Advertisement

ರೈಲು ಹಳಿ ಕಾಯುವ ಕಾರ್ಮಿಕರಿಗೆ ಆಗಂತುಕರ ಆತಂಕ

01:28 AM Jul 27, 2019 | mahesh |

ಸುಬ್ರಹ್ಮಣ್ಯ: ಬೆಂಗಳೂರು- ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟಿಯ ಎಡಕುಮೇರಿ ಭಾಗದಲ್ಲಿ ಪ್ರಾಕೃತಿಕ ವಿಕೋಪಗಳಿಂದ ರೈಲ್ವೇ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿರುವ ಬೆನ್ನಲ್ಲೇ ಈ ಭಾಗದಲ್ಲಿ ಆಗಂತುಕರ ಭಯ ಕಾಡಲಾರಂಭಿಸಿದೆ.

Advertisement

ಎಡಕುಮೇರಿ ಸುರಂಗ ಮಾರ್ಗದ ಸಮೀಪ ಕರ್ತವ್ಯ ನಿರತ ರೈಲ್ವೇ ಕಾರ್ಮಿಕ ರಾಜು ಎಂಬವರಿಗೆ ಅಪರಿಚಿತರಿಬ್ಬರು ಬೆದರಿಕೆ ಹಾಕಿದ ಘಟನೆ ಜು.22ರಂದು ರಾತ್ರಿ ನಡೆದಿದೆ. ಘಟನೆ ಬಳಿಕ ಈ ಭಾಗದ ಅರಣ್ಯಗಳಲ್ಲಿ ಎಎನ್‌ಎಫ್ ಶೋಧ ಕಾರ್ಯಾಚರಣೆ ಆರಂಭಿಸಿದೆ.

ಈ ಅಪರಿಚಿತರು ನಕ್ಸಲರು ಎನ್ನುವ ಶಂಕೆ ವ್ಯಕ್ತಗೊಂಡಿದ್ದು, ಪಶ್ಚಿಮ ಘಟ್ಟ ಭಾಗದಲ್ಲಿ ನಕ್ಸಲರು ತಮ್ಮ ಚಟುವಟಿಕೆ ಆರಂಭಿಸಿದ್ದಾರೆಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ.

ಪಿಸ್ತೂಲು ಇತ್ತು?
ಬೆದರಿಕೆ ಒಡ್ಡಿದ ಇಬ್ಬರು ಅಪರಿಚಿತರ ಬಳಿ ಪಿಸ್ತೂಲು ಇತ್ತು ಎನ್ನುವುದನ್ನು ಸಿಬಂದಿ ರಾಜು ಪೊಲೀಸರ ಗಮನಕ್ಕೆ ತಂದಿದ್ದಾನೆ. ಅಪರಿಚಿತ ವ್ಯಕ್ತಿಗಳಿಬ್ಬರು ಹಿಂದಿಯಲ್ಲಿ ಸಂವಹನ ನಡೆಸುತ್ತಿದ್ದರು ಎನ್ನಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಹಾಸನ, ಸಕಲೇಶಪುರ ಪೊಲೀಸರು, ಅರಣ್ಯ ಇಲಾಖೆ ಸಿಬಂದಿ ಮತ್ತು ರೈಲ್ವೇ ಇಲಾಖೆ ಸಿಬಂದಿ ಅಪರಿಚಿತರ ಶೋಧಕ್ಕೆ ಮುಂದಾಗಿದ್ದಾರೆ.

ಈ ಹಿಂದೆಯೂ ಈ ಭಾಗದಲ್ಲಿ ನಕ್ಸಲ್ ಚಟುವಟಿಕೆ ಕಂಡುಬಂದಿದ್ದರಿಂದ ಬೆಳ್ತಂಗಡಿ ಬೆಟಾಲಿಯನ್‌ನ 24 ಮಂದಿ ಯೋಧರ ಎರಡು ತಂಡ ಸಂಪಾಜೆ, ಬಿಸಿಲೆ, ಸುಬ್ರಹ್ಮಣ್ಯ, ನಾಗರಕೊಲ್ಲಿ ಭಾಗದಲ್ಲಿ ಶೋಧ ಆರಂಭಿಸಿದೆ. ಶುಕ್ರವಾರ ಬಿಸಿಲೆ, ಭಾಗ್ಯ, ಎಡಕುಮೇರಿ, ಕಾಗಿನೆರಿಕಟ್ಟೆ, ಮಣಿಬಂಡ ಮೊದಲಾದೆಡೆ ಶೋಧಿಸಲಾಗಿದೆ.

Advertisement

ಗಸ್ತು ನಿರತ ರೈಲ್ವೇ ಸಿಬಂದಿಗೆ ಬೆದಿಕೆ ಒಡ್ಡಿದ ಅಪರಿಚಿತರು ನಕ್ಸಲರೇ ಅಥವಾ ಬೇಟೆಗಾರರೇ, ಚಾರಣಿಗರೇ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ರೈಲ್ವೇ ಕಾರ್ಮಿಕ ರಾಜು ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಯುತ್ತಿದೆ. ಮುನ್ನೆಚ್ಚರಿಕೆ ಸಲುವಾಗಿ ಎರಡೂ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next