ಸುಬ್ರಹ್ಮಣ್ಯ: ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ ಸಿರಿಬಾಗಿಲು ಸಮೀಪದ ಮಣಿಬಂಡ ಎಂಬಲ್ಲಿ ಬೃಹತ್ ಗಾತ್ರದ ಬಂಡೆಗಳಲ್ಲೊಂದು ಹಳಿ ಮೇಲೆ ಉರುಳಲು ಸಿದ್ಧವಾಗಿದೆ.
ಈ ಬಂಡೆ ಯಾವುದೇ ಕ್ಷಣದಲ್ಲಿ ರೈಲು ಹಳಿ ಮೇಲೆ ಉರುಳಿ ಬೀಳುವ ಸಾದ್ಯತೆಗಳಿವೆ. ರೈಲು ಸಂಚಾರ ಯಾವುದೇ ಹೊತ್ತಲ್ಲಿ ವ್ಯತ್ಯಯ ವಾಗುವುದಲ್ಲದೆ ಅಪಾಯಕ್ಕೂ ಆಹ್ವಾನ ನೀಡುವ ಸಾಧ್ಯತೆಗಳಿವೆ.
ಬಂಡೆಯನ್ನು ಜು.20ರಂದು ಸ್ಫೋಟಿಸಿ ತೆರವುಗೊಳಿಸುವ ಬಗ್ಗೆ ರೈಲ್ವೇ ಅಧಿಕಾರಿಗಳು ಸಿದ್ಧತೆ ನಡೆಸುತಿದ್ದಾರೆ. ಶನಿವಾರ ತೆರವು ಕಾಮಗಾರಿ ಮುಗಿಯುವಾಗ ವಿಳಂಬವಾದಲ್ಲಿ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ರೈಲು ಯಾನದಲ್ಲಿ ವ್ಯತ್ಯಯ ಸಂಭಾವ್ಯ. ಆದರೆ ಈ ಬಗ್ಗೆ ರೈಲ್ವೇ ಇಲಾಖೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.
ಸಕಲೇಶಪುರದಿಂದ ಸುಬ್ರಹ್ಮಣ್ಯ ನಡುವಿನ ಶಿರಾಡಿ ಘಾಟಿ ರೈಲು ಮಾರ್ಗದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ಈ ಬಂಡೆ ಇದೆ.ರೈಲ್ವೇ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಬಂಡೆ ಅಪಾಯಕಾರಿ ಸ್ಥಿತಿಯಲ್ಲಿ ಇರುವುದರಿಂದ ಇಂದು ರಾತ್ರಿ ಓಡಾಡುವ ರೈಲು ಸಂಚಾರದ ಬಗ್ಗೆಯೂ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಕುಸಿತ
ಸುಬ್ರಹ್ಮಣ್ಯ ರಸ್ತೆ ಮತ್ತು ಸಿರಿಬಾಗಿಲು ನಡುವಿನ ಕಿ.ಮೀ. 86 ಹಳಿಯ ಮೇಲೆ ಕಳೆದ ಆಗಸ್ಟ್‌ನಲ್ಲಿ ಭಾರೀ ಭೂಕುಸಿತ ಸಂಭವಿಸಿ ಹಳಿಯ ಮೇಲೆ 110 ಮೀ. ದೂರ, 25 ಮೀ. ಎತ್ತರಕ್ಕೆ ಮಣ್ಣು ಬಿದ್ದಿತ್ತು. ಸುರಂಗದ ಮೇಲೆ, ಪ್ರವೇಶ ದ್ವಾರ ಮಣ್ಣು ಮುಚ್ಚಿತ್ತು.
ಇದೇ ಜಾಗದಲ್ಲಿ ಈ ಬಾರಿಯೂ ಮಳೆಗೆ ಮತ್ತೆ ಭೂಕುಸಿತ ನಡೆಯುವ ಸೂಚನೆ ದೊರಕಿದೆ. ಈಗ ಬಂಡೆ ಉರುಳಲು ಸಿದ್ಧವಾದ ಸ್ಥಳ ಕಳೆದ ವರ್ಷ ಘಟನೆ ನಡೆದಲ್ಲೇ.