ಬಂಟ್ವಾಳ: ದ.ಕ. ಜಿಲ್ಲಾಡಳಿತ, ಜಿ.ಪಂ., ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅ. 4ರಂದು ಬಿ.ಸಿ.ರೋಡ್‌ನ ಬಂಟವಾಳದ ಬಂಟರ ಭವನದಲ್ಲಿ ನಡೆಯಲಿರುವ ಅಂತ್ಯೋದಯ ಸಮಾವೇಶದ ಪೂರ್ವಭಾವಿಯಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭವನವನ್ನು ವೀಕ್ಷಿಸಿ ಅಧಿಕಾರಿಗಳು ಹಾಗೂ ಪ್ರಮುಖರ ಜತೆ ಸಮಾಲೋಚನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಇಲಾಖೆಗಳ ಮಾಹಿತಿಗಳು ಮಧ್ಯವರ್ತಿಗಳ ಕಾಟವಿಲ್ಲದೆ ತಳಮಟ್ಟದ ಜನತೆಗೆ ತಲುಪ ಬೇಕಾದರೆ ಚುನಾಯಿತ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿರುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಅವಧಿ ಮುಗಿದರೂ ಜಿ.ಪಂ., ತಾ.ಪಂ. ಸದಸ್ಯರನ್ನೂ ಅಹ್ವಾನಿಸಲಾಗಿದೆ ಎಂದರು.
ಪ್ರತಿನಿಧಿಗಳೊಂದಿಗೆ ಸಂವಾದ ನಡೆಯಲಿದೆ. ಈ ಸಮಾವೇಶವನ್ನು ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯಲ್ಲಿ ನಡೆಸಲಾಗಿದ್ದು, ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿದೆ. ಅಕ್ಟೋಬರ್ ಅಂತ್ಯದೊಳಗೆ 10 ಜಿಲ್ಲೆಯಲ್ಲಿ ಅಂತ್ಯೋದಯ ಸಮಾವೇಶ ನಡೆಸುವ ಯೋಚನೆ ಇದೆ ಎಂದರು.
ಇದನ್ನೂ ಓದಿ:“ಮದುವೆಗಳ ಬದಲಿಗೆ ವಿಚ್ಛೇದನಗಳನ್ನು ಸಂಭ್ರಮಿಸಬೇಕು” : ರಾಮ್ ಗೋಪಾಲ್ ವರ್ಮಾ
ಪ್ರತಿನಿಧಿಗಳ ನೋಂದಣಿ, ಪಾರ್ಕಿಂಗ್ ವ್ಯವಸ್ಥೆ, ಸತ್ಕಾರ, ಊಟೋಪಚಾರ, ಸಭಾಂಗಣಗಳನ್ನು ಪರಿಶೀಲಿಸಿ ಸಿದ್ಧತೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸಮಾಜ ಕಲ್ಯಾಣ ಇಲಾಖೆಯ ದ.ಕ.ಜಿಲ್ಲಾ ಉಪನಿರ್ದೇಶಕ ಯೋಗೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್‌ಕುಮಾರ್ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ನೋಡಲ್ ಅಧಿಕಾರಿ ಚಂದ್ರ ನಾಯ್ಕ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ರವೀಂದ್ರ ಕಂಬಳಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ತಾ.ಪಂ. ಮಾಜಿ ಸದಸ್ಯರಾದ ಗಣೇಶ್ ಸುವರ್ಣ, ಸೋಮಪ್ಪ ಕೋಟ್ಯಾನ್, ಬಿಜೆಪಿ ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಡೊಂಬಯ ಅರಳ, ಪ್ರದೀಪ್ ಅಜ್ಜಿಬೆಟ್ಟು, ಪವನ್ ಕುಮಾರ್ ಶೆಟ್ಟಿ, ನಂದರಾಮ ರೈ ಮೊದಲಾದವರು ಉಪಸ್ಥಿತರಿದ್ದರು.
ಸಾಮರಸ್ಯಕ್ಕೆ ಕಾರ್ಯಕ್ರಮ
ಕೊಪ್ಪಳ ಜಿಲ್ಲೆಯಲ್ಲಿ ಬಾಲಕ ದೇವಸ್ಥಾನ ಪ್ರವೇಶ ಮಾಡಿರುವುದಕ್ಕೆ ಪೋಷಕರಿಗೆ ದಂಡ ವಿಧಿಸಿರುವಂತಹ ಪ್ರಕರಣಗಳು ಮುಂದೆ ನಡೆಯಬಾರದು ಎಂಬ ಹಿನ್ನೆಲೆಯಲ್ಲಿ ಪ್ರತೀ ಗ್ರಾ.ಪಂ.ನಲ್ಲಿ ಸಾಮರಸ್ಯದ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದ್ದು, ಮುಂದಿನ ದಿನಗಳಲ್ಲಿ ಅದನ್ನು ತೀರ್ಮಾನಿಸಲಾಗುವುದು ಎಂದು ಸಚಿವರು ತಿಳಿಸಿದರು.