Advertisement
ಕೇಂದ್ರ ಸರಕಾರದ 2017 ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯ್ದೆಯಡಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂ ತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಅಧ್ಯಾದೇಶ 2020ಕ್ಕೆ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಸ್ಥಳೀಯ ಸಮಿತಿ ಅಧಿಕಾರ ಮೊಟಕು ಈ ಮೊದಲು ರೈತ ತನ್ನ ವ್ಯಾಪ್ತಿ ಬಿಟ್ಟು ಬೇರೆಡೆ ಉತ್ಪನ್ನ ಮಾರಾಟ ಮಾಡಿದರೆ ಚುನಾಯಿತ ಸಮಿತಿಗೆ ನಿಯಂತ್ರಿಸುವ ಅಧಿಕಾರ ಇತ್ತು. ಆದರೆ ಈಗ ಸಮಿತಿಯ ಅಧಿಕಾರ ಕೇವಲ ಮಾರುಕಟ್ಟೆ ಒಳಗೆ ಮಾತ್ರ. ಆದರೆ ರಾಜ್ಯ ಮಟ್ಟದ ನಿರ್ದೇಶಕ ಮಂಡಳಿಗೆ ಪೂರ್ಣ ಪ್ರಮಾಣದ ಅಧಿಕಾರ ಇರುತ್ತದೆ. ಇದು ಎಲ್ಲವನ್ನೂ ನಿಯಂತ್ರಣ ಮಾಡಬಹುದಾಗಿದೆ.
Related Articles
ಖಾಸಗಿ ಮಾರುಕಟ್ಟೆಗಳ ಸ್ಥಾಪನೆ ಮತ್ತು ಖಾಸಗಿ ಸಂಸ್ಥೆಗಳ ಪ್ರವೇಶಕ್ಕೆ ತಿದ್ದುಪಡಿ ಅವಕಾಶ ಕಲ್ಪಿಸಿದೆ. ಆದರೆ ಖಾಸಗಿ ಕಂಪೆನಿ ಅಥವಾ ಖಾಸಗಿ ಮಾರುಕಟ್ಟೆ ಸ್ಥಾಪಿಸುವವರು ಸೂಕ್ತ ಬ್ಯಾಂಕ್ ಖಾತರಿ, ಠೇವಣಿ, ರಾಜ್ಯ ಮಟ್ಟದ ಸಮಿತಿಯ ಅನುಮತಿ ಪಡೆಯುವುದು ಅಗತ್ಯ. ತೂಕ ಮತ್ತು ಅಳತೆ ಮತ್ತಿತರ ವಿಚಾರ, ಬೆಲೆ ನಿಗದಿ, ಪಾವತಿ ಅಕ್ರಮವಾದರೆ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಸಮಿತಿಗೆ ಇರುತ್ತದೆ.
Advertisement
ರೈತರಿಗೆ ಏನು ಉಪಯೋಗ?ಸರಕಾರದ ಪ್ರಕಾರ ರೈತ ತಾನು ಬೆಳೆದ ಉತ್ಪನ್ನವನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ಖಾಸಗಿ ಮಾರುಕಟ್ಟೆಯಲ್ಲಿ ಅಥವಾ ಬೇರೆ ಎಲ್ಲಾದರೂ ತನಗೆ ಬೇಕಾದ ಕಡೆ ಮಾರಬಹುದು. ಇದರಿಂದ ಆತನಿಗೆ ತನ್ನ ಬೆಳೆ ಅಥವಾ ಉತ್ಪನ್ನವನ್ನು ತಾನು ಬಯಸಿದವರಿಗೆ ಮಾರಾಟ ಮಾಡುವ ಅವಕಾಶ ಇರುತ್ತದೆ. ಖಾಸಗಿಯವರು ರೈತನ ಹೊಲಕ್ಕೆ ಹೋಗಿ ಖರೀದಿಸಬಹುದು. ಮಾರಕ ಏನು?
ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರ ಪ್ರಕಾರ, ಖಾಸಗಿ ಕಂಪೆನಿಗಳು ಪ್ರವೇಶ ಮಾಡಿದರೆ ಪ್ರಾರಂಭದಲ್ಲಿ ರೈತರ ಉತ್ಪನ್ನಗಳಿಗೆ ಆಕರ್ಷಕ ಬೆಲೆಯ ರುಚಿ ತೋರಿಸಿ ಅನಂತರ ತಾವು ನಿಗದಿ ಪಡಿಸಿದ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಸಬಹುದು. ರೈತರಿಗೆ ತೂಕ ಮತ್ತು ಅಳತೆ, ಹಣ ಪಾವತಿಯಲ್ಲಿ ಸಮಸ್ಯೆಯಾದರೆ ದೂರು ಕೊಡಲು ರಾಜ್ಯ ಸಮಿತಿಯತ್ತ ನೋಡಬೇಕು. ಇದರಿಂದ ರೈತರಿಗೆ ಭವಿಷ್ಯದಲ್ಲಿ ತೊಂದರೆ ಇದೆ. ಸ್ಥಳೀಯ ಬೀದಿ ಬದಿ ವ್ಯಾಪಾರ, ಸಣ್ಣ ಪುಟ್ಟ ಮಾರುಕಟ್ಟೆ ಮುಚ್ಚಬೇಕಾಗುತ್ತದೆ. ಸಮಾಧಾನದ ಅಂಶ
ಸಮಾಧಾನಕರ ಅಂಶ ಎಂದರೆ ರಾಜ್ಯ ಮಟ್ಟದ ನಿರ್ದೇಶಕ ಮಂಡಳಿ ಸಮಿತಿಯ ಅಧಿಕಾರ ಮೊಟಕುಗೊಳಿಸಿಲ್ಲ. ಖಾಸಗಿ ಕಂಪೆನಿ, ಮಾರುಕಟ್ಟೆ ಸ್ಥಾಪನೆಗೆ ಅನುಮತಿ ಪಡೆಯುವುದು, ಮೋಸವಾದರೆ ಮಧ್ಯಪ್ರವೇಶ ಅಧಿಕಾರ, ಬ್ಯಾಂಕ್ ಖಾತರಿ, ಠೇವಣಿ ಕಡ್ಡಾಯ ಮಾಡಿರುವುದು ಸಮಾಧಾನಕರ. ಆದರೆ ರಾಜ್ಯ ಸಮಿತಿಯ ಅಧಿಕಾರ ಯಾವ ಪ್ರಮಾಣ ಎಷ್ಟು ವ್ಯಾಪ್ತಿ ಎಂಬುದು ನಿಯಮಾವಳಿ ರಚನೆಯಾದ ಅನಂತರವೇ ಸ್ಪಷ್ಟತೆ ಸಿಗಲಿದೆ. ಕಾರ್ಮಿಕ ಕಾಯ್ದೆ ತಿದ್ದುಪಡಿ ಮುಂದೂಡಿಕೆ
ವಿವಾದದ ಸ್ವರೂಪ ಪಡೆದಿದ್ದ “ಕಾರ್ಮಿಕ ಕಾಯ್ದೆ’ ತಿದ್ದುಪಡಿ ಕುರಿತು ಗುರುವಾರದ ಸಂಪುಟ ಸಭೆಯಲ್ಲಿ ಚರ್ಚೆ ಆಯಿತಾದರೂ ವಿರೋಧ ವ್ಯಕ್ತವಾದ ಕಾರಣ ಮುಂದೂಡಲಾಯಿತು. ಸಾಧಕ-ಬಾಧಕ ಅಧ್ಯಯನ, ಕಾರ್ಮಿಕ ಸಂಘಟನೆಗಳ ಜತೆ ಸಮಾಲೋಚನೆಯ ಅನಂತರ ಆ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು ಎನ್ನಲಾಗಿದೆ.