Advertisement
ಎಫ್ಎಂ ರೇನ್‌ಬೋ ಆರಂಭದ ದಿನ. ಅಪರ್ಣಾ ಅವರದ್ದು ಸಂಜೆಯ ಪಾಳಿ. ಅದಾಗಲೇ ವಿವಿಧ ಭಾರತಿ ಎಫ್ಎಂ ತಂತ್ರಜ್ಞಾನಕ್ಕೆ ಅಳವಡಿಸಿ ಕೊಂಡಿತ್ತು. ಆದರೂ, ಗಂಟೆಗೆ ಒಂದು ವಿಚಾರ, ಮಾತು, ಮಾಹಿತಿ, ಹಾಡು, 17 ಗಂಟೆ ನಿರಂತರ ಹಾಡುಗಳು! ಪ್ರಸ್ತುತಿ, ಶೋ ಪರಿಕಲ್ಪನೆ! ಇವೆಲ್ಲ ಆಕಾಶವಾಣಿಗೂ ಹೊಸದು.
Related Articles
Advertisement
ಪ್ರಜ್ಞಾವಂತ ನಿರೂಪಕಿ
ಖ್ಯಾತ ಗಾಯಕಿ ಸುಲೋಚನಾ ಇಹಲೋಕ ತ್ಯಜಿಸಿದ ಸಂದರ್ಭ. ಅವರನ್ನು ಕುರಿತು ನಮ್ಮಲ್ಲಿ ಹೆಚ್ಚು ಮಾಹಿತಿ ಇರಲಿಲ್ಲ. ಆಗ ಅಪರ್ಣಾ ಅಷ್ಟನ್ನೇ ಹೇಳಿದರು: “ಹೆಚ್ಚು ಮಾಹಿತಿ ಬೇಕಿದೆ, ತಿಳಿಸುತ್ತೇವೆ ಶ್ರೋತೃಗಳೇ…’ ಎಂದು.
ಇದನ್ನು ಕೇಳಿ ಅಶ್ವಥ್ ಕುಲಕರ್ಣಿ ಎಂಬ ಶ್ರೋತೃ ಒಬ್ಬರು ಅಪರ್ಣಾ ಅವರಿಗೆ ಕರೆ ಮಾಡಿ -“ತಮ್ಮ ಬಳಿ ಗಾಯಕಿ ಸುಲೋಚನಾ ಅವರನ್ನು ಕುರಿತು ಪೂರ್ಣ ಮಾಹಿತಿ ಇದೆಯೆಂದು’ ಹೇಳಿದರು. ಕೂಡಲೇ ಅವರ ಪೂರ್ವಾಪರ ವಿಚಾರಿಸಿ, ಅಧಿಕಾರಿಗಳಿಗೆ ತಿಳಿಸಿ, ಅಶ್ವಥ್ ಅವರನ್ನು ನೇರ ಸಂಪರ್ಕ ಮಾಡಿ ಪೂರ್ತಿ ವಿವರ ಪ್ರಸಾರ ಆಗುವ ಹಾಗೆ ನೋಡಿಕೊಂಡರು. ತಮ್ಮ ಪ್ರಸಂಗಾವಧಾನ, ಸಮಯಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಿಕೊಳ್ಳುವ ತಮ್ಮ ಗುಣಗಳಿಂದ ಅಪರ್ಣಾ ಎಲ್ಲರ ಪ್ರೀತಿ ಗಳಿಸಿದ್ದರು. ಅವರ ಜೊತೆಗಿನ ಒಡನಾಟ ನೆನೆಸಿಕೊಳ್ಳುತ್ತ –
ಕನ್ನಡಮ್ಮನ ದೇವಾಲಯ
ಕಂಡೇ ಹೆಣ್ಣಿನ ಕಂಗಳಲಿ
ಕನ್ನಡ ನಾಡಿನ ಚರಿತೆಯನು
ಕಂಡೇ ಆಕೆಯ ಹೃದಯದಲಿ
ವಂದನೆ ಆ ಹೆಣ್ಣಿಗೇ…
ಮೊನ್ನೆ ವಿವಿಧಭಾರತಿಯಲ್ಲಿ ಈ ಗೀತೆ ಯನ್ನು ಪ್ರಸಾರ ಮಾಡಿ, ಇದು ನಮ್ಮನ್ನು ಅಗ ಲಿದ ಅಪರ್ಣಾ ಅವರಿಗೆ ಅರ್ಪಣೆ ಎಂದು ಹೇಳಿದಾಗ ನೂರಾರು ಸಂದೇಶಗಳು, ಪ್ರತಿ ಕ್ರಿಯೆಗಳು ಹರಿದು ಬಂದವು. “ಬ್ರಹ್ಮಾಸ್ತ್ರ’ ಚಿತ್ರದ ಈ ಹಾಡು, ಅಪರ್ಣಾ ಅವರಿಗಾಗಿಯೇ ಬರೆದಂತಿದೆ.
ಉದ್ಘೋಷಕಿಯಾಗಿ…
ಅಪರ್ಣಾ ಆಕಾಶವಾಣಿಗೆ ಹೆಜ್ಜೆ ಇಟ್ಟದ್ದು ಬಾಲಕಲಾವಿದೆಯಾಗಿ. ನಂತರದಲ್ಲಿ ಅವರು ಆಕಾಶವಾಣಿಗೆ ತಾತ್ಕಾಲಿಕ ಉದ್ಘೋಷಕಿಯಾಗಿ ಬರುತ್ತಿದ್ದರು. ಅಂದರೆ, ನಿಲಯದ ಸಿಬ್ಬಂದಿ, ಉದ್ಘೋಷಕರು ರಜೆ ಹಾಕಿದಾಗ, ಸಿಬ್ಬಂದಿ ಕೊರತೆ ಆದಾಗ ಹೊರಗಿನ ಕಲಾವಿದರಿಗೆ ಒಂದು ಪಾಳಿಯನ್ನು ಒಪ್ಪಂದದ ಮೇರೆಗೆ ನಿರ್ವಹಣೆ ಮಾಡಲು ಅವಕಾಶ ನೀಡುತ್ತದೆ ಆಕಾಶವಾಣಿ. ಬೆಳಗ್ಗೆ, ಸಂಜೆ ಮತ್ತು ಮಧ್ಯಾಹ್ನ ಮೂರೂ ಪಾಳಿ ಗಳಲ್ಲಿ ಯಾವುದೇ ಪಾಳಿ ವಹಿಸಿದರೂ ಅವರು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತಿದ್ದರು.
ಅಪರ್ಣಾ ಇದ್ದರೆ ನಿರಾಳ. ಅವರು ಏನೇ ಇದ್ದರೂ ನಿಭಾಯಿಸುತ್ತಾರೆ ಎಂಬ ವಿಶ್ವಾಸ ಎಲ್ಲರಿಗೂ ಇತ್ತು. ಶಾಸ್ತ್ರೀಯ ಸಂಗೀತ, ಚಿತ್ರಗೀತೆ, ಮಾತು, ನಾಟಕ, ರೂಪಕ ಮಾಹಿತಿ… ಎಲ್ಲದಕ್ಕೂ ಅವರು ಹೊಂದಿಕೊಳ್ಳುತ್ತಿದ್ದರು. ಒಮ್ಮೆ ಕಾರ್ಯಕ್ರಮ ಪಟ್ಟಿ ನೋಡಿಕೊಂಡರೆ ಆಯಿತು, ತುಂಬ ಬೇಗನೆ ಅರ್ಥ ಮಾಡಿಕೊಂಡು ಮುತ್ತು ಪೋಣಿಸಿದ ಹಾಗೆ ವಾಕ್ಯ ಪೋಣಿಸಿ ಮಾತನಾಡುತ್ತಿದ್ದರು.
ನಿರೂಪಣಾ ಜಗತ್ತು ಇನ್ನೂ ಹೀಗೆ ವ್ಯಾಪಿಸಿರದ ಸಮಯದಲ್ಲಿ, ಅದು ಒಂದು ವ್ಯಾಪಾರ, ಅಬ್ಬರ, ಟಿಆರ್‌ಪಿ ಆಗಿರದೆ, ನಿಜದ ಉದ್ಘೋಷಣೆ, ನಿಜದ ಪ್ರಸ್ತುತೀಕರಣ, ನಿಜದ ಕಲೆ ಅನಿಸಿಕೊಂಡಿದ್ದ ಆ ನಿಜ ಸಮಯದಲ್ಲಿ “ನಿಜದ ನಿಜವಾಗಿ’ ಬೆಳೆದ ವರು ಅಪರ್ಣಾ. ಕನ್ನಡದ ಜನ ಮನಗಳ ವಿವಿಧ ಭಾವಗಳ ಕಿಂಡಿಗಳನ್ನು ಬೆಸೆದು ಸಾಗಿದ ನಿರೂಪಣಾ ಕೊಂಡಿ. ಅಬ್ಬರವಿಲ್ಲದ ಅವರ ಮೃದು ಮಾತು ಕೇಳಿಸುತ್ತಲೇ ಇದೆ, ನಾವು ಕಿವಿಕೊಡಬೇಕು ಅಷ್ಟೇ.
ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ…
ಅಪರ್ಣಾ, ನಿಮಗೆ ಇಷ್ಟವಾದ ಹಾಡು ಯಾವುದು? ಎಂದು ಅದೊಮ್ಮೆ ಕೇಳಿದಾಗ ಆಕೆ ಮೆಲುದನಿಯಲ್ಲಿ ಹೇಳಿದ್ದರು: ಎಲ್ಲೆಲ್ಲಿ ನೋಡಲಿ, ನಿನ್ನನ್ನೇ ಕಾಣುವೆ, ಕಣ್ಣಲ್ಲಿ ತುಂಬಿರುವೆ, ಮನದಲಿ ಮನೆ ಮಾಡಿ ಆಡುವೆ..!ಈಗೊಮ್ಮೆ ಅವರನ್ನು ನೆನಪು ಮಾಡಿಕೊಂಡಾಗ ನಾವು ಹೇಳುವ ಹಾಡೂ ಅದೇ ಆಗುತ್ತದೆ!!
ಒಮ್ಮೆ ಮುಖ ನೋಡಿ, ಅವರಿಗೇನಪ್ಪ…ಆರಾಮಾಗಿದಾರೆ ಅಂದುಬಿಡ್ತಾರೆ ಜನ. ಆದರೆ ವಾಸ್ತವ ಹಾಗೆ ಇರಲ್ಲ. ಎಲ್ಲರಿಗೂ ಕಷ್ಟ ಇರುತ್ತೆ. ಆದರೆ, ಆ ಕಷ್ಟವನ್ನು ಎದುರಿಸಿ ನಕ್ಕೊಂಡು ಆರಾಮ್ಸೆ ಇರಬೇಕು. ಹಕ್ಕಿ ಹಾರೋದು ಒಂದು ಸಂಭ್ರಮ, ಹೂವು ಅರಳ್ಳೋದು ಒಂದು ಸಂಭ್ರಮ. ಜೀವನದಲ್ಲಿ ನಾವು ನೋಡುವ ದೃಷ್ಟಿ ತುಂಬಾ ಮುಖ್ಯ ಆಗುತ್ತೆ. ಜೀವನ ಒಂದು ನಿತ್ಯೋತ್ಸವ. -ಅಪರ್ಣಾ ವಸ್ತಾರೆ