Advertisement
ಗುವಾಹಟಿ-ಬೆಂಗಳೂರು ರೈಲಿನಲ್ಲಿ ಬಾಂಗ್ಲಾದೇಶದಿಂದ ಹೆಣ್ಣು ಮಕ್ಕಳು ಸೇರಿದಂತೆ 206 ಮಂದಿ ಮಕ್ಕಳನ್ನು 17 ಮಂದಿ ವ್ಯಕ್ತಿಗಳು ಅಕ್ರಮವಾಗಿ ಕಳ್ಳ ಸಾಗಣೆ ಮಾಡುತ್ತಿದ್ದಾರೆ ಎಂದು ಕೆಲ ದುಷ್ಕರ್ಮಿಗಳು ಸುಳ್ಳು ಸುದ್ದಿ ಹರಿಬಿಟ್ಟಿದ್ದರು. ಹೀಗಾಗಿ ರೈಲ್ವೆ ಪೊಲೀಸರು, ಸಿಸಿಬಿ ಪೊಲೀಸರು ಹಾಗೂ ರಾಜ್ಯ ಮತ್ತು ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ನಗರದ ದಂಡು ರೈಲ್ವೆ ನಿಲ್ದಾಣಕ್ಕೆ ದೌಡಾಯಿಸಿದರು.
Related Articles
Advertisement
ಅನಂತರ ಸ್ಥಳಕ್ಕೆ ಬಂದ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್, ಶಾಸಕ ಜಮೀರ್ ಅಹ್ಮದ್, ಗಾಳಿ ಸುದ್ದಿಗೆ ಕಿವಿಗೊಟ್ಟು ಚಿಕ್ಕಮಕ್ಕಳನ್ನು ಗಂಟೆಗಳ ಕಾಲ ಆರೋಪಿಗಳಂತೆ ವಿಚಾರಣೆ ನಡೆಸಿದ್ದು ತಪ್ಪು. ಕೂಡಲೇ ಎಲ್ಲರ ದಾಖಲೆಗಳನ್ನು ಪರಿಶೀಲಿಸಿ ಬಿಡುಗಡೆ ಮಾಡುವಂತೆ ಸೂಚಿಸಿದರು. ಡಿಸಿಪಿ ಅಜೇಯ್ ಹಿಲೋರಿ ಮತ್ತು ರೈಲ್ವೇ ಇಲಾಖೆ ಎಸ್.ಪಿ ಚೈತ್ರಾ ಖುದ್ದು ಭೇಟಿ ನೀಡಿ, ಮೌಲ್ವಿಗಳು ಮತ್ತು ಪೋಷಕರು ತಂದಿದ್ದ ಮಕ್ಕಳ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್‌ಗಳನ್ನು ಪರಿಶೀಲಸಿ ಬಿಡುಗಡೆ ಮಾಡಿದರು.
ರಂಜಾನ್ ರಜೆಗೆ ತೆರಳಿದ್ದರುಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಜಾರ್ಖಂಡ್ ಸೇರಿದಂತೆ ದೇಶದ ವಿವಿಧೆಡೆಯ ಕುಗ್ರಾಮದಲ್ಲಿದ್ದ ಮಕ್ಕಳನ್ನು ಅವರ ಸಂಬಂಧಿಕರು ನಗರಕ್ಕೆ ಕರೆತಂದು ಇಲ್ಲಿನ ಮದರಸಾಗಳಿಗೆ ಸೇರಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಕಳೆದ ತಿಂಗಳು ರಂಜಾನ್ ಇದ್ದರಿಂದ ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಸೋಮವಾರ ಎಲ್ಲರೂ ಒಟ್ಟಿಗೆ ಒಂದೇ ರೈಲಿನಲ್ಲಿ ಬೆಂಗಳೂರು ಕಡೆ ಪ್ರಯಾಣಿಸಿದ್ದಾರೆ ಎಂದು ಮೌಲ್ವಿಯೊಬ್ಬರು ತಿಳಿಸಿದರು. ರಸ್ತೆ ತಡೆದು ಪ್ರತಿಭಟನೆ
ಮದರಸಾದ ನೂರಾರು ಮಂದಿ ವಿದ್ಯಾರ್ಥಿಗಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ನಗರದ ಹತ್ತಾರು ಪ್ರದೇಶಗಳಿಂದ ಸುಮಾರು 500ಕ್ಕೂ ಅಧಿಕ ಮಂದಿ ಮುಸ್ಲಿಂ ಸಮುದಾಯದ ಮುಖಂಡರು ದಂಡು ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ದಾಖಲೆಗಳನ್ನು ಪರಿಶೀಲಿಸಿ ಒಂದೆರಡು ಗಂಟೆಗಳಲ್ಲಿ ಮಕ್ಕಳನ್ನು ಬಿಡದಿದ್ದರೆ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ರಸ್ತೆ ತಡೆದು ಸುಮಾರು ಒಂದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು. ಇದರಿಂದ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಯಿತು. ಮಾತಿನ ಚಕಮಕಿ
ದೂರಿನ ಹಿನ್ನೆಲೆಯಲ್ಲಿ ಮಕ್ಕಳನ್ನು ವಶಕ್ಕೆ ಪಡೆದಿರುವ ಪೊಲೀಸರು ಸರಿಯಾದ ದಾಖಲೆಗಳನ್ನು ಪರಿಶೀಲನೆ ನಡೆಸದೇ ಹಾಗೇ ಮಕ್ಕಳನ್ನು ಬಿಟ್ಟು ಕಳುಹಿಸಲಾಗುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಆರೋಪಿಸಿದರು. ಪ್ರಕರಣದ ಸಂಬಂಧ ದೂರು ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಆಗ್ರಹಿಸಿದರು. ಈ ವೇಳೆ ಮತ್ತೂಂದು ಕೋಮಿನ ಕಾರ್ಯಕರ್ತರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಹೀಗಿರುವಾಗ ದೂರು ಏಕೆ ದಾಖಲಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನೂಕಾಟ-ತಳ್ಳಾಟ ಉಂಟಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಬಳಿಕ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಿಗಿ ಪೊಲೀಸ್ ಬದೋಬಸ್ತ್
ಮುಸ್ಲಿಂ ಸಮುದಾಯದ ನೂರಾರು ಮುಖಂಡರು ರೈಲ್ವೆ ನಿಲ್ದಾಣದ ಎದುರು ಜಮಾಯಿಸುತ್ತಿದ್ದಂತೆ ಎಚ್ಚೆತ್ತ ಹಿರಿಯ ಪೊಲೀಸರು ಕೂಡಲೇ ಆರು ವಾಹನಗಳಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿದರು. ಜತೆಗೆ ಸ್ಥಳೀಯ ಠಾಣೆಗಳ ಇನ್‌ಸ್ಪೆಕ್ಟರ್‌ಗಳು, ಎಸಿಪಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು. ಇದೇ ವೇಳೆ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದ ಪ್ರತಿಯೊಬ್ಬರನ್ನು ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಖುದ್ದು ತಪಾಸಣೆ ನಡೆಸಿದರು. ರೈಲ್ವೆ ಟಿಕೆಟ್ ಇಲ್ಲದ ವ್ಯಕ್ತಿಗಳಿಗೆ ನಿರ್ಬಂಧ ಹೇರಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಕ್ಕೆ ಶ್ವಾನದಳದ ಮೂಲಕ ನಿಲ್ದಾಣವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಲಾಯಿತು.
ರಾಜ್ಯದ ವಿವಿಧ ಮದರಸಾಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳು ರಂಜಾನ್ ರಜೆಗೆಂದು ತಮ್ಮ ಊರುಗಳಿಗೆ ತೆರಳಿದ್ದರು. ಇದೀಗ ಎಲ್ಲರೂ ಬೇರೆ ಬೇರೆ ರಾಜ್ಯಗಳಿಂದ ಒಟ್ಟಿಗೆ ಬಂದಿದ್ದಾರೆ. ಇದನ್ನೆ ಕೆಲವು ಸ್ವಹಿತಾಸಕ್ತಿ ಸಂಘಟನೆಗಳ ವ್ಯಕ್ತಿಗಳು ಅಕ್ರಮ ಸಾಗಾಣೆ, ಮತಾಂತರ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ಮಕ್ಕಳ ಪೋಷಕರು, ಮೌಲ್ವಿಗಳು ಸಮಸ್ಯೆಗೆ ಸಿಲುಕಬೇಕಾಯಿತು.
-ಸಮೀ ಉದ್ದಿನ್, ಸಾಮಾಜಿಕ ಕಾರ್ಯಕರ್ತ ರಂಜಾನ್ ರಜೆಗೆಂದು ನೂರಾರು ಮಕ್ಕಳು ಊರುಗಳಿಗೆ ತೆರಳಿದ್ದರು. ಆದರೆ, ಕೆಲ ಗಾಳಿ ಸುದ್ದಿಗೆ ಕಿವಿಗೊಟ್ಟು ರೈಲ್ವೆ ಪೊಲೀಸರು ಮಕ್ಕಳನ್ನು ದಿನಗಟ್ಟಲೇ ವಿಚಾರಣೆ ನಡೆಸಿದ್ದು, ಘೋರ ಅನ್ಯಾಯ. ತಾವು ಮಹಿಳೆ ಮತ್ತು ಮಕ್ಕಳ ವಿಧಾನ ಮಂಡಲ ಸಮಿತಿ ಅಧ್ಯಕ್ಷರಾಗಿದ್ದು, ಬುಧವಾರ ಸಭೆ ಕರೆದು ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿಯ ವಿರುದ್ಧ ಕ್ರಮಕೈಗೊಳಲಾಗುವುದು.
-ಹ್ಯಾರೀಸ್ ಶಾಸಕ