Advertisement

Udupi; ಇಂದ್ರಾಳಿ ರೈಲ್ವೇ ಸ್ಟೇಷನ್‌ಗೆ ಯಾರೂ ನುಗ್ಗಬಹುದು!!

06:06 PM Aug 01, 2024 | Team Udayavani |

ಉಡುಪಿ: ಮಂಗಳೂರು ಮತ್ತು ಕಾರವಾರದ ನಡುವೆ ಸಿಗುವ ಅತೀ ದೊಡ್ಡ ರೈಲು ನಿಲ್ದಾಣ ಇಂದ್ರಾಳಿ. ದಿನಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬಂದು ಹೋಗುವ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಸೂಕ್ತ ಭದ್ರತೆಯೇ ಇಲ್ಲ ಎಂದರೆ ನಿಮಗೆ ಅಚ್ಚರಿ ಆಗಬಹುದು.

Advertisement

ಮುಂಜಾನೆ, ರಾತ್ರಿ ಎನ್ನದೆ ಅದೆಷ್ಟೋ ಮಂದಿ ಪ್ರಯಾಣಕರು ಇಲ್ಲಿ ರೈಲು ಹತ್ತುತ್ತಾರೆ, ರೈಲು ಇಳಿಯುತ್ತಾರೆ.ತಮ್ಮ ಊರಿಗೆ/ ಪ್ರವಾಸಿ ತಾಣ, ಶಿಕ್ಷಣ ಸಂಸ್ಥೆಗಳಿಗೆ ಬಂದು ಹೋಗುವವರು ಸಾವಿರಾರು ಮಂದಿ. ಆದರೆ, ಇಲ್ಲಿ ರೈಲು ನಿಲ್ದಾಣದಲ್ಲಿ ಭದ್ರತೆಯ ಕೊರತೆ ತೀವ್ರವಾಗಿ ಕಾಡುತ್ತದೆ.

ರೈಲು ನಿಲ್ದಾಣದ ಪರಿಸ್ಥಿತಿ ಹೇಗಿದೆ ಎಂದರೆ, ಇಲ್ಲಿ ಯಾರು ಬೇಕಾದರೂ ನುಗ್ಗಬಹುದು! ಯಾರೂ ಕೇಳುವುದಿಲ್ಲ. ಸಾಮಾನ್ಯವಾಗಿ ಯಾವುದೇ ರೈಲು ನಿಲ್ದಾಣಕ್ಕೆ ಪ್ರಯಾಣಿಕರಲ್ಲದವರು ಪ್ರವೇಶಿಸಬೇಕಾದರೆ ಪ್ಲ್ರಾಟ್‌ಫಾರಂ ಟಿಕೆಟ್‌ ಪಡೆಯಬೇಕು. ವಿಚಾರಣೆ ಮಾಡಿದರೆ ಯಾರನ್ನು ಬೀಳ್ಕೊಡಲು, ಇಲ್ಲವೇ ಕರೆದೊಯ್ಯಲು ಬಂದಿದ್ದೇವೆ ಎಂದು ಸ್ಪಷ್ಟವಾಗಿ ಹೇಳಬೇಕು. ಇಲ್ಲವಾದರೆ, ದಂಡ ವಿಧಿಸುವ, ಬಂಧಿಸುವ ಅವಕಾಶವೂ ಇದೆ.

ಆದರೆ ಇಲ್ಲಿ ಪ್ಲ್ರಾಟ್‌ಫಾರಂ ಟಿಕೆಟ್‌ ಪಡೆಯುವುದು ಕಡ್ಡಾಯವಲ್ಲ. ಪ್ಲ್ರಾಟ್‌ಫಾರಂ ಒಳಗೆ ಹೋಗಬೇಕೆಂದರೆ ಆಗಮನ ಶುಲ್ಕ ಎಂದು 10 ರೂ. ತೆಗೆದುಕೊಳ್ಳಬೇಕು ಎಂಬ ನಿಯಮವಿದೆಯಾದರೂ ಇದನ್ನು ತೆಗೆದುಕೊಳ್ಳದೆಯೂ ಒಳಗೆ ಹೋಗಬಹುದು. ತೆಗೆದುಕೊಳ್ಳದಿದ್ದರೆ ಯಾರೂ ನಿಲ್ಲಿಸಿ ಕೇಳುವ ವ್ಯವಸ್ಥೆ ಇಲ್ಲಿಲ್ಲ.

Advertisement

ಪ್ರಯಾಣಿಕರ ಹಿತದೃಷ್ಟಿ ಹಾಗೂ ಕಳ್ಳಕಾಕರಿಂದ ರಕ್ಷಿಸಲು ನಿಲ್ದಾಣದ ಒಳ ಹಾಗೂ ಹೊರ ಆವರಣದಲ್ಲಿ ಏನೆಲ್ಲ ವ್ಯವಸ್ಥೆ ಇದೆ ಎಂದು ಕಣ್ಣಾಡಿಸಿದರೆ ಅತ್ಯಂತ ಕಡಿಮೆ ವ್ಯವಸ್ಥೆ ಇಲ್ಲಿ ಕಂಡುಬರುತ್ತದೆ.

ಕೆಲವು ಕಡೆ ಮಾತ್ರ ಸಿಸಿ ಕೆಮರಾ!

ರೈಲ್ವೇ ನಿಲ್ದಾಣದ ಎದುರು ಭಾಗ ಹಾಗೂ ಪ್ಲ್ರಾಟ್‌ಫಾರಂ ಸಂಖ್ಯೆ 1ರ ಶೆಲ್ಟರ್‌ 8ರಿಂದ 12ರವರೆಗೆ ಹಾಗೂ ಕೌಂಟರ್‌ ಭಾಗದಲ್ಲಿ ಸಿಸಿಟಿವಿ ಕೆಮರಾ ಅಳವಡಿಕೆ ಮಾಡಲಾಗಿದೆ. ಪ್ಲ್ರಾಟ್‌ಫಾರಂ 2ರಲ್ಲಿ ಹಾಗೂ ಅದಕ್ಕೆ ತೆರಳುವ ಮೇಲ್ಸೇತುವೆಯಲ್ಲಿ ಹೋಗುವ ಮಾರ್ಗದಲ್ಲಿ ಒಂದೇ ಒಂದು ಸಿಸಿ ಕೆಮರಾಗಳಿಲ್ಲ. 1ರಿಂದ 20 ಬೋಗಿಗಳಲ್ಲಿ ಹಲವಾರು ಮಂದಿ ರೈಲು ಹತ್ತಿ ಇಳಿಯುವ ಕಾರಣ ಅವರ ಸುರಕ್ಷತೆ ಹಾಗೂ ಭದ್ರತೆ ತುಂಬ ಮುಖ್ಯ. ಅವಘಡಗಳು ನಡೆದರೆ ಮುಖ್ಯ ಸಾಕ್ಷಿಯಾಗುವುದೇ ಕೆಮರಾ.

ಕಾಡುತ್ತಿದೆ ಸಿಬಂದಿ ಕೊರತೆ

ಇಡೀ ರೈಲು ನಿಲ್ದಾಣದಲ್ಲಿ ಕೌಂಟರ್‌ ಸಿಬ್ಬಂದಿ ಜತೆ ಇತರ ಕೆಲವು ಸಿಬ್ಬಂದಿಗಳು ಮಾತ್ರ ಇದ್ದಾರೆ. ಎಲ್ಲಿಯೂ ಭದ್ರತಾ ಸಿಬ್ಬಂದಿ ಕಾಣಿಸುತ್ತಿಲ್ಲ! ಅನುಮಾನಾಸ್ಪದ ವ್ಯಕ್ತಿಗಳು ಆಗಮಿಸಿದರೆ ಅಥವಾ ಕಳ್ಳತನ ನಡೆದರೆ ಇಲ್ಲಿ ಸಿಸಿಟಿವಿಯನ್ನಷ್ಟೇ
ನಂಬಬೇಕು. ಅದು ಕೂಡ ಪರಿಪೂರ್ಣವಾಗಿಲ್ಲ. ಪ್ಲ್ರಾಟ್‌ಫಾರಂ 1ರಲ್ಲಿ ಕೌಂಟರ್‌ ಸಿಬಂದಿ ಮತ್ತು ಇತರ ಕೆಲವರು ಇದ್ದಾರಾದರೂ ಪ್ಲ್ರಾಟ್‌ಫಾರಂ 2ನಲ್ಲಿ ಅದೂ ಇಲ್ಲ. ಪ್ಲ್ರಾಟ್‌ ಫಾರಂ 1ರ ಪ್ರವೇಶದ್ವಾರದ ಎದುರು ಭಾಗದಲ್ಲಿಯೇ ಊಟ ಮಾಡುವುದು, ಮಲಗುವುದು ನಡೆಯುತ್ತಿದ್ದರೂ ಅವರಿಗೆ ಎಚ್ಚರಿಕೆ ನೀಡುವ ಅಥವಾ ಸೂಕ್ತ ಮಾಹಿತಿ ನೀಡುವ ಕೆಲಸವೂ ಇಲ್ಲಿ ನಡೆಯುತ್ತಿಲ್ಲ.

ಭದ್ರತೆ ಸಂಬಂಧಿತ ಸಮಸ್ಯೆಗಳು

ರೈಲು ನಿಲ್ದಾಣದಲ್ಲಿ ಸೂಕ್ತ ಸಿಸಿ ಟಿವಿ ಕಣ್ಗಾವಲು, ಇಲ್ಲವೇ ಭದ್ರತಾ ಸಿಬಂದಿ ವ್ಯವಸ್ಥೆ ಇಲ್ಲ.

ಯಾರು ಬೇಕಾದರೂ ನಿಲ್ದಾಣಕ್ಕೆ ಹೋಗಬಹುದು. 1ನೇ ಪ್ಲ್ರಾಟ್‌  ಫಾರಂನಲ್ಲಿ ಕನಿಷ್ಠ ಸಿಬಂದಿಯಾದರೂ ಇದ್ದಾರೆ, ಎರಡರಲ್ಲಿ ಕೇಳುವವರೇ ಇಲ್ಲ.

ಪ್ರವೇಶ ದ್ವಾರ ದಲ್ಲೇ ಊಟ, ನಿದ್ದೆ ಮಾಡುತ್ತಿದ್ದರೂ ಅವರಿಗೆ ಸೂಚನೆ, ಎಚ್ಚರಿಕೆ ಕೊಡುವ ವ್ಯವಸ್ಥೆ ಇಲ್ಲ.

2ನೇ ಪ್ಲ್ರಾಟ್‌ ಫಾ ರಂಗೆ ಗೋಡೌನ್‌ ಕಡೆ ಯಿಂದ ಯಾರು ಬೇಕಾ ದರೂ ಪ್ರವೇಶ ಮಾಡ ಬ ಹುದು. ಸಣ್ಣ ಗೇಟ್‌ ಕೂಡಾ ಇಲ್ಲ. ರೈಲು ನಿಲ್ದಾಣ ಹೀಗಿದ್ದರೆ ಡೇಂಜರ್‌!

ಕೆಲವೆಡೆ ಬೀದಿ ದೀಪಗಳು ಇವೆಯಾದರೂ ಪೂರ್ಣಪ್ರಮಾಣದಲ್ಲಿ ಉರಿಯುತ್ತಿಲ್ಲ

ಪ್ಲ್ರಾಟ್‌ ಫಾರಂ 2: ಮುಕ್ತ ಪ್ರವೇಶ!

ಎರಡನೇ ಪ್ಲ್ರಾಟ್‌ಫಾರಂನಿಂದ ನೇರವಾಗಿ ರೈಲ್ವೇ ಗೋಡಾನ್‌ ಬಳಿಯ ಮೂಲಕ ಹಾದುಹೋಗಲು ರಸ್ತೆ ಮಾರ್ಗವಿದೆ. ರೈಲ್ವೇ ಗೋಡಾನ್‌ನಿಂದ ಯಾರೂ ಕೂಡ ಸುಲಭದಲ್ಲಿ ಪ್ಲ್ರಾಟ್‌ಫಾರಂಗೆ ಬರಬಹುದು. ಯಾವುದೇ ಸುರಕ್ಷತೆ ಹಾಗೂ ಭದ್ರತೆ ಇಲ್ಲಿಲ್ಲ.

ಮುಖ್ಯದ್ವಾರದಲ್ಲಿ ಇದ್ದಂತೆ ಕೌಂಟರ್‌ ವ್ಯವಸ್ಥೆ ಕೂಡ ಇಲ್ಲದ ಕಾರಣ ಎಲ್ಲೆಂದರಲ್ಲಿ ಜನರು ಓಡಾಡುವಂತಾಗಿದೆ. ಪ್ರಸ್ತುತ ಈ ಭಾಗದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕಾರ್ಮಿಕರು ಸಹಿತ ಸಾರ್ವಜನಿಕರು ಕೂಡ ರೈಲು ಬರುವುದು ತಡವಾಗುವ ಸಂದರ್ಭದಲ್ಲಿ ಇತ್ತ ಭೇಟಿ ನೀಡುವುದಿದೆ. ಈ ಭಾಗದಲ್ಲಿ ಪೊದೆಗಳು ಕೂಡ ಬೆಳೆದಿವೆ.

ವರದಿ: ಪುನೀತ್‌ ಸಾಲ್ಯಾನ್‌

ಚಿತ್ರಗಳು : ಆಸ್ಟ್ರೋ ಮೋಹನ್

Advertisement

Udayavani is now on Telegram. Click here to join our channel and stay updated with the latest news.

Next