Advertisement

ಭಾರತಿ ಕೃಪಾಪೋಷಿತ ಅನುಗ್ರಹ ಹೋಟೆಲ್‌

09:34 PM Mar 24, 2019 | Sriram |

ಹೋಟೆಲ್‌ ಜೊತೆಗೆ ಮೆಸ್‌ ನಡೆಸುವ ಮೂಲಕ ಹಸಿದು ಬಂದವರಿಗೆ ಕಡಿಮೆ ದರದಲ್ಲಿ ಊಟ ಮತ್ತು ತಿಂಡಿಯನ್ನು ಒದಗಿಸುತ್ತಿರುವ ಹೋಟೆಲ್‌ “ಅನುಗ್ರಹ’ ವಿಜಯಪುರ(ಬಿಜಾಪುರ)ದಲ್ಲಿದೆ. ಇಲ್ಲಿ ತಿಂಡಿಗೆ ದೋಸೆ ಮಾತ್ರ ಮಾಡೋದು. ಅದರಲ್ಲೇ ಎರಡು ಮೂರು ಬಗೆಯ ಇರುತ್ತೆ. ಇದರ ಜೊತೆ ಕೆಂಪ್‌ ಚಟ್ನಿ, ಪಲ್ಯ ಕೊಡುತ್ತಾರೆ. ದರ 15 ರೂ., 30 ರೂ. ಕೊಟ್ರೆ ಚಪಾತಿ ಹಾಗೂ ಜೋಳದ ರೊಟ್ಟಿ ಊಟ ಸಿಗುತ್ತದೆ.

Advertisement

ಆರು ವರ್ಷಗಳ ಹಿಂದೆ ವಿಜಯಪುರದ ಮೀನಾಕ್ಷಿ ಚೌಕದ ರಸ್ತೆ ಬದಿಯಲ್ಲಿ ಪುಟ್ಟದಾಗಿ ಹೋಟೆಲ್‌ ಪ್ರಾರಂಭಿಸಿದ ಭಾರತಿ, ಈಗ ಮೀನಾಕ್ಷಿ ಚೌಕದ ಬಳಿ ಇರುವ ಗಾರ್ಡನ್‌ನಲ್ಲೇ ಟೆಂಟ್‌ ಕಟ್ಟಿಕೊಂಡು ಹೋಟೆಲ್‌ ಜತೆ ಮೆಸ್‌ ಕೂಡ ನಡೆಸುತ್ತಿದ್ದಾರೆ. ಇಲ್ಲಿ ಕೋಚಿಂಗ್‌ಗೆ ಬರುವ ವಿದ್ಯಾರ್ಥಿಗಳು ಹಾಗೂ ಸ್ಥಳೀಯರೇ ಇವರಿಗೆ ಗ್ರಾಹಕರು. ಮಹಿಳೆಯರೇ ಸೇರಿಕೊಂಡು ಅಡುಗೆ ಮಾಡುವುದರಿಂದ ಮನೆಯಲ್ಲೇ ಮಾಡಿದ ಅಡುಗೆಯ ರಚಿಯೇ ಸಿಗುತ್ತದೆ.

ಬಡತನದಲ್ಲೇ ಹುಟ್ಟಿ ಬೆಳೆದ ಹೋಟೆಲ್‌ ಮಾಲೀಕರಾದ ಭಾರತಿ ಅವರ ಪತಿ ಮೇಸಿŒ ಕೆಲಸ ಮಾಡುತ್ತಿದ್ದರು. ಆದರೆ, ಅವರು ದುಡಿದದ್ದು ಮನೆಗೆ ಸಾಕಾಗುತ್ತಿರಲಿಲ್ಲ. ಇಬ್ಬರು ಹೆಣ್ಣು ಮಕ್ಕಳನ್ನು ಸಾಕಲು ಮನೆ ಕೆಲಸಕ್ಕೆ ಹೋಗುತ್ತಿದ್ದರು ಭಾರತಿ. ಇದರ ಜೊತೆಗೆ ಮಾರುಕಟ್ಟೆಯಿಂದ ತರಕಾರಿ ತಂದು ಓಣಿ ಓಣಿ ತಿರುಗಿ ಮಾರಾಟ ಮಾಡಿದ್ದರು. ಆಗಲೂ ಕಷ್ಟ ಕಡಿಮೆ ಆಗಲಿಲ್ಲ. ಕಡೆಗೆ, ಮೀನಾಕ್ಷಿ ಚೌಕದಲ್ಲಿ ಪುಟ್ಟ ಹೋಟೆಲ್‌ ಪ್ರಾರಂಭಿಸಿ ಚಹಾ, ಕಾಫಿ, ದೋಸೆ, ಬಜ್ಜಿ, ಚಪಾತಿ, ಅನ್ನ ಸಂಬಾರು ಮಾರಾಟ ಮಾಡುತ್ತಿದ್ದರು. ಹೀಗಿದ್ದಾಗಲೇ ಪತಿ ಮೃತಪಟ್ಟರು. ಆದರೂ ಎದೆಗುಂದದೆ ಸ್ಥಳೀಯರ ಸಹಕಾರದಿಂದ ಹೋಟೆಲ್‌ ಮುನ್ನಡೆಸಿಕೊಂಡು, ಈಗ 9 ಮಂದಿ ಮಹಿಳೆಯರಿಗೆ ಕೆಲಸ ಕೊಟ್ಟಿದ್ದಾರೆ. ಇಬ್ಬರು ಪುತ್ರಿಯರಲ್ಲಿ ಒಬ್ಬರನ್ನು ಉಡುಪಿಯಲ್ಲಿ ಓದಿಸುತ್ತಿದ್ದು, ಆಕೆ ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಮತ್ತೂಬ್ಬರು ವಿಜಯಪುರದ ಉತ್ತಮ ಶಾಲೆಯಲ್ಲಿ ಓದುತ್ತಿದ್ದಾರೆ.

ಇತರರಿಗೂ ಮಾರ್ಗದರ್ಶನ:
ಉದ್ಯೋಗವಿಲ್ಲದೆ ಕಂಗಾಲಾಗಿದ್ದ 9 ಮಂದಿಗೆ ಉದ್ಯೋಗ ಕೊಟ್ಟಿರುವ ಭಾರತಿ, ಅವರಿಗೂ ಸ್ವ ಉದ್ಯೋಗ ಮಾಡಲು ಮಾರ್ಗದರ್ಶನ ನೀಡುತ್ತಾರೆ. ಹೋಟೆಲ್‌ ಪ್ರಾರಂಭದಿಂದಲೂ ಶೋಭಾ(ಇಬ್ಬರು), ಅನಿತಾ, ರೂಪಾ, ಸತ್ಯಮ್ಮ, ಪಾರ್ವತಿ, ಪದ್ಮಾ, ರೇಷ್ಮಾ ಭಾರತಿಯವರ ಜೊತೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರಿಗೆ ಅವತ್ತಿನ ಕೂಲಿ ಅಂದೇ ಕೊಡಲಾಗುತ್ತದೆ.

ಮೆಸ್‌ ಇದೆ:
ಕೋಚಿಂಗ್‌ ಕ್ಲಾಸ್‌ಗೆ ಬರುವ ವಿದ್ಯಾರ್ಥಿಗಳಿಗಾಗಿ ಮೆಸ್‌ ನಡೆಸುತ್ತಿರುವ ಭಾರತಿ, ತಿಂಗಳಿಗೆ 1500 ರೂ. ಕೊಟ್ರೆ 2 ಹೊತ್ತು ಊಟ ಕೊಡುತ್ತಾರೆ.

Advertisement

ತಿಂಡಿ, ಊಟ:
ಹೋಟೆಲ್‌ನ ವಿಶೇಷ ದೋಸೆ. ಬೆಳಗ್ಗೆ 7.30 ರಿಂದ 11 ಗಂಟೆವರೆಗೆ ಎರಡು ಮೂರು ಥರದ ದೋಸೆ ಸಿಗುತ್ತದೆ. ಎರಡು ದೋಸೆ ತೆಗೆದುಕೊಂಡ್ರೆ 15 ರೂ., 3 ತೆಗೆದುಕೊಂಡರೆ 20 ರೂ., ಮಧ್ಯಾಹ್ನದ ನಂತರ ಚಪಾತಿ, ರೊಟ್ಟಿ ಊಟ ಸಿಗುತ್ತದೆ. ಚಪಾತಿ ಅಂದ್ರೆ ಮೂರು, ಜೋಳದ ರೊಟ್ಟಿಯಾದ್ರೆ ಎರಡು. ಇದರ ಜೊತೆ ಕಾಳು ಪಲ್ಯ, ಕಾಯಿ ಪಲ್ಯ(ಪ್ರತಿ ದಿನ ಬೇರೆ ಬೇರೆ ಇರುತ್ತೆ), ಮೊಸರು, ಚಟ್ನಿ ಪುಡಿ, ಅನ್ನ, ಸಾಂಬರ್‌, ಉಪ್ಪಿನಕಾಯಿ. ಇದಿಷ್ಟಕ್ಕೆ 30 ರೂ. ಮಾತ್ರ.

ಹೋಟೆಲ್‌ ವಿಳಾಸ:
ವಿಜಯಪುರ ನಗರದ ಮೀನಾಕ್ಷಿ ಚೌಕ, ಅಲ್ಲಿನ ಗಾರ್ಡನ್‌ ಒಳಗೆ ಅನುಗ್ರಹ ಹೋಟೆಲ್‌ ಇದೆ.

ಹೋಟೆಲ್‌ ಸಮಯ:
ಬೆಳಗ್ಗೆ 7.30 ರಿಂದ ರಾತ್ರಿ 10 ಗಂಟೆಯವರೆಗೆ, ಭಾನುವಾರ 2.30ರವರೆಗೆ ತೆರೆದಿರುತ್ತದೆ.

ಭೋಗೇಶ ಆರ್‌. ಮೇಲುಕುಂಟೆ

Advertisement

Udayavani is now on Telegram. Click here to join our channel and stay updated with the latest news.

Next