ಮಾರುಕಟ್ಟೆಯನ್ನು ರೈತರು ನಂಬಿ ಕೂರಬೇಕಾಗಿಲ್ಲ. ಎಪಿಎಂಸಿಯಲ್ಲಿ ಅಡಮಾನ ಸಾಲದ ವ್ಯವಸ್ಥೆ ಮಾಡಲಾಗಿದೆ ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ವಿನಂತಿಸಿದರು.
Advertisement
ಮಂಗಳವಾರ ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಅಡಿಕೆ ಧಾರಣೆ ಇತ್ತೀಚಿನ ದಿನಗಳಲ್ಲಿ ಏರಿಳಿತ ಕಾಣುತ್ತಲೇ ಇದೆ. ಇಂಥ ಸಂದರ್ಭ ಬೆಳೆಗಾರರು ಮುಕ್ತ ಮಾರುಕಟ್ಟೆಯಲ್ಲಿ ಅಡಿಕೆ ಮಾರಿದರೆ ಅದರಿಂದ ನಷ್ಟದ ಸಾಧ್ಯತೆಯೇ ಅಧಿಕ. ಅದರ ಬದಲು ತಮ್ಮ ಅಡಕೆಯನ್ನು ಎಪಿಎಂಸಿಗೆ ತಂದು ಇಲ್ಲಿ ಅಡಮಾನ ಸಾಲ ಪಡೆಯಬಹುದು. 90 ದಿನಗಳ ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತೇವೆ. 180 ದಿನಗಳ ಕಾಲ ನಮ್ಮ ಗೋದಾಮುಗಳಲ್ಲಿ ದಾಸ್ತಾನು ಇಟ್ಟುಕೊಳ್ಳುವ ಅವಕಾಶವಿದೆ ಎಂದರು.
ಈಗಷ್ಟೇ ಮಾರುಕಟ್ಟೆಗೆ ಬರುತ್ತಿರುವ ಹೊಸ ಅಡಕೆಗೆ 250 ರೂ. ಧಾರಣೆ ಸಿಕ್ಕರೆ ಮಾತ್ರ ಬೆಳೆಗಾರರಿಗೆ ನಷ್ಟವಿಲ್ಲದ ಸ್ಥಿತಿ ಬರುತ್ತದೆ ಎಂದು ಮೇದಪ್ಪ ಗೌಡ ಹೇಳಿದರು. ವರ್ತಕ ಪ್ರತಿನಿಧಿ ಶಕೂರು ಹಾಜಿ ಮಾತನಾಡಿ, ಬೆಳೆಗಾರರಿಂದ ಖರೀದಿ ಯಾದ ಅಡಕೆಯನ್ನು ಅದೇ ಸ್ಥಿತಿಯಲ್ಲಿ ಉತ್ತರ ಭಾರತಕ್ಕೆ ಸಾಗಾಟ ಮಾಡುವುದಿಲ್ಲ. ಪಟೋರ, ಮೋರ, ಮೋಟಿ, ಜೀನಿ, ಲೀನ್ ಇತ್ಯಾದಿ ವರ್ಗಗಳಲ್ಲಿ ವಿಂಗಡಿಸಿ ರವಾನೆ ಮಾಡಲಾಗುತ್ತದೆ. ಎಲ್ಲದಕ್ಕೂ ಪ್ರತ್ಯೇಕ ಧಾರಣೆ ಇದೆ. ಆ ಎಲ್ಲ ಧಾರಣೆಯೂ ಬೆಳೆಗಾರರ ಮೂಲ ಅಡಿಕೆಗೆ ಸಿಗಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದರು. ಆದರೂ ಬೆಳೆಗಾರರ ಪರವಾಗಿ ನಾವು ಹೋರಾಟ ಮಾಡುವುದು ಅನಿವಾರ್ಯ ಎಂದು ನಿರ್ದೇಶಕಿ ಪುಲಸ್ತ್ಯಾ ರೈ ಹೇಳಿದರು.
Related Articles
Advertisement
ಜಿಲ್ಲೆಯಲ್ಲಿ ಮರಳು ಸಮಸ್ಯೆ ಸ್ವಲ್ಪಮಟ್ಟಿಗೆ ನಿರಾಳವಾಗಿದೆ ಎಂದು ನಿರ್ದೇಶಕ ದಿನೇಶ್ ಮೆದು ಹೇಳಿದರು. ಆರೇಳು ಸಾವಿರದಲ್ಲಿ ಸಿಗುತ್ತಿದ್ದ 3 ಯೂನಿಟ್ ಮರಳು ಇತ್ತೀಚಿನ ದಿನಗಳಲ್ಲಿ 15 ಸಾವಿರಕ್ಕೆ ಮುಟ್ಟಿತ್ತು. ಈಗ ಸಿಆರ್‌ಝಡ್ ಪ್ರದೇಶದಲ್ಲಿ ಮರಳು ಪರವಾನಿಗೆ ನೀಡುತ್ತಿರುವ ಕಾರಣ ಈಗ 9 ಸಾವಿರಕ್ಕೆ ಮರಳು ಸಿಗುತ್ತಿದೆ. ನಾನ್ ಸಿಆರ್‌ಝಡ್ ಪ್ರದೇಶದಲ್ಲೂ ಪರವಾನಗಿ ನೀಡಲಾಗುತ್ತದೆ ಎಂಬ ಮಾಹಿತಿ ಇದೆ. ಅದು ಅನುಷ್ಠಾನಗೊಂಡರೆ ಮೊದಲಿನಂತೆ ಆರೇಳು ಸಾವಿರಕ್ಕೆ ಮರಳು ಸಿಗಬಹುದು ಎಂದು ದಿನೇಶ್ ಮೆದು ನುಡಿದರು. ಪ್ರಭಾರ ಕಾರ್ಯದರ್ಶಿ ಭಾರತಿ ಪಿ.ಎಸ್.ಮತ್ತು ನಿರ್ದೇಶಕರು ಉಪಸ್ಥಿತರಿದ್ದರು.