ಹೊಸದಿಲ್ಲಿ: ದಿಲ್ಲಿಯಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವಂತೆಯೇ, ಪ್ರಸಕ್ತ ತಿಂಗಳ ಆರಂಭದಲ್ಲಿ ನಡೆಸಿದ ಸೀರೋ ಸರ್ವೇಯಲ್ಲಿ ದಿಲ್ಲಿಯ ಶೇ.29.1ರಷ್ಟು ಮಂದಿಯ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ.
ಈ ವಿಚಾರವನ್ನು ಗುರುವಾರ ದಿಲ್ಲಿಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ಆ.1ರಿಂದ 7ರವರೆಗೆ 11 ಜಿಲ್ಲೆಗಳ 15 ಸಾವಿರ ಮಂದಿಯ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ, ಪರೀಕ್ಷೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಸೆ.1ರಿಂದ ಮುಂದಿನ ಹಂತದ ಸಮೀಕ್ಷೆ ನಡೆಸಲಿದ್ದೇವೆ ಎಂದು ಜೈನ್ ತಿಳಿಸಿದ್ದಾರೆ.
ಈ ಹಿಂದೆ ನಡೆಸಿದ ಸೀರೋ ಸರ್ವೇಯಲ್ಲಿ ದಿಲ್ಲಿಯ ಶೇ.22ರಷ್ಟು ಮಂದಿಗೆ ಈಗಾಗಲೇ ಸೋಂಕು ತಗುಲಿದ್ದು, ಅವರ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗಿ ಕೊರೊನಾದಿಂದ ಗುಣ ಮುಖರಾಗಿದ್ದಾರೆ ಎಂಬ ವಿಚಾರ ತಿಳಿದು ಬಂದಿತ್ತು. ವಿಶೇಷ ವೆಂದರೆ, ಪ್ರತಿಕಾಯ ಸೃಷ್ಟಿಯಾಗಿರುವವರ ಪೈಕಿ ಶೇ.28.3ರಷ್ಟು ಪುರುಷರಾದರೆ, ಶೇ.32.2ರಷ್ಟು ಮಹಿಳೆ ಯರು ಎಂಬ ಅಂಶ ಸರ್ವೇ ಯಿಂದ ಬಹಿರಂಗವಾಗಿದೆ.
ಇದೇ ವೇಳೆ, ಪ್ರತಿಕಾಯ ಸೃಷ್ಟಿಯಾಗಿದೆ ಎಂಬ ಮಾತ್ರಕ್ಕೆ ಜನರು ನಿರ್ಲಕ್ಷ್ಯ ವಹಿಸು ವಂತಿಲ್ಲ. ಯಾಕೆಂದರೆ, ಇದು ಸೃಷ್ಟಿಯಾಗಿ ರುವುದು ಶೇ.29ರಷ್ಟು ಮಂದಿಗೆ ಮಾತ್ರ. ಅಂದರೆ ಶೇ.71ರಷ್ಟು ಜನರಿಗೆ ಇನ್ನಷ್ಟೇ ಸೋಂಕು ತಗಲುವ ಸಾಧ್ಯತೆಯಿದೆ ಎಂದೂ ಜೈನ್ ಹೇಳಿದ್ದಾರೆ.
ದಾಖಲೆ: ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದು ದಿನದ ಸೋಂಕು ಪ್ರಕರಣಗಳ ಸಂಖ್ಯೆ 70 ಸಾವಿರದ ಸನಿಹಕ್ಕೆ ಬಂದಿದೆ. ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8ರವರೆಗಿನ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 69,652 ಮಂದಿಗೆ ಸೋಂಕು ದೃಢಪಟ್ಟು, 977 ಮಂದಿ ಮೃತಪಟ್ಟಿ ದ್ದಾರೆ. ಇದೇ ವೇಳೆ, ಗುಣಮುಖ ಪ್ರಮಾಣ ಶೇ.73.91ಕ್ಕೇರಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಸೋಂಕಿನ ಅಂತ್ಯಕ್ಕೆ ದಿನಗಣನೆ?
ಹಲವು ತಿಂಗಳುಗಳಿಂದಲೂ ಕೋವಿಡ್ ಎಂಬ ಮಹಾಮಾರಿಯ ದಾಳಿಯಿಂದ ನಲುಗಿಹೋಗಿರುವ ಭಾರತವು ಸಮಾಧಾನದ ನಿಟ್ಟುಸಿರು ಬಿಡುವ ದಿನ ಸಮೀಪಿಸಿದೆಯೇ? ಟೈಮ್ಸ್ ಫ್ಯಾಕ್ಟ್- ಇಂಡಿಯಾ ಔಟ್‌ಬ್ರೇಕ್ ವರದಿ ಪ್ರಕಾರ, ಭಾರತದಲ್ಲಿ ಸೋಂಕು ಉತ್ತುಂಗಕ್ಕೇರಲು ಇನ್ನು 2 ವಾರಗಳಷ್ಟೇ ಬಾಕಿಯಿದೆ. ಅಂದರೆ, ಸೋಂಕು ಉತ್ತುಂಗದ ಮಟ್ಟಕ್ಕೇರಿ, ಅನಂತರ ಕ್ರಮೇಣ ಇಳಿಕೆಯಾಗುತ್ತಾ ಬರಲಿದೆ. ಸೆ.2ರ ವೇಳೆಗೆ 7.87 ಲಕ್ಷ ಸಕ್ರಿಯ ಪ್ರಕರಣಗಳೊಂದಿಗೆ ಸೋಂಕು ಉತ್ತುಂಗಕ್ಕೇರಲಿದೆ. ಡಿ.3ರ ವೇಳೆಗೆ ಸೋಂಕಿನ ವ್ಯಾಪಿಸುವಿಕೆಗೆ ಪೂರ್ಣವಿರಾಮ ಬೀಳುವ ನಿರೀಕ್ಷೆಯಿದೆ ಎಂದು ಈ ವರದಿ ಹೇಳಿದೆ.