ಮಡಿಕೇರಿ: ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ವೇಳೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಭೂ ಕುಸಿತಕ್ಕೆ ಸಿಲುಕಿದ್ದ ಗ್ರಾಮ ಹೆಬ್ಬೆಟ್ಟಗೇರಿಯಲ್ಲಿ ಈ ಬಾರಿಯೂ ಆತಂಕ ಮನೆ ಮಾಡಿದೆ. ಮಡಿಕೇರಿಯಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ಬಾಯ್ತೆರೆದು ನಿಂತ ಕೆಲವು ಬೆಟ್ಟ ಪ್ರದೇಶ, ಅಪಾಯಕಾರಿ ಸ್ಥಿತಿಯಲ್ಲಿರುವ ಮಳೆಹಾನಿ ಮನೆಗಳು, ಮುಂಬಾಗಿಲು ಜರಿದು ಗುಡ್ಡದ ಕಡೆ ಇರುವುದರಿಂದ ಹಿಂಬಾಗಿಲ ಮೂಲಕವೇ ಮನೆಯೊಳಗೆ ಹೋಗಿ ಬರಬೇಕಿರುವ ಅನಿವಾರ್ಯತೆ ಗ್ರಾಮದ ಕೆಲವು ನಿವಾಸಿಗಳದ್ದು.
ಇದೀಗ ಮಳೆಗಾಲ ಪ್ರಾರಂಭವಾಗಿದ್ದು, ಊರಲ್ಲಿ ಉಳಿದಿರುವ ಗ್ರಾಮಸ್ಥರನ್ನು ಮಳೆಯ ಕಾರ್ಮೋಡಗಳು ಕಂಗಾಲಾಗಿಸುತ್ತಿವೆ. ತಲತಲಾಂತರಗಳಿಂದ ನೆಲೆ ನಿಂತ ಗ್ರಾಮಕ್ಕೆ ಪ್ರಕೃತಿ ಶಾಪವಾಗಿ ಪರಿಣಮಿಸಿತ್ತಲ್ಲ ಎನ್ನುವ ನೋವು ಗ್ರಾಮಸ್ಥರನ್ನು ಕಾಡುತ್ತಿದೆ. ಹಳೆಯದನ್ನು ಮರೆತು ಮತ್ತೆ ಬದುಕು ಕಟ್ಟಿಕೊಳ್ಳಿ ಎನ್ನುವ ಸಲಹೆ ಮಾತುಗಳು ಸಂತ್ರಸ್ತ ಗ್ರಾಮಸ್ಥರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹುಟ್ಟಿ ಬೆಳೆದ ಊರನ್ನು, ಮಕ್ಕಳಂತೆ ಸಲಹಿ ಬೆಳಸಿದ ತೋಟ, ಜಮೀನನ್ನು ಕಳೆದುಕೊಂಡು ನಾವು ಹೋಗುವುದಾದರೂ ಎಲ್ಲಿಗೆ ಎನ್ನುವ ಪ್ರಶ್ನೆ ಊರಲ್ಲಿ ಉಳಿದಿರುವ ಗ್ರಾಮಸ್ಥರದ್ದು.
ಕಳೆದ ವರ್ಷದಂತೆ ಈ ಬಾರಿಯೂ ಏನಾದರೂ ಪ್ರಾಕೃತಿಕ ದುರಂತ ಸಂಭವಿಸಿದರೆ ನಿಮ್ಮನ್ನೆಲ್ಲಾ ರಕ್ಷಣೆ ಮಾಡುವುದಕ್ಕೆ ನಾವಿದ್ದೇವೆ ಎಂಬುವುದನ್ನು ಜನಸಾಮಾನ್ಯರಿಗೆ ತೋರಿಸುವುದಕ್ಕೆ ಜಿಲ್ಲಾಡಳಿತ ಇದೇ ಹೆಬ್ಬೆಟಗೇರಿಯಲ್ಲಿ ಕೆಲವು ದಿನಗಳ ಹಿಂದೆ ರಕ್ಷಣಾ ಕಾರ್ಯದ ಪ್ರಾತ್ಯಕ್ಷಿಕೆ ಏರ್ಪಡಿಸಿತ್ತು. ವಿಪರ್ಯಾಸ ಎಂದರೆ ಆ ಹೊತ್ತಿಗಾಗಲೇ ಸುಮಾರು ಶೇ.80ರಷ್ಟು ಗ್ರಾಮಸ್ಥರು ಜೀವ ಭಯದಿಂದ ಅಳಿದು ಉಳಿದಿದ್ದ, ಮನೆಗೆ ಬೀಗ ಹಾಕಿ ತೋಟ, ಜಮೀನು ಬಿಟ್ಟು ಮಡಿಕೇರಿ ಪಟ್ಟಣ ಸೇರಿದಂತೆ ತಾವು ಸುರಕ್ಷಿತ ಎಂದು ನಂಬಿಕೊಂಡಿರುವ ಸ್ಥಳಗಳಿಗೆ ತೆರಳಿಯಾಗಿತ್ತು. ಆದರೆ, ಹೊತ್ತಿನ ತುತ್ತಿಗೆ ಬೇಕಾದ ಸಂಪಾದನೆಯನ್ನು ಆಯಾ ದಿನವೇ ಸಂಪಾದಿಸಿಕೊಳ್ಳುವ ಒಂದಷ್ಟು ಮಂದಿ ಬಡವರು ಮಾತ್ರ ಬಿರುಕು ಬಿಟ್ಟ ಬೆಟ್ಟದಡಿಯಲ್ಲಿ ಪುಟ್ಟ ನೆಲೆಯನ್ನು ಬಿಟ್ಟು ಹೋಗಲಾರದೆ ಸರ್ಕಾರ ಕಟ್ಟಿ ಕೊಡುತ್ತದೆ ಎಂದು ಹೇಳಿರುವ ಮನೆಯನ್ನು ನಂಬಿ ಅಪಾಯಕಾರಿ ಸ್ಥಿತಿಯಲ್ಲಿ ಇಂದಿಗೂ ಆತಂಕದಿಂದಲೇ ಬದುಕುತ್ತಿದ್ದಾರೆ.
ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಿಗೆ ರಸ್ತೆ, ವಿದ್ಯುತ್ ಸೇರಿದಂತೆ ಮೂಲಭೂತ ಸವಲತ್ತುಗಳನ್ನು ಮರು ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ಮತ್ತು ಆಡಳಿತ ವ್ಯವಸ್ಥೆ ಹೇಳಿಕೊಂಡಿದೆ. ಆದರೆ ಹೆಬ್ಬೆಟ್ಟಗೇರಿಯ ಬೆಟ್ಟದ ಮೇಲಿನ ಬಿರುಕು ಬಿಟ್ಟ ಮನೆಯಲ್ಲಿ ವಾಸ ಮಾಡುತ್ತಿರುವ ಸಿ.ಸಿ. ಬಿದ್ದಪ್ಪ ಎಂಬವರ ಮನೆಗೆ ಇನ್ನೂ ವಿದ್ಯುತ್ ತಲುಪಿಲ್ಲ. ಈ ವಿಷಯವನ್ನು ಅವರು ಹಲವು ಬಾರಿ ಸಂಬಂಸಿದ ಇಲಾಖೆ ಗಮನಕ್ಕೆ ತಂದಿದ್ದರೂ ಪ್ರಯೋಜನ ಆಗಿಲ್ಲ ಎಂದು ಬಿದ್ದಪ್ಪ ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡರು. ಗ್ರಾಮಗಳಿಗೆ ಸುತ್ತು ಬಂದರೆ, ಸಮಸ್ಯೆ ಎದುರಿಸುತ್ತಿರುವ ಸಂತ್ರಸ್ತರು ಕಂಡು ಬರುತ್ತಾರೆ. ಅಧಿಕಾರಿ ಗಳು ಕಾಳಜಿ ವಹಿಸಿ ಕೆಲಸ ಮಾಡಿದ್ದರೂ ಅದನ್ನು ತಲುಪಿಸುವಲ್ಲಿ ತಳಮಟ್ಟದ ಸರ್ಕಾರಿ ನೌಕರರು ನಿರ್ಲಕ್ಷ್ಯ ತೋರಿಸು ತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.