Advertisement
ಶಾಲೆಗೆ ಹೋಗುವುದೆಂದರೆ ಕಲಿಕೆಯಷ್ಟೇ ಅಲ್ಲ; ಅದರ ಜತೆಗೆ ಹೊಸ ಗೆಳೆಯ-ಗೆಳತಿಯರನ್ನು ಮಾಡಿಕೊಳ್ಳುವುದು, ಹೊಸ ಕೌಶಲಗಳನ್ನು ಕಲಿಯುವುದು, ಶಾಲೆಯಲ್ಲಾಗುವ ದೈಹಿಕ-ಮಾನಸಿಕ ಕಿರುಕುಳಗಳನ್ನು ನಿಭಾಯಿಸುವುದು, ಮಗು ವಸತಿ ಶಾಲೆಯಲ್ಲಿ ಇರುವುದಾಗಿದ್ದರೆ ಮನೆಯಿಂದ ದೂರವಿರುವ ಸವಾಲುಗಳನ್ನು ನಿಭಾಯಿಸಲು ಕಲಿಯುವುದು… ಹೀಗೆ ಹತ್ತು ಹಲವು ಇರುತ್ತದೆ.
– ದಿನಚರಿಗಳನ್ನು ಮರು ಹೊಂದಾಣಿಕೆ ಮಾಡಿಸಿ. ಮಗುವಿನ ನಿದ್ದೆ ಮಾಡುವುದು- ಏಳುವುದು ಇತ್ಯಾದಿಗಳ ಜೈವಿಕ ಗಡಿಯಾರವನ್ನು ಮರುಹೊಂದಾಣಿಕೆ ಮಾಡಿ, ಶಾಲಾ ದಿನಗಳಿಗೆ ಸರಿಯಾಗಿ ಊಟ- ಉಪಾಹಾರ ರೂಢಿಸಿ ಕೊಳ್ಳುವುದಕ್ಕೆ ನೆರವಾಗಿ. ಶಾಲೆ ಆರಂಭವಾಗುವುದಕ್ಕೆ ಕೆಲವು ವಾರ ಮುನ್ನ ಇದನ್ನು ನಿಧಾನವಾಗಿ ಆರಂಭಿಸಬೇಕು. – ಮಗುವಿನಲ್ಲಿ ಆತ್ಮವಿಶ್ವಾಸದ ಪ್ರಜ್ಞೆಯನ್ನು ಮೂಡಿಸಿ. ನಿಮ್ಮ ಮಕ್ಕಳು ಪುಟ್ಟ ಮನಸ್ಸುಗಳಲ್ಲಿ ನೂರಾರು ಅಂಜಿಕೆ- ಅಳುಕುಗಳು ಮನೆ ಮಾಡಿರಬಹುದು. ಒಂದೊಂದಾಗಿ ಅವುಗಳ ಬಗ್ಗೆ ಮಗುವಿನ ಜತೆಗೆ ಮಾತನಾಡುತ್ತ ಪರಿಹರಿಸಲು ಪ್ರಯತ್ನಿಸಿ. ಸವಾಲುಗಳನ್ನು ಎದುರಿಸಿ ಗೆಲ್ಲಲು ನೀವು ಸಹಾಯ ಮಾಡುವಿರಿ ಎಂಬ ಭಾವನೆಯನ್ನು ಮಗುವಿನಲ್ಲಿ ಉಂಟು ಮಾಡಿ.
Related Articles
Advertisement
– ಸಂಭಾವ್ಯ ಪ್ರತಿಕೂಲ ಸ್ಥಿತಿಗಳಿಗೆ ಅವರನ್ನು ಸನ್ನದ್ಧಗೊಳಿಸಿ. ಅಕಸ್ಮಾತ್ ಸೋಂಕು ಉಂಟಾದರೆ ಸಂಭಾವ್ಯ ಕ್ವಾರಂಟೈನ್ ಮತ್ತು ಶಾಲೆಗೆ ಹೋಗುವುದು ಮತ್ತೆ ಸ್ಥಗಿತಗೊಳ್ಳುವುದು ಇತ್ಯಾದಿ ಕ್ರಮಗಳನ್ನು ಎದುರಿಸಲು ಅವರನ್ನು ಸಿದ್ಧಗೊಳಿಸಿ. ಇದರಿಂದಾಗಿ ಈ ಕ್ರಮಗಳಿಂದ ಉಂಟಾಗುವ ಮಾನಸಿಕ ಆಘಾತಗಳನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತದೆ.
– ನೆರೆಹೊರೆಯವರು, ಕುಟುಂಬಗಳ ಜತೆಗೆ ಮಾತನಾಡಿ. ಇತರ ಕುಟುಂಬಗಳು, ನಿಮ್ಮ ಮಕ್ಕಳ ಗೆಳೆಯ-ಗೆಳತಿಯರ ಹೆತ್ತವರ ಜತೆಗೆ ಮಾತನಾಡಿ ಅವರು ಎದುರಿಸುತ್ತಿರುವ ಪರಿಸ್ಥಿತಿಯಗಳನ್ನು ಹಂಚಿಕೊಳ್ಳಿ. ಆಗ ಸವಾಲುಗಳು ಮತ್ತು ಅವುಗಳನ್ನು ಅವರು ಎದುರಿಸಿ ಗೆದ್ದ ಬಗೆ ನಿಮಗೆ ತಿಳಿಯುತ್ತದೆ. ಜತೆಗೆ, ನಿಮ್ಮ ಮಕ್ಕಳ ಗೆಳೆಯ-ಗೆಳತಿಯರ ಜತೆಗೆ ಕೆಲವು ಗೆಟ್ ಟುಗೆದರ್ ಏರ್ಪಡಿಸಿ ಶಾಲಾ ವಾತಾವರಣಕ್ಕೆ ಅವರು ಹೊಂದಿಕೊಳ್ಳುವುದಕ್ಕೆ ಸಹಕರಿಸಿ.
– ವೃತ್ತಿಪರರ ಸಹಾಯವನ್ನು ಪಡೆಯಿರಿ. ಮಗುವಿನ ಜತೆಗೆ ಮಾತನಾಡಿ ಮರಳಿ ಶಾಲಾರಂಭಕ್ಕೆ ಮಗುವನ್ನು ಸರಾಗವಾಗಿ ಅಣಿಗೊಳಿಸುವುದು ಮುಖ್ಯ. ಆದರೆ ಮಗುವಿನ ವರ್ತನೆಗಳಲ್ಲಿ ಯಾವುದೇ ಗಂಭೀರ-ಗಮನಾರ್ಹ ಬದಲಾವಣೆ ಕಂಡುಬಂದರೆ ಆದಷ್ಟು ಬೇಗನೆ ವೃತ್ತಿಪರರ ಸಹಾಯ ಪಡೆಯಿರಿ.
-ಡಾ| ಕೃತಿಶ್ರೀ ಸೋಮಣ್ಣಕನ್ಸಲ್ಟಂಟ್ ಸೈಕಿಯಾಟ್ರಿ,
ಕೆಎಂಸಿ ಆಸ್ಪತ್ರೆ, ಮಂಗಳೂರು