ಬೆಂಗಳೂರು: ಪಾಲಿಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ತರಕಾರಿ ಮಾರಾಟಕ್ಕೆ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಅವಕಾಶ ನೀಡಿದ್ದರಿಂದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶನಿವಾರ ಜನ ಜಂಗುಳಿ ಸೇರಿ ಆತಂಕದ ವಾತಾವರಣ ನಿರ್ಮಾಣವಾಯಿತು.
ನೂರಾರು ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಂದೆಡೆ ಗುಂಪು ಸೇರಿದ ಮೇಲೆ ಪರಿಸ್ಥತಿ ನಿಯಂತ್ರಿಸಲು ವಿಫಲವಾದ ಪಾಲಿಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ತರಕಾರಿ ಮಾರಾಟ ಮಾಡುವುದಕ್ಕೆ ತಾತ್ಕಾಲಿಕ ತಡೆ ನೀಡಿದೆ. ಪಾಲಿಕೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ತರಕಾರಿ ಮಾರಾಟಕ್ಕೆ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಏಕಾಏಕಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಕೆ.ಆರ್. ಮಾರುಕಟ್ಟೆಯನ್ನು ಸ್ಥಳಾಂತರಿಸುವುದಾಗಿ ತಿಳಿಸಿತ್ತು.
ಹೀಗಾಗಿ, ಶನಿವಾರ ಬೆಳಗ್ಗೆಯೇ ಚಿಲ್ಲರೆ ವ್ಯಾಪಾರಿಗಳು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಪ್ರಾರಂಭಿಸಿದರು. ಹೀಗಾಗಿ, ಸಾರ್ವಜನಿಕರು ಖರೀದಿಗೆ ಮುಗಿಬಿದ್ದರು. ಈ ವೇಳೆ ಖರೀದಿಗೆ ಬಂದ ಸಾರ್ವಜನಿಕರು ಮಾಸ್ಕ್ ಧರಿಸದೆ ಹಾಗೂ ಕನಿಷ್ಠ ಒಂದು ಮೀಟರ್ ಅಂತರ ಕಾಯ್ದುಕೊಳ್ಳದೆ ಗುಂಪಾಗಿ ಸೇರಿದ್ದು, ಆತಂಕಕ್ಕೆ ಕಾರಣವಾಯಿತು.
ಕೆ.ಆರ್. ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಭಾಗದಲ್ಲಿ ಸಾರ್ವಜನಿಕರು ಗುಂಪು ಸೇರುತ್ತಿದ್ದ ಹಿನ್ನೆಲೆಯಲ್ಲಿ ನ್ಯಾಷನಲ್ ಕಾಲೇಜು ಮೈದಾನ ಸೇರಿದಂತೆ ಮೂರು ಕಡೆ ವಿಶಾಲ ಪ್ರದೇಶದಲ್ಲಿ ಮಾರುಕಟ್ಟೆ ತೆರೆಯುವುದಕ್ಕೆ ವ್ಯವಸ್ಥೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಉದಯ್ ಗರುಡಾಚಾರ್ ಹಾಗೂ ರವಿಸುಬ್ರಹ್ಮಣ್ಯ ಪರಸ್ಪರ ಚರ್ಚೆ ನಡೆಸಿದ್ದರು. ಈ ನಿಟ್ಟಿನಲ್ಲಿ ವಿವಿಧ ಮೈದಾನಗಳನ್ನು ಪಾಲಿಕೆ ಗುರುತಿಸಿತ್ತಾದರೂ, ಯಾವುದೇ ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೀರು, ವಿದ್ಯುತ್ ಹಾಗೂ ವಾಹನ ನಿಲ್ಲಿಸಲು ವ್ಯವಸ್ಥೆ ಮಾಡಿಕೊಂಡ ಮೇಲೆ ಕೆ.ಆರ್. ಮಾರುಕಟ್ಟೆಯ ಕೆಲವು ಮಳಿಗೆಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದರು.
ಪಾಲಿಕೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳುವ ಮುನ್ನವೇ ಕೆ.ಆರ್. ಮಾರುಕಟ್ಟೆಯ ಕೆಲವು ಮಳಿಗೆಗಳ ವ್ಯಾಪಾರಿಗಳು ವ್ಯಾಪಾರ ಶುರು ಮಾಡಿದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಸೂಕ್ತ ವ್ಯವಸ್ಥೆ ಮಾಡಿಕೊಂಡ ಮೇಲೆ ಮಾರುಕಟ್ಟೆ ಸ್ಥಳಾಂತರ ಮಾಡಲಾಗುವುದು ಎಂದರು.