Advertisement

ಆತಂಕ ಸೃಷ್ಟಿಸಿದ ನೀರಿನ ಸಮಸ್ಯೆ

12:49 PM Nov 20, 2018 | Team Udayavani |

ಬಸವಕಲ್ಯಾಣ: ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿರುವುದರಿಂದ ಬೇಸಿಗೆ ಮುನ್ನವೇ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗಿ, ಎಲ್ಲೆಡೆ ಬರದ ಛಾಯೆ ಆವರಿಸಿರುವುದರಿಂದ ರೈತರು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

Advertisement

ತಾಲೂಕಿನ 115 ಹಳ್ಳಿಗಳ ಪೈಕಿ ಬೆಟ್ಟಗೇರಾ, ಭೋಸಾ, ಮಂಠಾಳ, ಕೋಹಿನೂರ, ಹಾರಕೂಡ, ಉಜಳಂಬ, ಉಮಾಪುರ, ನಾರಾಯಣಪುರ ಸೇರಿದಂತೆ ಒಟ್ಟು 25 ಹಳ್ಳಿಗಳಲ್ಲಿ ಮೂರು ವರ್ಷಗಳ ವರದಿ ಪ್ರಕಾರ ಬೇಸಿಗೆ ಮುನ್ನವೇ ನೀರಿನ ಸಮಸ್ಯೆ ಎದುರಾಗಬಹುದು ಎಂದು ತಹಶೀಲ್ದಾರ್‌, ತಾಪಂ ಇಒ ಹಾಗೂ ಎಇಇ ಅಧಿಕಾರಿ ತಂಡ ಈಗಾಲೇ ಪಟ್ಟಿ ಸಿದ್ಧಪಡಿಸಿದೆ.

ಬೇಸಿಗೆಗೆ ಮುನ್ನವೇ ಇಂತಹ ಪರಿಸ್ಥಿತಿ ನಿರ್ಮಾಣವಾದರೆ, ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ನೀರಿನ ಸಮಸ್ಯೆ ಯಾವ ಮಟ್ಟಕ್ಕೆ ಹೋಗಬಹುದು ಎಂಬ ಅಂದಾಜು ಇಟ್ಟುಕೊಂಡು ಅದಕ್ಕೆ ಬೇಕಾದ ಯೋಜನೆಯನ್ನು ನಾವು ರೂಪಿಸಿದ್ದೇವೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಡೋಳಪ್ಪಾ ಪಿ.ಎಸ್‌. ಮಾಹಿತಿ ನೀಡಿದ್ದಾರೆ. ಮಳೆ ಅಭಾವದಿಂದ ಕೇವಲ ಜನರ ಮೇಲೆ ಮಾತ್ರ ಪರಿಣಾಮ ಬೀರಿಲ್ಲ. ಜಾನುವಾರುಗಳ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಇದರಿಂದ ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆ ಮಾಡುವ ರೈತರು ತತ್ತರಿಸಿದ್ದಾರೆ.

ತೊಗರಿ ಇಳುವರಿ ಕಡಿಮೆ: ರೈತನ ಆರ್ಥಿಕ ಸ್ಥಿತಿ ಹೆಚ್ಚಿಸುವ ಭರವಸೆಯ ಬೆಳೆಯಾದ ತೊಗರಿ ಬೆಳೆ ತೆವಾಂಶ ಕೊರತೆಯಿಂದ ನಿರೀಕ್ಷೆ ಹುಸಿ ಮಾಡಿದೆ. ಪ್ರತಿ ಎಕರೆ ಭೂಮಿಯಲ್ಲಿ 4ರಿಂದ 5 ಚೀಲ ಆಗಬೇಕಾದ ತೊಗರಿ 2-3 ಚೀಲ ಆಗಬಹುದು. ಇದು ರೈತನನ್ನು ಮತ್ತಷ್ಟು ಸಮಸ್ಯೆಗೆ ಸಿಲುಕುವಂತೆ ಮಾಡಿದೆ.

ಖಾಲಿ ಆಗುತ್ತಿರುವ ಕೆರೆಗಳು: ತಾಲೂಕಿನ ಬಹುತೇಕ ಗ್ರಾಮಗಳು ಕೆರೆ ನೀರಿನ ಮೇಲೆ ಅವಲಂಬಿತವಾಗಿವೆ. ಹಾಗಾಗಿ ಕೆರೆಯಲ್ಲಿ ನೀರು ಇದ್ದರೆ ಮಾತ್ರ ಗ್ರಾಮದ ಕೊಳವೆ ಬಾವಿ ಹಾಗೂ ಬಾವಿಗಳಲ್ಲಿ ನೀರು ಇರುತ್ತವೆ. ಆದರೆ ಕೆರೆಯ ನೀರು ದಿನ ಕಳೆದಂತೆ ಬತ್ತುತ್ತಿದೆ. ಇದು ಗ್ರಾಮಸ್ಥರನ್ನು ಚಿಂತೆಗೀಡು ಮಾಡಿದೆ.

Advertisement

ಹಣ ಕೊಟ್ಟು ಖರೀದಿಸಬೇಕು ಮೇವು
ಮಳೆ ಅಭಾವದಿಂದ ಎಲ್ಲೆಡೆ ಮೇವಿನ ಕೊರತೆ ಎದುರಾಗಿದೆ. ಕಳೆದ ವರ್ಷ ಉಚಿತವಾಗಿ ನೀಡುತ್ತಿದ್ದ ಕಬ್ಬಿನ ಮೇವನ್ನು ಈ ವರ್ಷ 40ರಿಂದ 50 ರೂ.ಗೆ ಒಂದು ಸೂಡು ನೀಡಲಾಗುತ್ತಿದೆ. ಆದರೂ ರೈತರು ಮೇವು ಖರೀದಿ ಮಾಡಿ ಜಾನುವಾರುಗಳಿಗೆ
ಹಾಕುವುದು ಅನಿವಾರ್ಯವಾಗಿದೆ. ಮೂರು ಅಥವಾ ನಾಲ್ಕು ಲೀಟರ್‌ ಹಾಲು ನೀಡುವ ಎಮ್ಮೆಗಳು 50ರಿಂದ 60 ಸಾವಿರ
ರೂ. ವರೆಗೆ ಮಾರಾಟವಾಗುತ್ತಿದ್ದವು. ಆದರೆ ಮುಂಗಾರು ಹಾಗೂ ಹಿಂಗಾರು ಮಳೆ ಕೈ ಕೊಟ್ಟಿದ್ದರಿಂದ ಕಳೆದ ರವಿವಾರ
ಜಾನುವಾರು ಮಾರುಕಟ್ಟೆಯಲ್ಲಿ 30ರಿಂದ 40 ಸಾವಿರ ರೂ.ಗೆ ಮಾರಾಟವಾಗಿವೆ.

ಬರ ಹಾಗೂ ಮತ್ತು ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. 
 ಜ್ಞಾನೇಂದ್ರಕುಮಾರ ಗಂಗವಾರ, ಸಹಾಯಕ ಆಯುಕ್ತ ಬಸವಕಲ್ಯಾಣ

ನೀರಿನ ಸಮಸ್ಯೆ ಮನಗಂಡು ಈಗಾಗಲೇ ಸರ್ಕಾರಿ ಬಾವಿಗಳನ್ನು ಆಳವಾಗಿ ತೋಡಲು ನಿರ್ಧರಿಸಲಾಗಿದೆ. ಹಾಗೂ ತೀವ್ರ ಸಮಸ್ಯೆ ಇರುವ ಗ್ರಾಮಗಳಲ್ಲಿ ಪಕ್ಕದ ಬಾವಿ ಅಥವಾ ಕೊಳವೆ ಬಾವಿಗಳಿಂದ ನೀರು ಖರೀದಿ ಮಾಡಿ, ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಯೋಜನೆ ರೂಪಿಸಲಾಗಿದೆ.
 ಮಡೋಳಪ್ಪಾ ಪಿ.ಎಸ್‌. ಇಒ ಬಸವಕಲ್ಯಾಣ

ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next