ ಬೇಡ:

Advertisement

ಎಪಿಎಂಸಿಗಳ ವಿಭಜನೆಯಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತವೆ ವಾರ್ಷಿಕ ಆದಾಯದಲ್ಲಿ ವಿಭಜನೆಯಾದರೆ ತೊಂದರೆಯಿಲ್ಲ. ಕಾರ್ಯಕರ್ತರಿಗೆ ಪುನರ್ವಸತಿ ಕಲ್ಪಿಸಲು ಎಪಿಎಂಸಿಗಳನ್ನು ಸರಕಾರ ವಿಭಜನೆ ಮಾಡಿದರೆ ರೈತರಿಗೆ ಯಾವುದೇ ಅಭಿವೃದ್ಧಿ ಕಾರ್ಯಗಳು ಮಾಡಲು ಆಗುವುದಿಲ್ಲ. ಈಗಾಗಲೇ ನವಲಿ ವಿಶೇಷ ಭತ್ತ ಮತ್ತು ಅಕ್ಕಿ ಎಪಿಎಂಸಿ ರಚಿಸಿ ಕಾರಟಗಿಯಲ್ಲಿ ಕೇಂದ್ರ ಕಚೇರಿ ಮಾಡಿದ್ದು ಅವೈಜ್ಞಾನಿಕವಾಗಿದೆ. ಈಗ ಪುನಹ ಎಪಿಎಂಸಿ ವಿಭಜನೆ ಮಾಡಿ ಕನಕಗಿರಿಗೆ ಪ್ರತೇಕ ಎಪಿಎಂಸಿ ರಚನೆ ಮಾಡುವುದು ಆದಾಯವನ್ನು ಗಮನಿಸಿ ಮಾಡಬೇಕು. ಒಂದು ವೇಳೆ ಆದಾಯ ಕಡಿಮೆ ಇದ್ದರೂ ರಾಜ್ಯ ಸರಕಾರ ವಾರ್ಷಿಕ 5-6 ಕೋಟಿ ಹೆಚ್ಚುವರಿ ಅನುದಾನ ಹೊಂದಿಕೆ ಮಾಡಬೇ ಕೆಂದು ಎಪಿಎಂಸಿ  ನಿವೃತ್ತ ಹೆಚ್ಚುವರಿ ನಿರ್ದೇಶಕ ನಾಗರಾಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿಗೆ ಪೂರಕ: ಕನಕಗಿರಿ, ಕಾರಟಗಿ ಪ್ರತೇಕ ತಾಲೂಕು ರಚನೆಯಾಗಿದ್ದು ಎಪಿಎಂಸಿಯನ್ನು ವಿಭಜನೆ ಮಾಡುವುದು ಅನಿವಾರ್ಯವಾಗಿದೆ. ಗಂಗಾವತಿ ಎಪಿಎಂಸಿಯನ್ನು ಪುನರಚನೆ ಮಾಡಿದರೆ ಅಭಿವೃದ್ಧಿ ದೃಷ್ಠಿಯಿಂದ ಒಳ್ಳೆಯದು. ಕಾರಟಗಿ ಭಾಗದಲ್ಲಿ ಭತ್ತವನ್ನು ಬೆಳೆದರೂ  ಇತರೆ ಬೆಳೆಯ ಕ್ಷೇತ್ರ ಎಂದು ಗೆದ್ದು ಬರುತ್ತಿದ್ದ ಸದಸ್ಯರಿಗೆ ಅನುದಾನವನ್ನು ಅನಿವಾರ್ಯವಾಗಿ ಕೊಡಬೇಕಿತ್ತು. ಪ್ರಸ್ತುತ ಪ್ರಸ್ತಾವನೆಯಲ್ಲಿ ಕಾರಟಗಿ ಮತ್ತು ಕನಕಗಿರಿ ಪ್ರತೇಕವಾಗುವುದರಿಂದ ಗಂಗಾವತಿ ತಾಲೂಕಿನ ರೈತ ಮಗಾಣಿ ಅಭಿವೃದ್ಧಿ, ರಸ್ತೆ ನಿರ್ಮಾಣ ಗೋಡೌನ್ ನಿರ್ಮಾಣಕ್ಕೆ ಹೆಚ್ಚು ಅನುದಾನ ಸಿಗುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ .

-ವಿಶೇಷ ವರದಿ :ಕೆ ನಿಂಗಜ್ಜ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next