ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಮದ ಶಾಲಾ ಆವರಣದಲ್ಲಿರುವ ಗ್ರಾಪಂ ಹಳೆಯದಾದ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಆಗಲೋ-ಈಗಲೋ ನೆಲಕಚ್ಚುವ ಸ್ಥಿತಿಯಲ್ಲಿದ್ದು, ಈ ಪ್ರಾಂಗಣದಲ್ಲಿ ಓದುತ್ತಿರುವ ನೂರಾರು ಮಕ್ಕಳ ಪ್ರಾಣಕ್ಕೆ ಎರವಾಗುವಂತಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದೊಳಗೆ ಇರುವ ಗ್ರಾಪಂ ಕಟ್ಟಡ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಕಳೆದ ಅನೇಕ ವರ್ಷಗಳ ಹಿಂದೆಯೇ ಕಾರ್ಯಾಲಯವನ್ನು ಗ್ರಾಮದ ಸಮುದಾಯ ಭವನದಲ್ಲಿ ನಡೆಸುತ್ತಿದ್ದಾರೆ. ಶಿಥಿಲಗೊಂಡು ಅರ್ಧಮರ್ಧ ಉಳಿದಿರುವ ಕಲ್ಲಿನ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಈ ಕಟ್ಟಡಕ್ಕೆ ಹೊಂದಿಕೊಂಡಂತೆ 40 ಮಕ್ಕಳು ಓದುವ ಅಂಗನವಾಡಿ, 80 ಮಕ್ಕಳಿರುವ ಕರ್ನಾಟಕ ಕಸ್ತೂರಿಬಾ ವಸತಿ ನಿಲಯ ಮತ್ತು 275ಕ್ಕೂ ಹೆಚ್ಚು ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ನಿತ್ಯವೂ ಇದರಡಿಯೇ ಕಾಲ ಕಳೆಯುತ್ತಿದ್ದಾರೆ.
ಇದೀಗ ಮಳೆಗಾಲವಾಗಿದ್ದರಿಂದ ಬಿರುಕು ಬಿಟ್ಟಿರುವ ಕಲ್ಲು ಮಣ್ಣಿನ ಗೋಡೆಯಲ್ಲಿ ನೀರಿಳಿದು ನೆಲಕಚ್ಚುವ ಹಂತದಲ್ಲಿದೆ. ಇದರಿಂದ ಇಲ್ಲಿನ ಮಕ್ಕಳು ಜೀವ ಹಿಡಿದುಕೊಂಡು ಶಾಲಾವಧಿ ಕಳೆಯಬೇಕಾಗಿದೆ. ಅಲ್ಲದೇ ಇದು ಇಲ್ಲಿನ ಶಿಕ್ಷಕರಿಗೂ ದೊಡ್ಡ ಜವಾಬ್ದಾರಿಯಾಗಿದೆ. ಒಂದೊಮ್ಮೆ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ ಎಂಬುದು ಶಿಕ್ಷಕರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಪಾಲಕರೂ ತಮ್ಮ ಮಕ್ಕಳಿಗೆ ಕಟ್ಟಡದತ್ತ ಸುಳಿಯದಂತೆ ತಾಕೀತು ಮಾಡಿ ಕಳಿಸುತ್ತಿದ್ದಾರೆ. ಗ್ರಾಪಂನವರು ಸಮುದಾಯ ಭವನಕ್ಕೆ ಕಾರ್ಯಾಲಯ ಸ್ಥಳಾಂತರಗೊಳಿಸಿದ ನಂತರ ಅರ್ಧಕ್ಕೆ ಕೆಡವಿ ನಿಂತಿರುವ ಕಟ್ಟಡದತ್ತ ಚಿತ್ತ ಹರಿಸಿಲ್ಲ. ಈ ಕಟ್ಟಡ ನೆಲಸಮಗೊಳಿಸುವಂತೆ ಶಿಕ್ಷಕ ಮತ್ತು ಪಾಲಕರು ಸಂಬಂಧಪಟ್ಟವರಿಗೆ ತಿಳಿಸುತ್ತಾ ಬಂದಿದ್ದಾರೆ. ಆದರೂ ಯಾರೊಬ್ಬರೂ ಇದರ ಬಗ್ಗೆ ನಿಗಾವಹಿಸುತ್ತಿಲ್ಲ. ಇನ್ನಾದರೂ ಗ್ರಾಪಂನವರು ಅವಘಡ ಸಂಭವಿಸುವ ಮೊದಲೇ ಶಿಥಿಲ ಕಟ್ಟಡ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಬಿಇಒ ವಿ.ವಿ. ಸಾಲಿಮಠ ಅವರನ್ನು ಸಂಪರ್ಕಿಸಿದರೆ ಕಟ್ಟಡ ತೆರವು ಗೊಳಿಸಲು ಪಿಡಿಒ ಅವರಿಗೆ ತಿಳಿಸಲಾಗಿದೆ ಎನ್ನುತ್ತಾರೆ. ಗ್ರಾಪಂ ಪಿಡಿಒ ಎಸ್.ಎಫ್. ಮಾಳವಾಡ ಅವರನ್ನು ಸಂಪರ್ಕಿಸಿದರೆ ಈ ಕಟ್ಟಡದ ಅರ್ಧಭಾಗ ಈಗಾಗಲೇ ತೆರವುಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಇನ್ನುಳಿದ ಕಟ್ಟಡ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ.