Advertisement

ಹಿರಿಯ ಲೇಖಕ ಡಾ ಗುರುಲಿಂಗ ಕಾಪಸೆ ಅವರಿಗೆ ಅನುವಾದ ಪ್ರಶಸ್ತಿ

04:37 PM Jun 24, 2022 | Team Udayavani |

ಧಾರವಾಡ : ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಅನುವಾದ ಪುಸ್ತಕ ಪ್ರಶಸ್ತಿಗೆ ಹಿರಿಯ ಲೇಖಕರಾದ ಡಾ ಗುರುಲಿಂಗ ಕಾಪಸೆ ಅವರು ಭಾಜನರಾಗಿದ್ದಾರೆ.

Advertisement

ಡಾ. ಕಾಪಸೆ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ವಿ ಸ ಖಾಂಡೇಕರ್ ಅವರ ‘ಒಂದು ಪುಟದ ಕಥೆ’ ಯು ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಆಯ್ಕೆಯಾಗಿದೆ.’ಒಂದು ಪುಟದ ಕಥೆ’ (ಮೂಲದಲ್ಲಿ ‘ಏಕಾ ಪಾನಾಚಿ ಗೋಷ್ಠ)ಯು ಖಾಂಡೇಕರ್ ಅವರ ಆತ್ಮಕಥೆ ಯಾಗಿದೆ.

ಖಾಂಡೇಕರ್ ಅವರು ಮರಾಠಿಯ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರು. ಅವರ ‘ಯಯಾತಿ ‘ ಎಂಬ ಕೃತಿಗೆ ಜ್ಞಾನಪೀಠ ಪ್ರಶಸ್ತಿಯು ಬಂದಿತ್ತು.

ಡಾ.ಕಾಪಸೆಯವರು ಅನುವಾದಿಸಿದ ಖಾಂಡೇಕರ್ ಅವರ ಆತ್ಮಕಥೆಯು ಕಳೆದ ಶತಮಾನದ ಭಾರತದ ಅದರಲ್ಲಿಯೂ ಮಹಾರಾಷ್ಟದ ಕೊಂಕಣ ಭಾಗದ ಸಾಮಾಜಿಕ, ಆರ್ಥಿಕ, ರಾಜಕೀಯ ,ಜಾತೀಯ ಸ್ಥಿತಿಗತಿಗಳ ಸಮಗ್ರವಾದ ವಿವರಣೆ ನೀಡುತ್ತದೆ. ವಿಶೇಷವೆಂದರೆ ಖಾಂಡೇಕರ್ ಅವರು ಕರ್ನಾಟಕದ ಅದರಲ್ಲೂ ಬೆಳಗಾವಿ ಜಿಲ್ಲೆಯ ಅಳಿಯ. ಖಾನಾಪುರ ತಾಲೂಕಿನ ಅಸೋಗಾ ಗ್ರಾಮದ ಮಣೇರಿಕರ್ ಕುಟುಂಬದ ಉಷಾ ಅವರು ಖಾಂಡೇಕರ್ ರ ಹೆಂಡತಿ. ಮದುವೆಗಾಗಿ ಅವರು ಮಹಾರಾಷ್ಟ್ರದ ರತ್ನಾಗಿರಿಯಿಂದ ಅಸೋಗಾ ಗ್ರಾಮದ ವರೆಗೆ ಚಕ್ಕಡಿ ಕಟ್ಟಿಕೊಂಡು ಬಂದ ವಿವರಗಳನ್ನು ಕೃತಿಯಲ್ಲಿ ನೀಡಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ವಿಭಾಗದ ಸಂಚಾಲಕರಾಗಿರುವ ಡಾ. ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆದ ಅನುವಾದ ಸಾಹಿತ್ಯ ಪ್ರಶಸ್ತಿ ಆಯ್ಕೆ ಸಮಿತಿಯು ಡಾ ಕಾಪಸೆ ಯವರು ಅನುವಾದಿಸಿದ ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆಮಾಡಿತು. ಆಯ್ಕೆ ಸಮಿತಿಯ ಜ್ಯೂರಿಗಳಾಗಿ ಹಿರಿಯ ಲೇಖಕರಾದ ಡಾ. ಬಸವರಾಜ ಕಲ್ಗುಡಿ, ಕವಿಗಳಾದ ಬಿ ಆರ್ ಲಕ್ಷ್ಮಣರಾವ್ ಹಾಗೂ ಡಾ. ಸುಬ್ಬು ಹೊಲಿಯಾರ್ ಅವರುಗಳು ಇದ್ದರು.ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್‌ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ದಿಲ್ಲಿಯಲ್ಲಿ ನೆರವೇರಲಿದೆ. ಪ್ರಶಸ್ತಿಯು 50000 ರುಪಾಯಿ , ಸ್ಮತಿ ಫಲಕ ,ಶಾಲು ಸನ್ಮಾನ ಒಳಗೊಂಡಿರುತ್ತದೆ.

Advertisement

ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪ್ರಶಸ್ತಿಗೆ ಭಾಜನರಾದ ಡಾ ಕಾಪಸೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next