Advertisement

ಅನುಜಾ ಮಹಿಳಾ ಸಂಸ್ಥೆಯ ವಾರ್ಷಿಕೋತ್ಸವ ಸಂಭ್ರಮ

06:06 PM Jan 04, 2020 | Team Udayavani |

ಡೊಂಬಿವಲಿ, ಜ. 3: ಅನುಜಾ ಮಹಿಳಾ ಸಂಸ್ಥೆಯ 39ನೇ ವಾರ್ಷಿಕೋತ್ಸವ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಡಿ. 28ರಂದು ಡೊಂಬಿವಲಿ ಪೂರ್ವದ ಸರ್ವೇಶ್‌ ಹಾಲ್‌ನಲ್ಲಿ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಗಳಾಗಿ ರೋಟರಿ ಕ್ಲಬ್‌ ಆಫ್‌ ಡೊಂಬಿವಲಿ (ಉತ್ತರ) ವಿಭಾಗದ ಕಾರ್ಯದರ್ಶಿ ಶರದ್‌ ಸೇಠ್ ಅವರು ಆಗಮಿಸಿದ್ದರು.

Advertisement

ಸಭಾ ಕಾರ್ಯಕ್ರಮದಲ್ಲಿ ಲಕ್ಷ್ಮೀ ರಾವ್‌ ಮತ್ತು ವಿಜಯ ಲಕ್ಷ್ಮೀ ಕುಲಕರ್ಣಿ ಅವರ ಪ್ರಾರ್ಥನೆಯ ಅನಂತರ ಅನುಜಾ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಸಂದ್ಯಾ ರವಿ ಅವರು ಮುಖ್ಯ ಅತಿಥಿ, ಕಲಾವಿದರು ಹಾಗೂ ನೆರದಿದ್ದ ಸಭಿಕರಿಗೆ ಸ್ವಾಗತವನ್ನು ಕೋರಿ, ಸಂಸ್ಥೆಯ ಪರಿಚಯ ಹಾಗೂ ಸಂಸ್ಥೆಯು ನಡೆಸಿರುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಇತರ ಕಾರ್ಯ ಕ್ರಮಗಳ ವರದಿಯನ್ನು ಸಭೆಗೆ ತಿಳಿಸಿದರು. ಮುಖ್ಯ ಅತಿಥಿಯ ಪರಿಚಯವನ್ನು ರವಿ ನಂದನ್‌ ಅವರು

ಮಾಡಿದರು. ಸಂಸ್ಥೆಯ ಅಧ್ಯಕ್ಷೆ ಸಂಧ್ಯಾ ರವಿ ಅವರು ಮುಖ್ಯ ಅತಿಥಿಗೆ ಸಂಸ್ಥೆಯ ಪರವಾಗಿ ಪುಷ್ಪಗುತ್ಛ ಮತ್ತು ಫಲ ತಾಂಬೂಲ ನೀಡಿ ಗೌರವಿಸಿದರು.  ರೋಟರಿ ಕ್ಲಬ್‌ನ ಶರದ್‌ ಸೇಠ್ ಅವರು ಮಾತನಾಡುತ್ತ ರೋಟರಿ ಸಂಸ್ಥೆ ನಡೆದು ಬಂದದಾರಿ, ಸಂಸ್ಥೆಯು ನಡೆಸುತ್ತಿರುವ ಸಾಂಸ್ಕೃತಿಕ, ಸಾಮಾಜಿಕ ಮತ್ತುಧನ ಸಹಾಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಅಂತೆಯೇ, ಅನುಜಾ ಮಹಿಳಾ ಸಂಸ್ಥೆಯು ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆಯ 39ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕಾಗಿ ಸಂಸ್ಥೆಗೆ ಧನ್ಯವಾದಗಳನ್ನು ಸಲ್ಲಿಸಿದರು.

ನೃತ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ ಬೆಂಗಳೂರಿನ ಸಮುದ್ಭವ ತಂಡದ ಮುಖ್ಯ ರೂವಾರಿಯಾಗಿರುವ ಪ್ರಿಯಾ ಗಣೇಶ್‌, ಲತಾ ರಮೇಶ್‌ ಹಾಗೂ ಆರ್‌. ಅನಿಲ್‌ಕುಮಾರ್‌ ಅವರನ್ನು ರವಿ ನಂದನ್‌ ಅವರು ಸಭೆಗೆ ಪರಿಚಯಿಸಿದರು. ಮುಖ್ಯ ಅತಿಥಿ ಶರದ್‌ ಸೇಠ್ ಅವರು ಬೆಂಗಳೂರು ಸಮುದ್ಭವ ತಂಡದ ಹಿರಿಯ ಮತ್ತು ಕಿರಿಯ ಕಲಾವಿದರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ, ಪುಷ್ಪಗುತ್ಛ, ಫಲ ತಾಂಬೂಲವನ್ನು ನೀಡಿ ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ

Advertisement

ಪ್ರಾರಂಭದಲ್ಲಿ ಬಾಲ ಕಲಾವಿದರಿಂದ ಭರತನಾಟ್ಯ ಮತ್ತು ಹರಿಕಥಾ ಕಾಲ ಕ್ಷೇಪ ನಡೆಯಿತು. ಅನಂತರ ಹಿರಿಯ ಕಲಾವಿದರಿಂದ ಪ್ರದರ್ಶನಗೊಂಡ ಭರತನಾಟ್ಯ ಕಾರ್ಯಕ್ರಮವು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಅನುಜಾ ಮಹಿಳಾ ಸಂಸ್ಥೆಯ ಮಾಜಿ ಅಧ್ಯಕ್ಷೆ ಸುಮಾ ದ್ವಾರಕಾನಾಥ್‌ ಅವರು ಮಾತನಾಡುತ್ತಾ, ಪ್ರಿಯಾ ಗಣೇಶ್‌ರವರು ಡೊಂಬಿವಲಿಯಲ್ಲಿ ಹುಟ್ಟಿ ಬೆಳೆದು ಪದವೀಧರೆಯಾಗಿ ಭರತನಾಟ್ಯ, ಕಥಕ್‌ ನೃತ್ಯ, ಚಿತ್ರಕಲೆಯಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಬೆಂಗಳೂರಿನಲ್ಲಿ ಸಮುಧ್ಛವ ಸಂಸ್ಥೆಯನ್ನು ಸ್ಥಾಪಿಸಿ, ಸಂಸ್ಥೆಯ ಮುಖ್ಯಸ್ಥರಾಗಿ ಮಕ್ಕಳಿಗೆ ಭರತನಾಟ್ಯ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದ್ದಾರೆ. ಡೊಂಬಿವಲಿಯ ಕಲಾವಿದೆ ಯಾಗಿರುವ ಅವರು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಎಂದು ಶುಭ ಹಾರೈಸಿದರು.

ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ. ಎಸ್‌. ನಾಯಕ್‌ ಅವರು ಕಲಾವಿದರಿಗೆ ಪ್ರೀತಿಯ ಕಾಣಿಕೆಯನ್ನು ನೀಡಿ, ಅವರ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ ಮುಂಬಯಿ ಕನ್ನಡ ಸಂಘದಲ್ಲಿ ಇವರ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದೆಂದು ತಿಳಿಸಿ ಶುಭ ಹಾರೈಸಿದರು.

ಡಾ| ಸುಧಾ ಗುಂಜೇಕರ್‌ ಅವರು ಕಾರ್ಯಕ್ರಮ ನಿರೂಪಿಸಿದರು. ಸೀತಾ ದೇವಾಡಿಗ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next