Advertisement

ಜನಪ್ರತಿನಿಧಿಗಳ ನಿರಾಸಕ್ತಿ- ಡಂಬಳ ಗ್ರಾಪಂಗೆ ಪಟ್ಟಣ ಪಂಚಾಯಿತಿ ಭಾಗ್ಯ ಯಾವಾಗ?

05:46 PM Jul 06, 2023 | Team Udayavani |

ಡಂಬಳ: ಜಿಲ್ಲೆಯಲ್ಲೇ ಅತಿ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರನ್ನು ಹಾಗೂ ಮುಂಡರಗಿ ತಾಲೂಕಿನಲ್ಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಡಂಬಳ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂಬ ಡಂಬಳ ಗ್ರಾಮಸ್ಥರ ಕೂಗು ಒಂದು ದಶಕಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಈ ಕುರಿತು ಈ ಭಾಗದ ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

ಡಂಬಳ ಗ್ರಾಮ ಪಂಚಾಯಿತಿ 11 ವಾರ್ಡ್‌, 29 ಸದಸ್ಯರನ್ನು ಹೊಂದಿದೆ. ಗ್ರಾಮ ಪಂಚಾಯಿತಿಯಲ್ಲಿ 20 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದಾಜು 20 ಸಾವಿರ ಜನಸಂಖ್ಯೆ ಇದ್ದು, 12 ಸಾವಿರ ಮತದಾರರಿದ್ದಾರೆ. 5-6 ಸಾವಿರ ಜನಸಂಖ್ಯೆ
ಹೊಂದಿರುವ ಗ್ರಾಮ ಪಂಚಾಯಿತಿಗಳಿಗೆ ನೀಡಲಾಗುವ ಅನುದಾನವನ್ನೇ ಈ ಗ್ರಾಮ ಪಂಚಾಯಿತಿಗೂ ನೀಡಲಾಗುತ್ತದೆ. ಇದರಿಂದ ಗ್ರಾಮದ ಅಭಿವೃದ್ಧಿ ಮಾಡಲು ಅನುದಾನ ಸಾಲುತ್ತಿಲ್ಲ ಎಂದು ಗ್ರಾಪಂ ಸದಸ್ಯರು ಆರೋಪಿಸುತ್ತಿದ್ದಾರೆ.

ಈ ಹಿಂದೆ ವಿಜಯಕುಮಾರ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ 160 ಗ್ರಾಮ ಪಂಚಾಯತಿಗಳನ್ನು ಪಟ್ಟಣ
ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪ ಪರಿಶೀಲನೆಯಲ್ಲಿದೆ ಎಂದು ಹೇಳಿದ್ದರು. ಈ 160 ರಲ್ಲಿ ಡಂಬಳ ಗ್ರಾಮ
ಪಂಚಾಯಿತಿ ಕೂಡ ಒಂದು. ಹೀಗಾಗಿ, ಡಂಬಳ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವಂತೆ ಕಳೆದ ಐದಾರು ವರ್ಷಗಳಿಂದ ಗ್ರಾಮ ಸಭೆ, ವಾರ್ಡ್‌ ಸಭೆಗಳಲ್ಲಿ ಸದಸ್ಯರು ಒತ್ತಾಯಿಸುತ್ತಲೇ ಬಂದಿದ್ದಾರೆ.

ಡಂಬಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಗ್ರಾಮಗಳಿದ್ದು, 11 ವಾರ್ಡ್‌ಗಳಿವೆ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ಕೊರತೆಯಾಗುತ್ತಿದೆ. ಗ್ರಾಪಂಗೆ ಬರುವ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಆದ್ದರಿಂದ ಕುಡಿಯುವ ನೀರು, ಸಮುದಾಯ ಶೌಚಾಲಯ, ಬೀದಿ ದೀಪ, ಚರಂಡಿ ವುವಸ್ಥೆ, ರಸ್ತೆ ಅಭಿವೃದ್ಧಿ ನನೆಗುದಿಗೆ ಬಿದ್ದಿವೆ.

ಪಟ್ಟಣ ಪಂಚಾಯತಿ ಮೇಲ್ದರ್ಜೆಗೇರಿದರೆ ಹೆಚ್ಚು ಅನುದಾನ ಬರುತ್ತದೆ. ಗ್ರಾಮವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಮುಖ್ಯವಾಗಿ ಮೂಲಭೂತ ಸೌಲಭ್ಯಗಳಾದ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಸುಧಾರಿಸುತ್ತದೆ. ಹಣಕಾಸಿನ ಯೋಜನೆ, ಬಡತನ ನಿರ್ಮೂಲನೆ, ಕೌಶಲ್ಯ ತರಬೇತಿ ಯೋಜನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗಾಗಿ ವಿಶೇಷ ಯೋಜನೆಯಡಿ ಹೆಚ್ಚಿನ ಅನುದಾನ ಸಿಗುತ್ತದೆ ಎಂಬುದು ಸಾರ್ವಜನಿಕರ ಆಶಾವಾದ.

Advertisement

ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಗ್ರಾಮದ ಜನರಿಗೆ ಸಮರ್ಪಕವಾಗಿ ಮೂಲ ಸೌಲಭ್ಯಗಳು ಸಿಗುತ್ತಿಲ್ಲ. ಸಮಗ್ರ ಅಭಿವೃದ್ಧಿಗಾಗಿ ಡಂಬಳ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡಲು ಈ ಭಾಗದ ಜನಪ್ರತಿನಿಧಿಗಳು
ಮುಂದಾಗಬೇಕು.
ಈರಣ್ಣ ನಂಜಪ್ಪನವರ, ಸಾಮಾಜಿಕ ಕಾರ್ಯಕರ್ತ, ಡಂಬಳ

ಡಂಬಳ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಸರ್ಕಾರದ ಆದೇಶ ಬಂದ ತಕ್ಷಣ ಕಾರ್ಯನ್ಮಖರಾಗಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿಸಲಾಗುವುದು.
ಯುವರಾಜ ಮುಂಡರಗಿ, ತಾಪಂ ಇಒ

ವಿಜಯ ಸೊರಟೂರ

Advertisement

Udayavani is now on Telegram. Click here to join our channel and stay updated with the latest news.

Next