ನವದೆಹಲಿ: ಇಸ್ರೋದ ವಾಣಿಜ್ಯ ವಿಭಾಗ ಅಂತರಿಕ್ಷ ಮತ್ತು ದೇವಾಸ್ ಮಲ್ಟಿ ಮೀಡಿಯಾ ನಡುವಿನ ಒಪ್ಪಂದ ರದ್ದು ಮಾಡಿದ ಸುಪ್ರೀಂಕೋರ್ಟ್ ಸ್ವಾಗತಾರ್ಹ ಎಂದು ಕೇಂದ್ರ ಸರ್ಕಾರ ಹೇಳಿದೆ.
ಈ ಒಪ್ಪಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಇದು ದೇಶಕ್ಕೆ ಮಾಡಿದ ಮೋಸ ಎಂಬ ಬಗ್ಗೆ ಸ್ಪಷ್ಟ ಸಾಕ್ಷಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಮಾತನಾಡಿದ ಅವರು, 2005ರಲ್ಲಿ ನಡೆದಿದ್ದ ಒಪ್ಪಂದ ರದ್ದು ಮಾಡಿದ ಬಗ್ಗೆ ಸುಪ್ರೀಂಕೋರ್ಟ್ ಆದೇಶ ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇವಾಸ್, ಭಾರತ ಸರ್ಕಾರದ ವಿರುದ್ಧ ಹೂಡಿರುವ ಎಲ್ಲಾ ದಾವೆಗಳನ್ನು ಎದುರಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇದನ್ನೂ ಓದಿ:ಶುಕ್ರವಾರ ಕರ್ಫ್ಯೂ ಭವಿಷ್ಯ, ಲಸಿಕಾಕರಣ ಕಡಿಮೆಯಾದರೆ ಜಿಲ್ಲಾಧಿಕಾರಿಗಳೆ ಹೊಣೆ : ಸಿಎಂ ಸೂಚನೆ
ಅಂತರಿಕ್ಷ-ದೇವಾಸ್ ನಡುವಿನ ಒಪ್ಪಂದವು, “ಭಾರತದ ರಕ್ಷಣಾ ಪಡೆಗಳು ಮಾತ್ರವೇ ಬಳಸಬಹುದಾಗಿದ್ದ ಎನ್-ಬ್ಯಾಂಡ್ ಉಪಗ್ರಹ ತರಂಗ ಗುತ್ಛವನ್ನು ಅಂದಿನ ಕೇಂದ್ರ ಸರ್ಕಾರ, ಖಾಸಗಿ ಕಂಪನಿಗೆ (ದೇವಾಸ್) ಅತ್ಯಲ್ಪ ಬೆಲೆಗೆ ಮಾರಾಟ ಮಾಡಿತ್ತು. ಇದು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಮಾಡಿಕೊಂಡ ಮೋಸದ ಒಪ್ಪಂದ ಎಂಬುದರಲ್ಲಿ ಎರಡು ಮಾತಿಲ್ಲ.
ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ಈ ಹಿನ್ನೆಲೆಯಲ್ಲಿ ದೇವಾಸ್ ಮಲ್ಟಿಮೀಡಿಯಾಕ್ಕೆ ಸಂಬಂಧಿಸಿದ ಎಲ್ಲಾ ಸ್ಥಿರಾಸ್ತಿ- ಚರಾಸ್ತಿಗಳನ್ನು ಜಪ್ತಿ ಮಾಡಲು ಕೇಂದ್ರ ಸರ್ಕಾರಕ್ಕೆ ಕಾನೂನಾತ್ಮಕ ಬಲ ಬಂದಂತಾಗಿದೆ” ಎಂದರು