ಮುಂಬೈ: ದೇಶದ ಜನರು ಅತೀ ಹೆಚ್ಚು ಪ್ರೀತಿಸುವ ಕ್ರಿಕೆಟ್ ಮತ್ತು ರಾಜಕೀಯದಲ್ಲಿ ಏನು ಬೇಕಾದರೂ ಸಂಭವಿಸಬಹುದು. ಕ್ರಿಕೆಟ್ ಎಂಬ ಕ್ರೀಡೆಯಲ್ಲಿ ಹೇಗೆ ಫಲಿತಾಂಶ ನಿರ್ಧಾರವಾಗುತ್ತದೋ ಅದೇ ರೀತಿ ರಾಜಕೀಯದ ಭವಿಷ್ಯ ಕೂಡಾ ಕರಾರುವಕ್ಕಾಗಿ ಹೇಳಲು ಆಗಲ್ಲ ಎಂದು ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟಿನ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಹೋಲಿಕೆ ಮೂಲಕ ತಿರುಗೇಟು ನೀಡಿದ್ದಾರೆ.
ರಾಜಕೀಯ ಮತ್ತು ಕ್ರಿಕೆಟ್ ನಲ್ಲಿ ಏನು ಬೇಕಾದರೂ ಸಂಭವಿಸಬಹುದು. ಕೆಲವೊಮ್ಮೆ ಪಂದ್ಯ ಸೋಲಬಹುದು ಎಂದು ಲೆಕ್ಕಚಾರ ಹಾಕುತ್ತೀರಿ. ಆದರೆ ಫಲಿತಾಂಶ ಅದಕ್ಕೆ ತದ್ವಿರುದ್ಧವಾಗಿರುತ್ತದೆ ಎಂದು ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ.
ಅಕ್ಟೋಬರ್ 24ರಂದು ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಮಹಾರಾಷ್ಟ್ರದಲ್ಲಿ ಯಾವ ಪಕ್ಷಕ್ಕೂ ಸರ್ಕಾರ ರಚಿಸಲು ಸಾಧ್ಯವಾಗದೆ, ರಾಷ್ಟ್ರಪತಿ ಆಡಳಿತ ಹೇರಿಕೆಯಾದ ನಂತರ ಈ ಕುರಿತು ಗಡ್ಕರಿ ಅವರಿಗೆ ಕೇಳಿದ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜಕೀಯದ ಕುರಿತು ಪೂರ್ಣ ವಿವರ ನನಗೆ ಗೊತ್ತಿಲ್ಲ. ನಾನೀಗ ದೆಹಲಿಗೆ ಬಂದಿದ್ದೇನೆ. ನನಗೆ ಅಲ್ಲಿನ ರಾಜಕೀಯ ಚಿತ್ರಣದ ಪೂರ್ಣ ಮಾಹಿತಿ ಇಲ್ಲ ಎಂದು ಗಡ್ಕರಿ ಹೇಳಿದರು.
ಬಿಜೆಪಿ ಮತ್ತು ಶಿವಸೇನಾ ಮಹಾರಾಷ್ಟ್ರ ಚುನಾವಣೆಯಲ್ಲಿ ಮೈತ್ರಿಯೊಂದಿಗೆ ಸ್ಪರ್ಧಿಸಿದ್ದವು. ಆದರೆ ಅಧಿಕಾರ ಹಂಚಿಕೆ ವಿಚಾರದಲ್ಲಿ ತಲೆದೋರಿದ್ದ ಭಿನ್ನಾಭಿಪ್ರಾಯದಿಂದಾಗಿ ಎರಡೂ ಪಕ್ಷಗಳೂ ಸರ್ಕಾರ ರಚಿಸಲು ವಿಫಲವಾಗಿದ್ದವು. ತಮಗೂ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಶಿವಸೇನೆ ಪಟ್ಟು ಹಿಡಿದಿತ್ತು. ಆದರೆ ಚುನಾವಣಾ ಪೂರ್ವದಲ್ಲಿ ಇಂತಹ ಯಾವುದೇ ಒಪ್ಪಂದ ಆಗಿಲ್ಲವಾಗಿತ್ತು ಎಂದು ಬಿಜೆಪಿ ಸ್ಪಷ್ಟಪಡಿಸುವ ಮೂಲಕ ಶಿವಸೇನೆಯ ಬೇಡಿಕೆಯನ್ನು ತಿರಸ್ಕರಿಸಿತ್ತು.
ನಂತರ ಶಿವಸೇನಾ ಮತ್ತು ಎನ್ ಸಿಪಿ, ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದರೂ ಕೂಡಾ ಸರ್ಕಾರ ರಚಿಸುವಲ್ಲಿ ವಿಫಲರಾದ ನಂತರ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.