Advertisement

ಭಯ ಹುಟ್ಟಿಸುವ ಬ್ಯಾಂಕಿಂಗ್‌ ಹೊರತಾಗಿ…..

02:35 PM Jan 15, 2018 | |

ಮತ್ತೆ ಮತ್ತೆ ಬ್ಯಾಂಕಿಂಗ್‌ ಬಗ್ಗೆ ಬರೆಯಬೇಕಾಗಿದೆ. ನಿಧಾನವಾಗಿಯಾದರೂ ನಾವು ನಗದು ರಹಿತ ವ್ಯವಸ್ಥೆಗಳಿಗೆ ಹೊಂದಿಕೊಳ್ಳುತ್ತಿರುವಾಗ ಬ್ಯಾಂಕಿಂಗ್‌ ವ್ಯವಸ್ಥೆಗಳು ಹೆಚ್ಚು ಹೆಚ್ಚು ಬೇಕಾಗುತ್ತದೆ. ದಂಡ ಪ್ರಸ್ತಾಪದ ಮೂಲಕ ಅತಿ ಹೆಚ್ಚಿನ ಆದಾಯ ಗಳಿಸುವ ಬ್ಯಾಂಕ್‌ ಚಟುವಟಿಕೆ, ಅದರ ಅಪಾಯಗಳ ಕುರಿತ ಒಂದು ಪಕ್ಷಿ$ನೋಟವನ್ನು ಅದಾಗಲೇ ಹರಿಸಿಯಾಗಿದೆ. ಅದರ ಇತರ ಆಯಾಮಗಳತ್ತಲೂ ನೋಡಬೇಕು. 

Advertisement

ಬಡ್ಡಿ ಲಾಭ!
ಸಾಮಾನ್ಯವಾಗಿ ಠೇವಣಿಗಳಿಗೆ ಕೊಡುವ ಬಡ್ಡಿ ದರದಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸ ಇರಬಹುದಾದರೂ, ಆ ದರದ ಹಿಂದಿನ ನೀತಿ ಒಂದೇ ಮಾದರಿಯಲ್ಲಿರುತ್ತದೆ. ಎರಡು ವರ್ಷಗಳವರೆಗೆ ನಿಗದಿತ ಸಮಯದ ವರ್ಗೀಕರಣದಲ್ಲಿ ಬಡ್ಡಿ ದರ ಹೆಚ್ಚುತ್ತಾ ಹೋಗುತ್ತದೆ. ಆನಂತರದ ದೀರ್ಘಾವಧಿ ಬಡ್ಡಿ ದರ, ತುಸು ಕಡಿಮೆ ಇರುತ್ತದೆ. ಈ ನಡುವೆ ಮೂರು ಅಥವಾ ಆರು ತಿಂಗಳ ಅಲ್ಪಾವಧಿಯ ಬಡ್ಡಿ ದರ ಬ್ಯಾಂಕ್‌ ಕೊಡುವ ಅಧಿಕ ಬಡ್ಡಿದರದ ಹತ್ತಿರ ಇರುತ್ತದೆ.  ಠೇವಣಿ ಮಾಡುವವರು ಈ ಆಯ್ಕೆಯನ್ನೇ ಮಾಡಿಕೊಂಡರೆ ಹೆಚ್ಚು ಬಡ್ಡಿ ಪಡೆಯಬಹುದು.

ಎರಡು ರೀತಿಯಲ್ಲಿ ಇಂತಹ ಸೂತ್ರ ಲಾಭದಾಯಕ. ಈಗ ಪ್ರಿಮೆಚೂರ್‌ ಠೇವಣಿಗೆ ದಂಡದ ಪ್ರಸ್ತಾಪ ಇಲ್ಲದಿದ್ದರೂ ದೀರ್ಘಾವಧಿಯ ಠೇವಣಿಯನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ನಗದೀಕರಿಸಿಕೊಂಡರೆ ಅದಕ್ಕೆ ನಾವು ಠೇವಣಿ ಇರಿಸಿದ ದಿನದಿಂದ ಮುಕ್ತಾಯ ಹಾಡಿದ ದಿನದವರೆಗಿನ ಲೆಕ್ಕದಲ್ಲಿ ಬಡ್ಡಿದರ ಲೆಕ್ಕ ಹಾಕಿ ಮರಳಿಸಲಾಗುತ್ತದೆ. ಇದು ಕಡಿಮೆ ಬಡ್ಡಿದರಕ್ಕೆ ತೃಪ್ತಿ ಪಡಬೇಕಾದ ಸ್ಥಿತಿ. ಆದರೆ ಅಧಿಕ ಬಡ್ಡಿದರದ ಅಲ್ಪಾವಧಿಯ ಠೇವಣಿ ಸ್ಥಿತಿಯಲ್ಲಿ ಆಟೋ ರಿನ್ಯೂವಲ್‌ ಆಯ್ಕೆ ಕೊಟ್ಟಾಗ ಅದು ಪ್ರತಿ 3 ಅಥವಾ 6 ತಿಂಗಳಿಗೆ ನವೀಕರಿಸಲ್ಪಡುತ್ತದೆ. ಆನಂತರದ ಅವಧಿಯಲ್ಲಿ ಹಿಂಪಡೆದರೆ ಆ ಕೊನೆಯ ಅವಧಿಯ ಬಡ್ಡಿದರದಲ್ಲಿ ಮಾತ್ರ ಕಡಿತವಾಗುತ್ತದೆ. ಒಂದು ಠೇವಣಿ ಸಾಮಾನ್ಯವಾಗಿ ಎಷ್ಟು ಬಾರಿ ಬೇಕಾದರೂ ಆಟೋ ರಿನ್ಯೂವಲ್‌ ಆಗುತ್ತದೆ. ಅದೃಷ್ಟಕ್ಕೆ ಬ್ಯಾಂಕ್‌ಗಳು ಈವರೆಗೆ ಇದಕ್ಕೆ ಗರಿಷ್ಠ ಮಿತಿ ಹೇರಿಲ್ಲ.

ನಿಜ, ಒಂದು ಅಪಾಯವಿದೆ, ಬಡ್ಡಿ ದರದ ಕುಸಿತದ ಪರಿಣಾಮ ಠೇವಣಿಯ ಮೇಲೆ ಆಗುತ್ತದೆ. ಈಗಾಗಲೇ ಬಡ್ಡಿದರ ತೀವ್ರ ಕುಸಿತ ಕಂಡಿರುವುದರಿಂದ ಇನ್ನಷ್ಟು ಕುಸಿತ ಬ್ಯಾಂಕ್‌ಗಳ ಅಸ್ಥಿತ್ವಕ್ಕೇ ಧಕ್ಕೆ ತರುವಂಥದು ಹಾಗೂ ಒಂದೊಮ್ಮೆ ಕುಸಿದರೂ ಅದು ತೀರಾ ಕನಿಷ್ಠ ಪ್ರಮಾಣದಲ್ಲಿ ಕೆಳಗಿಳಿದೀತು. ಕೈಗೆಟಕುವ ಬಡ್ಡಿಯಲ್ಲಿ ಅಂತಹ ವ್ಯತ್ಯಯ ಆಗುವುದಿಲ್ಲ. ಸದರಿ ಹಣ ಸಂಕಷ್ಟದ ಕಾಲದಲ್ಲೂ ಬೇಡ ಎಂಬಂತಹ ಸುಖಜೀವಿಗಳಿಗೆ ದೀರ್ಘಾವಧಿ ಠೇವಣಿ ಲೇಸು.

ಗೀಚಿದ ನೋಟು ಅಮಾನ್ಯವಲ್ಲ!
ಕಾನೂನು ಅಥವಾ ಆದೇಶಗಳು ಸಾಮಾನ್ಯವಾಗಿ ಸಾಮಾನ್ಯರನ್ನೇ ಗೋಳಾಡಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಹೊಸ 2 ಸಾವಿರ ರೂ.  ಹಾಗೂ 500ರ ನೋಟಿನ ಮೇಲೆ ಪುಟ್ಟ ಗೆರೆ ಬರೆದಿದ್ದರೂ ಆ ನೋಟುಗಳನ್ನು ಸ್ವೀಕರಿಸಲು ಬೇರೆಯವರು ಬಿಡಿ, ಬ್ಯಾಂಕ್‌ನವರೇ ನಿರಾಕರಿಸುತ್ತಿದ್ದಾರೆ. ನೋಟುಗಳ ಮೇಲೆ ಅಕ್ಷರ, ಕಲಾಕೃತಿ ಮಾಡುವ ಜನರಿರುವಾಗ ಇಂಥ ಕಠಿಣ ಕ್ರಮ ಒಂದು ಮಟ್ಟಿಗೆ ಅಗತ್ಯ. ಆದರೆ ಗೊತ್ತಾಗದೆ, ನೋಟಿನ ಕಟ್ಟಿನ ನಡುವೆ ತೂರಿ ಬರುವ ಇಂಥ ನೋಟುಗಳನ್ನು ಸಾರಾಸಗಟಾಗಿ ನಿರಾಕರಿಸಿದರೆ ಬಡಪಾಯಿ ನಾಗರೀಕ ಏನು ಮಾಡಬೇಕು?

Advertisement

ಮಾಹಿತಿ ಹಕ್ಕು ಕಾರ್ಯಕರ್ತರಲ್ಲೋರ್ವರಾದ ಅಶೀಶ್‌ಕುಮಾರ್‌ ಆರ್‌ಬಿಐನಿಂ ದ ಪಡೆದ ಮಾಹಿತಿ ಬೇರೆಯದೇ ಸತ್ಯ ಹೇಳುತ್ತದೆ. 500 ಹಾಗೂ 2000ದ ನೋಟುಗಳ ಮೇಲೆ ಇಂಕ್‌ನಿಂದ ಬರೆದಿದ್ದರೂ ಅದನ್ನು ಸ್ವೀಕರಿಸಬೇಕು. ನೋಟುಗಳನ್ನು ತಿರಸ್ಕರಿಸುವ ಅಧಿಕಾರ ಯಾರಿಗೂ ಇಲ್ಲ. ಧಾರ್ಮಿಕ ಅಥವಾ ರಾಜಕೀಯ ಸಂದೇಶಗಳನ್ನು ಬರೆದಿದ್ದ ಸಂದರ್ಭದಲ್ಲಿ 2009ರ ನೋಟ್‌ ರೀಫ‌ಂಡ್‌ ನಿಯಮಗಳ ಪ್ರಕಾರ ಅದನ್ನು ತೆಗೆದುಕೊಳ್ಳಲು ನಿರಾಕರಿಸಬಹುದು. ಹಾಗಂತ ಯಾರೂ ನೋಟುಗಳ ಮೇಲೆ ಬರೆಯದಿರಿ.

ಬ್ಯಾಂಕ್‌ ಅವ್ಯವಹಾರಗಳ ಮಾಹಿತಿ ಲಭ್ಯ!
ಬ್ಯಾಂಕ್‌ನ ಸಿಬ್ಬಂದಿ ಅಥವಾ ಹೊರಗಿನವರು ಬ್ಯಾಂಕಿಂಗ್‌ ವ್ಯವಹಾರದಲ್ಲಿ ಮಾಡಿದ ಅಪರಾತಪರಾದ ಮಾಹಿತಿಯನ್ನು ಮಾಹಿತಿ ಹಕ್ಕಿನಡಿ ಕೇಳಿದರೆ ಯಾವುದೇ ಬ್ಯಾಂಕ್‌ ಕಾಯ್ದೆಯ ಸೆಕ್ಷನ್‌ 8(1)(ಡಿ) ನೆಪ ಒಡ್ಡಿ ಮಾಹಿತಿಯನ್ನು ನಿರಾಕರಿಸುವಂತಿಲ್ಲ. ಇದು ನ್ಯಾಯಾಲಯದ ತೀರ್ಪು. ಕೆನರಾ ಬ್ಯಾಂಕ್‌ನ ಬೆಂಗಳೂರು ಕಚೇರಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ ದಾವಣಗೆರೆಯ ಹೆಚ್‌.ಬಸವರಾಜ್‌, 2010ರ ಮಾರ್ಚ್‌ 30ರೊಳಗೆ ಬ್ಯಾಂಕ್‌ನಲ್ಲಾದ ಎಲ್ಲ ಭ್ರಷ್ಟಾಚಾರ, ನಷ್ಟ ಹಾಗೂ ದುರುಪಯೋಗದ ಪ್ರಕರಣಗಳ ಮಾಹಿತಿ ಕೊಡಿ ಎಂದು ಅರ್ಜಿ ಸಲ್ಲಿಸಿದ್ದರು. ಬ್ಯಾಂಕ್‌ ಕಾಯ್ದೆಯ “ಕಮರ್ಷಿಯಲ್‌ ಕಾನ್ಫಿಡೆನ್ಸ್‌’ ಅವಕಾಶವನ್ನು ಬಳಸಿಕೊಂಡು ಅರ್ಜಿಗೆ ಮಾಹಿತಿ ನೀಡಲು ನಿರಾಕರಿಸಿತ್ತು. ಮೇಲ್ಮನೆ ಪ್ರಾಧಿಕಾರದಲ್ಲೂ ಅರ್ಜಿದಾರನ ಅಹವಾಲು ಬಿದ್ದುಹೋದುದರಿಂದ ಕೇಂದ್ರ ಮಾಹಿತಿ ಆಯೋಗದ ಮುಂದೆ ಪ್ರಕರಣ ದಾಖಲಾಯಿತು.

ಈ ಹಂತದಲ್ಲಿ ಮಾಹಿತಿ ನಿರಾಕರಿಸಿದ್ದನ್ನು ಸಮರ್ಥಿಸಿಕೊಂಡ ಬ್ಯಾಂಕ್‌, ಅರ್ಜಿದಾರ 2010ರವರೆಗೆ ಎಂದು ತಿಳಿಸಿದ್ದಾನೆಯೇ ವಿನಃ, ಯಾವ ವರ್ಷದಿಂದ ಯಾವ ವರ್ಷದವರೆಗೆ ಎನ್ನುವುದನ್ನು ತಿಳಿಸಿಲ್ಲ. ಭ್ರಷ್ಟಾಚಾರ ನಡೆದ ಬ್ಯಾಂಕ್‌ ಶಾಖೆಯನ್ನು ನಿರ್ದಿಷ್ಟಪಡಿಸಿಲ್ಲ. ಕೇಳಿದ ಮಾಹಿತಿ ನಮ್ಮಲ್ಲಿ ಸಂಗ್ರಹಿಸಿಡಲಾಗಿಲ್ಲ. ಇಂತಹ ಮಾಹಿತಿ ಕೊಡುವುದರಿಂದ ಬ್ಯಾಂಕ್‌ನ ಗೌರವಕ್ಕೆ ಧಕ್ಕೆಯಾಗುತ್ತದೆ. ಇದರಿಂದಾಗಿ ಬ್ಯಾಂಕ್‌ನ ಕುರಿತಾಗಿ ಸಾರ್ವಜನಿಕ ತಿಳುವಳಿಕೆ ಪ್ರಭಾವಿತವಾಗಿ ವ್ಯವಹಾರ ಕುಸಿಯುವ ಸಾಧ್ಯತೆಗಳಿವೆ. ಹಾಗಾಗಿ ಇದನ್ನು ವ್ಯಾವಹಾರಿಕ ಗುಟ್ಟು ಎಂಬ ನೆಲಗಟ್ಟಿನ ಮೇಲೆ ನಿರಾಕರಿಸಿದ್ದೇವೆ ಎಂದು ಪ್ರತಿಪಾದಿಸಿತು.

ಬಸವರಾಜ್‌ ಒಂದೇ ಅಂಶವನ್ನು ವಾದಿಸಿದರು, ಪ್ರತಿ ಬ್ಯಾಂಕ್‌ ಪ್ರತಿ ವರ್ಷ ರಿಸರ್ವ್‌ ಬ್ಯಾಂಕ್‌ಗೆ ವಾರ್ಷಿಕ ವರದಿ ಸಲ್ಲಿಸಿ, ಆದ ಅವ್ಯವಹಾರ, ದುರುಪಯೋಗದ ಮಾಹಿತಿ ಕೊಡುತ್ತದೆ. ಇದು ಸಾರ್ವಜನಿಕ ಮಾಹಿತಿಯಾಗಿದ್ದು ನನಗೆ ಕೊಡಿಸಿ. ಎರಡೂ ಮನವಿಗಳನ್ನು ಆಲಿಸಿದ ಕೇಂದ್ರ ಆಯೋಗ, ಅರ್ಜಿದಾರನ ವಾದವನ್ನೇ ಪುರಸ್ಕರಿಸಿತು. ಬ್ಯಾಂಕುಗಳು ಆಡಳಿತ ಮತ್ತು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದು ಕೊಂಡರೆ ಅದರಿಂದ ವ್ಯಾವಹಾರಿಕ ನಷ್ಟ ಆಗುತ್ತದೆನ್ನುವುದನ್ನು ಒಪ್ಪುವಂತಿಲ್ಲ.  ಕಾಯ್ದೆಯ ರಿಯಾಯಿತಿಗಳ ಪರಿಧಿಗೆ ಭ್ರಷ್ಟಾಚಾರದ ವರಗಳು ಬರುವುದಿಲ್ಲ. ಹಾಗಾಗಿ, ದೂರುದಾರ ಕೇಳಿರುವ ಮಾಹಿತಿ ಕೊಡತಕ್ಕದ್ದು ಎಂದು ಆದೇಶಿಸಿತು.

ಬ್ಯಾಂಕ್‌ಗಳಲ್ಲಿ ಮೊಬೈಲ್‌ ನಿಷೇಧ ಜಾರಿಯಲ್ಲಿಲ್ಲ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮೊಬೈಲ್‌ ಬಳಸುವವರನ್ನು ಕಂಡರೆ ಕೆಕ್ಕರಿಸಿ ನೋಡುತ್ತಿದ್ದ ಬ್ಯಾಂಕ್‌ ಸಿಬ್ಬಂದಿ ಇನ್ನು ಮುಂದೆ ಬದಲಾಗಬೇಕಿದೆ.  ಬ್ಯಾಂಕ್‌ಗಳಲ್ಲಿ ಮೊಬೈಲ್‌ ಬಳಕೆ ನಿಷೇಧ ಮಾಡಿಯೇ ಇಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಸ್ಪಷ್ಟಪಡಿಸಿದೆ. 
ಇದಕ್ಕೊಂದು ಹಿನ್ನೆಲೆ ಕಥೆಯೂ ಇದೆ. ಗುರುವಾಯನಕೆರೆ ಸುàಪದ ಶಕ್ತಿನಗರದ ಗೋಪಿನಾಥ ಪ್ರಭು ಬ್ಯಾಂಕೊಂದರಲ್ಲಿ ಅನುಭಸಿದ ಕಿರಿಕಿರಿಯಿಂದ ಆರ್‌ಬಿಐ ಮೊರೆ ಹೋಗಿದ್ದರು. ಬ್ಯಾಂಕ್‌ನಲ್ಲಿ ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ ಎಂದು ಬೋರ್ಡು ತೂಗು ಹಾಕಲಾಗಿತ್ತು. ಗ್ರಾಹಕರ ಮೊಬೈಲ್‌ ರಿಂಗಾದರೆ ಬ್ಯಾಂಕ್‌ನವರು ಚೇಳು ಕಡಿದಂತೆ ವರ್ತಿಸುತ್ತಿದ್ದರು. ಅಂತಹ ಗ್ರಾಹಕರ ಜತೆ ವ್ಯವಹರಿಸಲು ಸತಾಯಿಸುತ್ತಿದ್ದರು. ಗ್ರಾಹಕರ ಜತೆ ಮೊಬೈಲ್‌ ಬಳಕೆಯನ್ನು ಇತರರಿಗೆ ತೊಂದರೆಯಾಗದ ರೀತಿ ಮಾಡಿ ಎಂದು ವಿನಂತಿ ಮಾಡಬಹುದೇ ಹೊರತು ಆದೇಶ ನೀಡುವಂತಿಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಸ್ಪಷ್ಟಪಡಿಸಿದೆ. ನೆನಪಿಡಿ, ಬ್ಯಾಂಕ್‌ಗಳಲ್ಲಿ ತೂಗು ಹಾಕಲಾಗುವ “ನಿಷೇಧ’ದ  ಬೋರ್ಡು ಮಾಯವಾಗಬೇಕಾಗಿದೆ!

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next