Advertisement

ಸಾಮಾನ್ಯ ಜ್ವರಕ್ಕೂ ಕ್ಲಿನಿಕ್‌ಗೆ ಹೋಗಲು ಆತಂಕ!

12:44 AM Apr 29, 2020 | Sriram |

ವಿಶೇಷ ವರದಿ- ಮಂಗಳೂರು: ಮಹಾಮಾರಿ ಕೋವಿಡ್‌-19 ನಡುವೆ ವಾತಾವರಣದ ಬದಲಾವಣೆಯಿಂದಾಗಿ ಸಾಮಾನ್ಯ ಜ್ವರ, ಶೀತದ ಹಾವಳಿ ಹೆಚ್ಚಾಗಿದೆ. ಆದರೆ ಇದು ಕೋವಿಡ್-19 ಲಕ್ಷಣ ಎಂದು ಕ್ಲಿನಿಕ್‌, ಆಸ್ಪತ್ರೆಗಳಿಂದ ಕೋವಿಡ್‌-19 ಆಸ್ಪತ್ರೆಗೆ ಕಳುಹಿಸುತ್ತಾರೆಂಬ ಭಯದಿಂದ ಜನ ಔಷಧ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಸನ್ನಿವೇಶಗಳೂ ನಡೆಯುತ್ತಿವೆ. ಕೆಲವು ದಿನಗಳಿಂದ ಜಿಲ್ಲೆಯ ವಿವಿಧೆಡೆ ಮಳೆಯಾಗುತ್ತಿದೆ. ಮಂಗಳೂರಿನಲ್ಲಿಯೂ ಎರಡು ದಿನಗಳ ಹಿಂದಷ್ಟೆ ಮಳೆಯಾಗಿದೆ. ಮಳೆ- ಮೋಡ-ಬಿಸಿಲಿನ ಕಣ್ಣಾ ಮುಚ್ಚಾಲೆಯಿಂದಾಗಿ ಜ್ವರ, ಶೀತದಂತಹ ಸಾಮಾನ್ಯ ಕಾಯಿಲೆಗಳು ಬಾಧಿಸತೊಡಗಿವೆ.

Advertisement

ಫಿವರ್‌ ಕ್ಲಿನಿಕ್‌ಗಳಲ್ಲಿ ತಪಾಸಣೆ
ಕೋವಿಡ್-19 ಲಕ್ಷಣ ಹೋಲುವ ಯಾವುದೇ ತೊಂದರೆಗಳಿದ್ದರೂ ಫಿವರ್‌ ಕ್ಲಿನಿಕ್‌ಗಳಲ್ಲಿ ಪರೀಕ್ಷೆ ಮಾಡಿಕೊಳ್ಳಬೇಕೆಂದು ದ.ಕ. ಜಿಲ್ಲಾಡಳಿತ ಹೇಳಿದೆ. ಅಲ್ಲದೆ, ಯಾವುದೇ ಆಸ್ಪತ್ರೆಗಳಿಗೆ ಬರುವ ರೋಗಿಗಳಲ್ಲಿ ಜ್ವರ, ತಲೆನೋವು, ಶೀತ, ಕೆಮ್ಮು, ಉಸಿರಾಟದ ಸಮಸ್ಯೆ ಇದ್ದಲ್ಲಿ ಅಂಥ‌ವರನ್ನು ಪರೀಕ್ಷಿಸಿ ಅಗತ್ಯ ಬಿದ್ದಲ್ಲಿ ವೆನ್ಲಾಕ್‌ ಕೋವಿಡ್‌-19 ಆಸ್ಪತ್ರೆಗೆ ಶಿಫಾರಸು ಮಾಡಬೇಕೆಂದು ತಿಳಿಸಲಾಗಿದೆ. ಹೀಗಾಗಿ ಜನಸಾಮಾನ್ಯರು ಜ್ವರ, ಕೆಮ್ಮು, ಶೀತಕ್ಕೆ ಔಷಧ ಪಡೆದುಕೊಳ್ಳಲು ಆಸ್ಪತ್ರೆಗಳಿಗೆ ಹೋದರೆ ಕೋವಿಡ್‌ ಆಸ್ಪತ್ರೆಗೆ ಕಳುಹಿಸುತ್ತಾರೆಂಬ ಆತಂಕದಿಂದ ಮನೆಯಲಿದ್ದ ಔಷಧ ಸೇವಿಸುತ್ತಿದ್ದಾರೆ.

ಜಿಲ್ಲೆಯಲ್ಲಿರುವ ಫಿವರ್‌ ಕ್ಲಿನಿಕ್‌ಗಳು
ಎ.ಜೆ. ಮೆಡಿಕಲ್‌ ಕಾಲೇಜು ಕುಂಟಿಕಾನ, ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ ಕಂಕನಾಡಿ, ಕೆಎಂಸಿ ಅತ್ತಾವರ, ಯೇನಪೊಯ ಮೆಡಿಕಲ್‌ ಕಾಲೇಜು ಆಸ್ಪತ್ರೆ ದೇರಳಕಟ್ಟೆ, ಶ್ರೀನಿವಾಸ ಮೆಡಿಕಲ್‌ ಕಾಲೇಜು ಆಸ್ಪತ್ರೆ ಮುಕ್ಕ, ಕೆ.ಎಸ್‌. ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಕಣಚ್ಚಾರು ಆಸ್ಪತ್ರೆ ಮುಡಿಪು, ವೆನ್ಲಾಕ್‌ ಜಿಲ್ಲಾಸ್ಪತ್ರೆ ಹಂಪನಕಟ್ಟೆ, ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಪುತ್ತೂರು ಸರಕಾರಿ ಆಸ್ಪತ್ರೆ, ಬಂಟ್ವಾಳ ತಾಲೂಕು ಆಸ್ಪತ್ರೆ, ಸುಳ್ಯ ಕೆವಿಜಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಸುಳ್ಯ

ಕ್ವಾರಂಟೈನ್‌ಗೆ ಸೂಚಿಸುತ್ತಾರೆ!
ಆಸ್ಪತ್ರೆಗಳಿಗೆ ತೆರಳಿದರೆ ಕೋವಿಡ್-19 ಪರೀಕ್ಷೆಗೆ ಕಳುಹಿಸುತ್ತಾರೆ. ಅಲ್ಲಿ ಹೋದರೆ ಗಂಟಲ ದ್ರವ ಮಾದರಿ ಪಡೆದು ಬಳಿಕ ಕ್ವಾರಂಟೈನ್‌ಗೂ ಸೂಚಿಸುತ್ತಾರೆ. ಸಾಮಾನ್ಯ ಜ್ವರಕ್ಕೂ ಕ್ವಾರಂಟೈನ್‌ನಲ್ಲಿಡುತ್ತಾರೆ ಎಂಬ ಭಯ ಉಂಟಾಗುತ್ತದೆ ಎನ್ನುತ್ತಾರೆ ಬಿಜೈಯ ಮಹಿಳೆಯೋರ್ವರು.

 ಅಗತ್ಯ ತಪಾಸಣೆ ಮಾಡಿಸಿಕೊಳ್ಳಿ
ಮಳೆಗಾಲ ಶುರುವಾದ ಅನಂತರ ಸಾಮಾನ್ಯ ಜ್ವರ, ಶೀತ ಜತೆಗೆ ಸಾಂಕ್ರಾಮಿಕ ಕಾಯಿಲೆ ಭೀತಿಯೂ ಹೆಚ್ಚಿರುತ್ತದೆ. ಹೀಗಾಗಿ ಎಲ್ಲ ಖಾಸಗಿ ಆಸ್ಪತ್ರೆಗಳು ಫಿವರ್‌ ಕ್ಲಿನಿಕ್‌ಗಳನ್ನು ತೆರೆಯಬೇಕು. ಫಿವರ್‌ ಕ್ಲಿನಿಕ್‌ಗಳಲ್ಲಿ ತಪಾಸಣೆ ಮಾಡಿಸಿಕೊಂಡರೆ ಕ್ವಾರಂಟೈನ್‌ ಮಾಡಲಾಗುತ್ತದೆ ಎಂಬುದು ಜನರಿಗೆ ಇರುವ ಮಾಹಿತಿ ಕೊರತೆಯಿಂದ ಬಂದಿರುವಂಥದ್ದು. ಜ್ವರ, ಶೀತ, ಕೆಮ್ಮುವಿನಂತಹ ಸಮಸ್ಯೆಗಳಿಗೆ ಜನ ಫಿವರ್‌ ಕ್ಲಿನಿಕ್‌ಗಳಿಗೆ ತೆರಳಿ ತಪಾಸಣೆ ಮಾಡಿಕೊಳ್ಳಬೇಕು. ತಪಾಸಣೆ ಮಾಡಿದ ಎಲ್ಲರನ್ನೂ ಕ್ವಾರಂಟೈನ್‌ ಮಾಡುವುದಿಲ್ಲ. ಕೋವಿಡ್-19 ಲಕ್ಷಣ ಇದ್ದಲ್ಲಿ ಮಾತ್ರ ಮಾಡಲಾಗುತ್ತದೆ. ಮೇ 3ರ ಅನಂತರ ಲಾಕ್‌ಡೌನ್‌ ಸಡಿಲಿಕೆ ಆದಲ್ಲಿ ಜನ ಸಂಚಾರ ಜಾಸ್ತಿಯಾಗುವುದರಿಂದ ಈಗ ತಪಾಸಣೆ ಮಾಡಿಕೊಳ್ಳದಿದ್ದರೆ ಮತ್ತೆ ಸಮಸ್ಯೆ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ.
 -ಡಾ| ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯಾಧಿಕಾರಿ, ದ.ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next