Advertisement

ಅಂತ್ಯೋದಯ ಎಕ್ಸ್‌ಪ್ರೆಸ್‌ಗೆ ನಿಲುಗಡೆ ನೀಡದೆ ಕಾಸರಗೋಡಿನ ಅವಗಣನೆ

06:00 AM Jun 10, 2018 | Team Udayavani |

ಕಾಸರಗೋಡು: ರಾಜಧಾನಿ ಎಕ್ಸ್‌ ಪ್ರಸ್‌ ರೈಲಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕೆಂದು ಪ್ರಯಾಣಿಕರ ಮತ್ತು ಜನಪ್ರತಿನಿಧಿಗಳ ಹಲವು ವರ್ಷಗಳ ಬೇಡಿಕೆ ಇರುವಂತೆ ಅಂತ್ಯೋದಯ ಎಕ್ಸ್‌ಪ್ರೆಸ್‌ಗೆ ನಿಲುಗಡೆ ನೀಡದೆ ಅವಗಣಿಸಲಾಗಿದೆ ಎಂದು ಸಾರ್ವತ್ರಿಕ ಅಭಿಪ್ರಾಯ ಕೇಳಿ ಬಂದಿದೆ. 

Advertisement

ದಾದರ್‌ ಕೊಚ್ಚುವೇಲಿ, ಕೊಯಮತ್ತೂರು ಬಿಕಾನೀರ್‌, ತಿರುವನಂತಪುರ (ವಾರಕ್ಕೆ ಒಂದು ಬಾರಿ). ತುರಂತ್‌ ಎಕ್ಸ್‌ಪ್ರೆಸ್‌ ಮೊದಲಾದ ರೈಲು ಗಳಿಗೆ ಕಾಸರಗೋಡಿನಲ್ಲಿ ನಿಲುಗಡೆಯಿಲ್ಲ.

ಮಲಬಾರಿನ ರೈಲು ಪ್ರಯಾಣಿಕರಿಗೆ ಪ್ರಯೋಜನಕಾರಿ ಯಾಗಿರುವ ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲು ಗಾಡಿಗೆ ಕಾಸರಗೋಡು ಜಿಲ್ಲೆಯ ಯಾವುದೇ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಿಲ್ಲ. ತಿರುವನಂತಪುರ ಕೊಚ್ಚುವೇಲಿಯಿಂದ ಮಂಗಳೂರಿಗೆ ವಾರಕ್ಕೆ ಎರಡು ಬಾರಿ ಸಂಚ ರಿಸುವ ಈ ರೈಲು ಗಾಡಿಗೆ ಕಣ್ಣೂರು, ಕಲ್ಲಿಕೋಟೆ, ಶೋರ್ನೂರು, ತೃಶ್ಶೂರು, ಎರ್ನಾಕುಳಂ ಜಂಕ್ಷನ್‌, ಕೊಲ್ಲಂ, ಕೊಚ್ಚುವೇಲಿಯಲ್ಲಿ ಮಾತ್ರ ನಿಲುಗಡೆಯಿದೆ.

ಅಂತ್ಯೋದಯ ರೈಲುಗಾಡಿ ಗುರುವಾರ ಮತ್ತು ಶನಿವಾರ ರಾತ್ರಿ 9.25ಕ್ಕೆ ಕೊಚ್ಚುವೇಲಿಯಿಂದ ಹೊರಟು ಮರುದಿನ ಮಂಗಳೂರಿಗೆ ತಲುಪಲಿದೆ. ಶುಕ್ರವಾರ ಮತ್ತು ರವಿವಾರ ಮಂಗಳೂರು ರೈಲು ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಹೊರಟು ಮರುದಿನ ಕೊಚ್ಚುವೇಲಿಗೆ ತಲುಪಲಿದೆ. 18 ಬೋಗಿಗಳಿರುವ ಈ ರೈಲು ಗಾಡಿಯಲ್ಲಿ ಎಲ್ಲ ಬೋಗಿ ಗಳು ಜನರಲ್‌ ಆಗಿರುತ್ತವೆ. ಕೇರಳದ ದಕ್ಷಿಣದಿಂದ ಹೊರ ಡುವ ರೈಲುಗಾಡಿಗೆ ಹತ್ತಿರದ ಜಿಲ್ಲೆಯಾದ ಕೊಲ್ಲಂನಲ್ಲಿ ನಿಲುಗಡೆ ನೀಡಿದ್ದರೂ, ಉತ್ತರದ ಕೊನೆಯ ಜಿಲ್ಲೆಯಾದ ಕಾಸರಗೋಡಿನಲ್ಲಿ  ನಿಲುಗಡೆ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ರಾಜ್ಯದ ರಾಜಧಾನಿಯಾದ ತಿರುವನಂತಪುರಕ್ಕೆ ವಿವಿಧ ಅಗತ್ಯಗಳಿಗಾಗಿ ದಿನ ನಿತ್ಯ ನೂರಾರು ಪ್ರಯಾಣಿಕರು ಸಂಜೆ ವೇಳೆ ಇರುವ ಮಲಬಾರ್‌, ಮಾವೇಲಿ ಸಹಿತ ರೈಲುಗಾಡಿಗಳಲ್ಲಿ ಕಾಸರಗೋಡು ರೈಲು ನಿಲ್ದಾಣದಿಂದ ಪ್ರಯಾಣಿಸುತ್ತಾರೆ. ಹಲವು ಸಂದರ್ಭಗಳಲ್ಲಿ ರಿಸರ್ವೇಶನ್‌ ಲಭಿಸದೆ ಜನರಲ್‌ ಬೋಗಿಗಳಲ್ಲಿ ಪ್ರಯಾಣಿಸಬೇಕಾಗಿ ಬರುವುದಿದೆ. ಈ ರೈಲು ಗಾಡಿಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುವುದರಿಂದ ಬಹುತೇಕ ಮಂದಿ ರಾಜ್ಯ ಸಾರಿಗೆ ಬಸ್‌ ಮತ್ತು ಖಾಸಗಿ ಬಸ್‌ಗಳನ್ನು ಅವಲಂಬಿಸುತ್ತಾರೆ. ಬಸ್‌ಗಳಲ್ಲಿ ರೈಲುಗಾಡಿಗಳಿಗಿಂತ ಮೂರು ಪಟ್ಟು ಹೆಚ್ಚಿನ‌ ಹಣವನ್ನು ನೀಡಬೇಕಾಗುತ್ತದೆ. ಇದಕ್ಕೆ ಪರಿಹಾರ ಎಂಬಂತಿರುವ ಅಂತ್ಯೋದಯ ಎಕ್ಸ್‌ಪ್ರೆಸ್‌ ರೈಲುಗಾಡಿಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡದಿರುವುದರಿಂದ ಕಾಸರಗೋಡಿನ ಪ್ರಯಾಣಿಕರಿಗೆ ಇದರ ಪ್ರಯೋಜನ ಲಭಿಸದಂತಾಗಿದೆ.

Advertisement

ಸದಾನಂದ ಗೌಡ  ರೈಲ್ವೇ ಸಚಿವರಾಗಿದ್ದಾಗ ಮಂಜೂರು ಮಾಡಿದ್ದ ಬೈಂದೂರು ಪ್ಯಾಸೆಂಜರ್‌ ರೈಲುಗಾಡಿಯನ್ನು ನಿಲುಗಡೆಗೊಳಿಸಿ ಹಲವು ತಿಂಗಳುಗಳೇ ಕಳೆದಿದೆ. ಬೈಂದೂರು ಪ್ಯಾಸೆಂಜರ್‌ ರೈಲುಗಾಡಿಯನ್ನು ಪುನರಾರಂಭಿಸುವುದಾಗಿ ರೈಲ್ವೇ ಅಧಿಕಾರಿಗಳು ಭರವಸೆ ನೀಡಿದ್ದರೂ ಈ ವರೆಗೂ ಆರಂಭಗೊಂಡಿಲ್ಲ. ಜಿಲ್ಲೆಯ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನವಾಗಿದ್ದ ಯಶವಂತಪುರ ಎಕ್ಸ್‌ಪ್ರೆಸ್‌ ರೈಲುಗಾಡಿಯ ಬೋಗಿಗಳನ್ನು ಕಡಿತಗೊಳಿಸಿರುವುದರಿಂದ ಕಾಸರಗೋಡು, ಕಣ್ಣೂರು ಜಿಲ್ಲೆಯ ಪ್ರಯಾಣಿಕರು ಬಹಳಷ್ಟು ಸಮಸ್ಯೆಗೆ ತುತ್ತಾಗಿದ್ದಾರೆ.

ಪ್ರತಿಭಟನಾರ್ಹ
ಕಾಸರಗೋಡು ರೈಲು ನಿಲ್ದಾಣ ಅಭಿವೃದ್ಧಿ ಬಗ್ಗೆಯೂ ಅವಗಣನೆ ತೋರಿದೆ. ದಕ್ಷಿಣ ರೈಲ್ವೇ ಹಲವು ರೈಲು ನಿಲ್ದಾಣಗಳನ್ನು ಭಡ್ತಿಗೊಳಿಸುತ್ತಿದ್ದರೂ ಕಾಸರಗೋಡು ಜಿಲ್ಲೆಯ ಉಪ್ಪಳ ಮೊದಲಾದ ರೈಲು ನಿಲ್ದಾಣಗಳನ್ನು ಭಡ್ತಿಗೊಳಿಸದೆ ಅವಗಣಿಸುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಉಪ್ಪಳ ರೈಲು ನಿಲ್ದಾಣ ಅವಗಣನೆ ವಿರುದ್ಧ ಸ್ಥಳೀಯರು ಹಲವು ಬಾರಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ನಿರ್ದಿಷ್ಟ  ಸೂಪರ್‌ ಫಾಸ್ಟ್‌ ರೈಲು ಹಳಿ ನಿರ್ಮಾಣ ಯೋಜನೆಯಲ್ಲಿ ಕಾಸರಗೋಡು ರೈಲು ನಿಲ್ದಾಣವನ್ನು ಸೇರ್ಪಡೆಗೊಳಿಸದಿರುವುದು ಪ್ರತಿಭಟ ನಾರ್ಹವಾಗಿದೆ.

– ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next