ಹೊಸದಿಲ್ಲಿ: ಪುಣೆಯಲ್ಲಿರುವ ಫಿಲ್ಮ್ ಆ್ಯಂಡ್ ಟೆಲಿೆವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷ ಸ್ಥಾನಕ್ಕೆ ಬಾಲಿವುಡ್ ನಟ ಅನುಪಂ ಖೇರ್ ಬುಧವಾರ ರಾಜೀನಾಮೆ ನೀಡಿದ್ದಾರೆ. ಅಮೆರಿಕದ ಟಿವಿ ಸಂಸ್ಥೆ ಜತೆಗಿನ ಒಪ್ಪಂದದ ಹಿನ್ನೆಲೆಯಲ್ಲಿ ಹುದ್ದೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್‌ಗೆ ಕಳುಹಿಸಲಾಗಿರುವ ರಾಜೀನಾಮೆ ಪತ್ರದಲ್ಲಿ ಸ್ಥಾನ ತ್ಯಜಿಸಿರುವುದಕ್ಕೆ ಕಾರಣ ನೀಡಿದ್ದಾರೆ. 2018ರಿಂದ 2019ರ ನಡುವೆ ಸುಮಾರು 9 ತಿಂಗಳ ಕಾಲ ತಾವು ಅಮೆರಿಕದಲ್ಲಿ ಟಿವಿ ಕಾರ್ಯಕ್ರಮ ನಿಮಿತ್ತ ಇರಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಅವರ ರಾಜೀನಾಮೆಯನ್ನು ಸಚಿವ ರಾಥೋಡ್ ಸ್ವೀಕರಿಸಿದ್ದಾರೆ. ಗಮನಾರ್ಹ ಅಂಶವೆಂದರೆ 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಖೇರ್ ಕಣಕ್ಕೆ ಇಳಿಯಲಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದಕ್ಕೆ ಪೂರಕವಾಗಿ ಈ ಬೆಳವಣಿಗೆ ನಡೆದಿದೆ.