ವಿಧಾನ ಪರಿಷತ್ತು: ರಾಜ್ಯದಲ್ಲಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯು ರೈತನಿಗೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡಲು ಮುಕ್ತ ಅವಕಾಶ ಹಾಗೂ ಹಕ್ಕು ನೀಡಿದೆ. ಹಾಗಾಗಿ, ಅದನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.
ಮಂಗಳವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಎಂ. ನಾಗರಾಜು (ಯಾದವ್) ವಿಷಯ ಪ್ರಸ್ತಾಪಿಸಿ, “ರೈತರ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರವು ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ-ಸೌಲಭ್ಯ) ಕಾಯ್ದೆ’ ಒಳಗೊಂಡ ಕೃಷಿ ಕಾಯ್ದೆ ಹಿಂಪಡೆಯಿತು. ಹೆಚ್ಚು-ಕಡಿಮೆ ಅದೇ ಸಂದರ್ಭದಲ್ಲಿ ರಾಜ್ಯ ಸರ್ಕಾರವೂ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದೆ. ಅದನ್ನೂ ಹಿಂಪಡೆಯಬೇಕು. ಯಾಕೆಂದರೆ ಇದು ಡಬಲ್ ಎಂಜಿನ್ ಸರ್ಕಾರವಲ್ಲವೇ?’ ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲಿ ಮಾತ್ರವಲ್ಲ; ಜಗತ್ತಿನ ಯಾವುದೇ ಮೂಲೆಗೆ ಮಾರಾಟ ಮಾಡುವ ಹಕ್ಕನ್ನು ಎಪಿಎಂಸಿ ತಿದ್ದುಪಡಿ ಕಾಯ್ದೆ ನೀಡಿದೆ. ಇದರಿಂದ ರೈತರು ತಮ್ಮ ಉತ್ಪನ್ನಗಳಿಗೆ ಯೋಗ್ಯ ಧಾರಣೆ ಪಡೆಯಲು ಅವಕಾಶ ದೊರಕಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಉದ್ದೇಶಿತ ಕಾಯ್ದೆಯನ್ನು ಹಿಂಪಡೆಯುವ ಅಥವಾ ರದ್ದುಗೊಳಿಸುವ ಪ್ರಶ್ನೆಯೇ ಇಲ್ಲ’ ಎಂದು ಪುನರುತ್ಛರಿಸಿದರು. 2020ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದರು.
ಎಪಿಎಂಸಿಗಳಲ್ಲಿ ಯಾವ ಬೆಳೆಗಳಿಗೆ ಬೆಂಬಲ ಬೆಲೆಗಳನ್ನು ಎಷ್ಟು ಕ್ವಿಂಟಲ್‌ವರೆಗೆ ನೀಡಲಾಗುತ್ತಿದೆ ಎಂದು ಕೇಳಿದ ಪ್ರಶ್ನೆಗೆ, “ಮಾರುಕಟ್ಟೆಗಳಲ್ಲಿ ಧಾರಣೆ ಬೆಂಬಲ ಬೆಲೆಗಿಂತ ಕಡಿಮೆಯಾದಾಗ, ಜಿಲ್ಲಾ ಕಾರ್ಯಪಡೆ ಸಮಿತಿ ಶಿಫಾರಸಿನ ಮೇರೆಗೆ ಖರೀದಿ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಪ್ರಸ್ತುತ ಹೆಸರುಕಾಳು ಮತ್ತು ಉದ್ದಿನಬೇಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಕ್ರಮವಾಗಿ ಕ್ವಿಂಟಲ್‌ಗೆ 7,755 ರೂ. ಹಾಗೂ 6,300 ರೂ. ನಿಗದಿಪಡಿಸಲಾಗಿದೆ. ಖರೀದಿ ಪ್ರಮಾಣ ಗರಿಷ್ಠ ಕ್ರಮವಾಗಿ 15 ಕ್ವಿಂಟಲ್ ಮತ್ತು 6 ಕ್ವಿಂಟಲ್ ಎಂದು ಮಾಹಿತಿ ನೀಡಿದರು.