Advertisement

ಉಗ್ರ ಕಾಯ್ದೆಗೆ ಸಮ್ಮತಿ

02:05 AM Aug 03, 2019 | Sriram |

ನವದೆಹಲಿ: ವ್ಯಕ್ತಿಯನ್ನು ಉಗ್ರ ಎಂದು ಘೋಷಿ ಸಲು ಅನುವು ಮಾಡುವ ಅಕ್ರಮ ಚಟುವಟಿಕೆಗಳ (ತಡೆ) ತಿದ್ದುಪಡಿ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಶುಕ್ರವಾರ ಅನುಮೋದನೆ ಲಭ್ಯವಾಗಿದೆ. ಮಸೂದೆಯ ಪರವಾಗಿ 142 ಸದಸ್ಯರ ಮತ ಚಲಾಯಿ ಸಿದ್ದು, 42 ಮತಗಳು ವಿರುದ್ಧವಾಗಿ ಚಲಾವಣೆ ಯಾಗಿವೆ. ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಕೂಡ ಮಸೂದೆ ಪರವಾಗಿ ಮತ ಚಲಾವಣೆ ಮಾಡಿವೆ.


Advertisement

ಇದಕ್ಕೂ ಮೊದಲು ತಿದ್ದುಪಡಿಯನ್ನು ಆಯ್ಕೆ ಸಮಿತಿಗೆ ಕಳುಹಿಸುವಂತೆ ವಿಪಕ್ಷಗಳು ಆಗ್ರಹಿಸಿದ್ದರಿಂದ, ಮತ ಚಲಾವಣೆ ಮಾಡಲಾಗಿತ್ತು. ಆಗ ಕೇವಲ 85 ಸದಸ್ಯರು ಆಯ್ಕೆ ಸಮಿತಿಗೆ ಮಸೂದೆಯನ್ನು ಕಳುಹಿಸಲು ಸಮ್ಮತಿಸಿ ಮತ ಚಲಾವಣೆ ಮಾಡಿದ್ದರು. ವಿರುದ್ಧವಾಗಿ 104 ಮತಗಳು ಚಲಾವಣೆಯಾಗಿದ್ದರಿಂದ ವಿಪಕ್ಷಗಳ ಬೇಡಿಕೆಗೆ ಹಿನ್ನಡೆಯಾಗಿತ್ತು. ಮಸೂದೆಯನ್ನು ಅಂತಿಮವಾಗಿ ಮತಕ್ಕೆ ಹಾಕಿದಾಗ, ಟಿಎಂಸಿ, ಎಡಪಕ್ಷಗಳು, ಡಿಎಂಕೆ, ಎಂಡಿಎಂಕೆ, ಆರ್‌ಜೆಡಿ ಮತ್ತು ಇತರ ಸಣ್ಣ ಪಕ್ಷಗಳು ಮಸೂದೆಯನ್ನು ವಿರೋಧಿಸಿ ಮತ ಚಲಾವಣೆ ಮಾಡಿವೆ.

ಈ ಮಸೂದೆ ಜುಲೈ 24ರಂದು ಲೋಕಸಭೆಯಲ್ಲೂ ಅನುಮೋದನೆ ಪಡೆದಿದೆ. ಹೀಗಾಗಿ, ಕಾನೂನು ಜಾರಿಗೊಳ್ಳಲು ಇನ್ನು ರಾಷ್ಟ್ರಪತಿ ಸಹಿ ಮತ್ತು ಸರ್ಕಾರದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

ಉಗ್ರರ ದಮನವೇ ಉದ್ದೇಶ: ಮಸೂದೆಯ ಕುರಿತ ಚರ್ಚೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ಕಾನೂನನ್ನು ಕೇವಲ ಉಗ್ರ ದಮನಕ್ಕೆ ಬಳಸಲಾಗುತ್ತದೆ ಎಂದರು.

ಇದರಿಂದ ಉಗ್ರರಿಗಿಂತ ಐದು ಹೆಜ್ಜೆ ಮುಂದಿರಲು ತನಿಖಾ ಏಜೆನ್ಸಿಗಳಿಗೆ ಸಹಾಯವಾಗಲಿದೆ. ಈ ಮಸೂದೆಗೆ ಧರ್ಮವನ್ನು ತಳುಕು ಹಾಕುವ ಮೂಲಕ ಕಾಂಗ್ರೆಸ್‌ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಸಂಜೋತಾ ಮತ್ತು ಮೆಕ್ಕಾ ಮಸೀದಿ ಪ್ರಕರಣಗಳಲ್ಲಿ ನಿರ್ದಿಷ್ಟ ಧರ್ಮದವರ ಮೇಲೆ ಆರೋಪ ಹೊರಿಸುವ ಮೂಲಕ ಕಾಂಗ್ರೆಸ್‌ ಈ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡಿತ್ತು. ಇದೇ ಕಾನೂನು ಬಳಸಿ ವಿಪಕ್ಷವನ್ನೂ ಕಾಂಗ್ರೆಸ್‌ ಟಾರ್ಗೆಟ್ ಮಾಡಿತ್ತು ಎಂದು ಶಾ ಆರೋಪಿಸಿದ್ದಾರೆ. ಅಲ್ಲದೆ ತುರ್ತುಪರಿಸ್ಥಿತಿಯನ್ನೂ ಇದೇ ವೇಳೆ ಅವರು ಪ್ರಸ್ತಾಪಿಸಿದ್ದಾರೆ.

Advertisement

ವ್ಯಕ್ತಿ ಸ್ವಾತಂತ್ರ್ಯ ಗೌರವಿಸಿ: ಮಸೂದೆ ಕುರಿತ ಚರ್ಚೆ ವೇಳೆ ಮಾತನಾಡಿದ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ಈ ಮಸೂದೆಯನ್ನು ಕಾಂಗ್ರೆಸ್‌ ವಿರೋಧಿಸುತ್ತಿಲ್ಲ. ಆದರೆ ಕೆಲವು ತಿದ್ದುಪಡಿಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಈ ಮಸೂದೆಯನ್ನು ಅನುಮೋದಿಸಿದರೆ ಕೋರ್ಟ್‌ ಇದನ್ನು ತಿರಸ್ಕರಿಸುತ್ತದೆ. ಮಸೂದೆಯಲ್ಲಿ ಅಕ್ರಮ ಎಸಗುತ್ತಿರುವ ಸಂಸ್ಥೆ ಮತ್ತು ವ್ಯಕ್ತಿಯ ಮಧ್ಯೆ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಿಲ್ಲ. ಈ ತಿದ್ದುಪಡಿಯನ್ನು ಯಾಕೆ ಸೇರಿಸಲಾಗಿದೆ? ಇದರ ಉದ್ದೇಶವೇನು ಎಂದು ಅವರು ಪ್ರಶ್ನಿಸಿದ್ದಾರೆ. ಸಂಸ್ಥೆಯನ್ನೇ ಉಗ್ರ ಸಂಘಟನೆ ಎಂದು ಘೋಷಿಸಿದಾಗ, ಅದರಲ್ಲಿ ತೊಡಗಿಸಿಕೊಂಡ ವ್ಯಕ್ತಿಯನ್ನು ಉಗ್ರ ಎಂದು ಘೋಷಿಸುವ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಯ್ದೆಯಲ್ಲಿ ಏನಿದೆ?
ವ್ಯಕ್ತಿಯನ್ನು ಉಗ್ರ ಎಂದು ಘೋಷಿಸುವುದು, ಆತನ ಸ್ವತ್ತು, ಶಸ್ತ್ರಾಸ್ತ್ರ ಮುಟ್ಟುಗೋಲು ಹಾಕುವುದು
-ಉಗ್ರ ಎಂದು ಘೋಷಿಸಲ್ಪಟ್ಟ ವ್ಯಕ್ತಿಯ ವೈಯಕ್ತಿಕ, ಹಣಕಾಸು ಮಾಹಿತಿಯನ್ನು ವಿದೇಶಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಹುದು
-ಇಂತಹ ವ್ಯಕ್ತಿಯ ಅಪರಾಧಗಳನ್ನು ಎನ್‌ಐಎ ಇನ್‌ಸ್ಪೆಕ್ಟರ್‌ ಶ್ರೇಣಿಯ ಅಧಿಕಾರಿಯೂ ತನಿಖೆ ನಡೆಸಬಹುದು
-ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ದಾಳಿ ನಡೆಸಲು ಎನ್‌ಐಎಗೆ ಅಧಿಕಾರ -ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ ಉಗ್ರ ವ್ಯಕ್ತಿಯ ಸ್ವತ್ತು ಜಪ್ತಿ ಮಾಡಬಹುದು -ಉಗ್ರ ಎಂದು ಘೋಷಿಸಲ್ಪಟ್ಟ ವ್ಯಕ್ತಿಯು ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು
-ಉಗ್ರ ಎಂದು ಘೋಷಿಸಲ್ಪಟ್ಟ ವ್ಯಕ್ತಿಯ ಮೇಲ್ಮನವಿ ವಿಚಾರಣೆಗೆ ಕಾಯ್ದೆ ಅಡಿಯಲ್ಲಿ ಸಮಿತಿ ರಚನೆ

Advertisement

Udayavani is now on Telegram. Click here to join our channel and stay updated with the latest news.

Next