ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಕೇಂದ್ರದ ನೂತನ ಕ್ರೀಡಾ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ಕಿರಣ್ ರಿಜಿಜು ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡ 46 ವರ್ಷದ ಅನುರಾಗ್ ಠಾಕೂರ್ ಕ್ರೀಡೆ ಹಾಗೂ ಯುವಜನ, ಮಾಹಿತಿ ಮತ್ತು ಪ್ರಸಾರ ಖಾತೆಯನ್ನೂ ನಿಭಾಯಿಸಲಿದ್ದಾರೆ. ನಿಸಿತ್ ಪ್ರಾಮಾಣಿಕ್ ಅವರನ್ನು ಸಹಾಯಕ ಕ್ರೀಡಾ ಸಚಿವರನ್ನಾಗಿ ನೇಮಿಸಲಾಗಿದೆ. ಮಣಿಶಂಕರ್ ಅಯ್ಯರ್ ಬಳಿಕ (2006-2008) ಕ್ರೀಡಾ ಖಾತೆ ನಿಭಾಯಿಸಲಿರುವ ಮೊದಲ ಕ್ಯಾಬಿನೆಟ್ ಸಚಿವರಾಗಿದ್ದಾರೆ ಠಾಕೂರ್.
“ಒಗ್ಗೂಡಿ ಮುನ್ನಡೆಯುವೆ’ :
ಭಾರತದ ಕ್ರೀಡಾಪಟುಗಳು ಟೋಕಿಯೊ ಒಲಿಂಪಿಕ್ಸ್ ಗೆ ಅಭ್ಯಾಸ ನಡೆಸಿ ಜಪಾನಿಗೆ ವಿಮಾನ ಏರುವ ಹೊತ್ತಿನಲ್ಲೇ ಅನುರಾಗ್ ಠಾಕೂರ್ ತಮ್ಮ ಕಚೇರಿಯನ್ನು ಪ್ರವೇಶಿಸಿದ್ದಾರೆ. ಈ ಸಂದರ್ಭದಲ್ಲಿ ಮಾತಾಡಿದ ಅವರು, “ಕಿರಣ್ ರಿಜಿಜು ಅವರ ಅಧಿಕಾರಾವಧಿಯಲ್ಲಿ ಅನೇಕ ಉತ್ತಮ ಕೆಲಸಗಳಾಗಿವೆ. ಎಲ್ಲರನ್ನೂ ಒಗ್ಗೂಡಿಸಿ ಇದನ್ನು ಮುಂದುವರಿಸಿಕೊಂಡು ಹೋಗಲಿದ್ದೇನೆ. ದೇಶದ ಕ್ರೀಡಾ ಪ್ರಗತಿಗಾಗಿ ದುಡಿಯಲಿದ್ದೇನೆ’ ಎಂದರು.
ಅನುರಾಗ್ ಠಾಕೂರ್ ಕ್ರೀಡಾ ಖಾತೆಗೂ ಮೊದಲು ನಿರ್ಮಲಾ ಸೀತಾರಾಮನ್ ಅವರ ಕೈಕೆಳಗೆ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ ಖಾತೆಯ ಸಹಾಯಕ ಸಚಿವರಾಗಿದ್ದರು. ಬುಧವಾರದ ಸಚಿವ ಸಂಪುಟ ವಿಸ್ತರಣೆಯ ವೇಳೆ ಕ್ಯಾಬಿನೆಟ್ ದರ್ಜೆಗೆ ಭಡ್ತಿ ಪಡೆದರು.