Advertisement

Timber mafia ವಿರುದ್ಧ ಕಳ್ಳ ಬೇಟೆ ತಡೆ ಶಿಬಿರ

11:08 PM Aug 07, 2023 | Team Udayavani |

ಬೆಂಗಳೂರು: ದೇಶದಲ್ಲೇ ವೈವಿಧ್ಯಮಯ ಸಸ್ಯ ಪ್ರಭೇದ ಹೊಂದಿರುವ ಕರ್ನಾಟಕದ ಅರಣ್ಯ ಸಂಪತ್ತಿಗೆ ಟಿಂಬರ್‌ ಮಾಫಿಯಾದ ಕರಿನೆರಳು ಬಿದ್ದಿದ್ದು,ಕಾಡಿನ ಅಕ್ರಮಕ್ಕೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ 618 “ಕಳ್ಳ ಬೇಟೆ ತಡೆ ಶಿಬಿರ’ಕ್ಕೆ ಸಿಬಂದಿ ನೇಮಿಸಿ ಇನ್ನಷ್ಟು ಬಲ ತುಂಬಲು ಅರಣ್ಯ ಇಲಾಖೆ ಮುಂದಾಗಿದೆ.

Advertisement

ಟಿಂಬರ್‌ ದಂಧೆ ವ್ಯಾಪಕ
ಕೆಲವು ವರ್ಷಗಳ ಹಿಂದೆ ತೆರೆಕಂಡ ತೆಲುಗಿನ “ಪುಷ್ಪ’ ಸಿನೆಮಾ ಮಾದರಿಯಲ್ಲೇ ರಾಜ್ಯದಲ್ಲಿ ಟಿಂಬರ್‌ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕಾಡಿಗೆ ಅಕ್ರಮವಾಗಿ ನುಗ್ಗುವ ದಂಧೆಕೋರರು ಶ್ರೀಗಂಧ, ರಕ್ತಚಂದನ, ಬೀಟೆ, ಸಾಗುವಾನಿ, ತೇಗ, ಬಿಳಿ ಮರ, ಮಹಾಗನಿ, ಬಿದಿರಿನಂತಹ ಬೆಲೆ ಬಾಳುವ ಮರಗಳನ್ನು ಕಡಿದು ಕಳ್ಳಸಾಗಣೆ ಮೂಲಕ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಸಾಗಿಸಿ ಕೋಟ್ಯಂತರ ರೂಪಾಯಿ ಗಳಿಸುತ್ತಿದ್ದಾರೆ. ಇದು ಕೆಳಹಂತದ ಅರಣ್ಯ ಇಲಾಖೆ ಸಿಬಂದಿ ಗಮನಕ್ಕೆ ಬಂದರೂ ಗ್ಯಾಂಗ್‌ನ ಸೂತ್ರದಾರರು ಕೈ ಬೆಚ್ಚಗೆ ಮಾಡುವ ಹಿನ್ನೆಲೆಯಲ್ಲಿ ದಂಧೆಕೋರರತ್ತ ಸುಳಿವುದಿಲ್ಲ. ದಂಧೆಕೋರರು ವನ್ಯಜೀವಿಗಳಾದ ಜಿಂಕೆ, ಹುಲಿ, ಕಾಡೆಮ್ಮೆ, ಕಡವೆ, ಆನೆ, ಚಿರತೆ ಬೇಟೆಯಾಡಿ ಅದರ ಚರ್ಮ, ಉಗುರು, ದಂತಗಳನ್ನು ವಿದೇಶಕ್ಕೆ ರವಾನಿಸುವ ವ್ಯವಸ್ಥಿತ ಜಾಲ ಇನ್ನೂ ಅವ್ಯಾಹತವಾಗಿದೆ. ಇದು ಸರಕಾರದ ಗಮನಕ್ಕೆ ಬಂದಿದ್ದು, ಅರಣ್ಯ ರಕ್ಷಣೆಗಾಗಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಲು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಕದ್ದ ಮರ ವಿದೇಶಕ್ಕೆ ಪೂರೈಕೆ
ಬೆಲೆ ಬಾಳುವ ಶ್ರೀಗಂಧದಂತಹ ಮರಗಳು ಕಳ್ಳಸಾಗಣೆ ಮೂಲಕ ಹಡಗಿನಲ್ಲಿ ವಿವಿಧ ದೇಶಗಳಿಗೆ ರವಾನೆಯಾಗುತ್ತವೆ. ಶ್ರೀಗಂಧದ ಎಣ್ಣೆ, ಐಷಾರಾಮಿ ಪೀಠೊಪಕರಣ, ಕೆತ್ತನೆ ಮೂಲಕ ವಿವಿಧ ವಿಗ್ರಹ, ಕಲಾಕೃತಿ ರಚಿಸಿ ಲಕ್ಷಾಂತರ ರೂ. ವಹಿವಾಟು ನಡೆಸಲಾಗುತ್ತದೆ. ಆನೆ ದಂತ, ಹುಲಿ ಉಗುರು, ಜಿಂಕೆ, ಚಿರತೆ ಚರ್ಮದಂತಹ ವನ್ಯಜೀವಿ ವಸ್ತುಗಳಿಗೆ ದೇಶದಲ್ಲೆಡೆ ಹೆಚ್ಚಿನ ಬೇಡಿಕೆಯಿದೆ. ಮೌಲ್ಯಯುತ ವನ್ಯಜೀವಿ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವುಳ್ಳ ಕುಬೇರರು ದಂಧೆಕೋರರು ಕೇಳಿದಷ್ಟು ದುಡ್ಡು ಕೊಟ್ಟು ಖರೀದಿಸಲು ಸಿದ್ಧರಿರುತ್ತಾರೆ. ಇದಕ್ಕೆಲ್ಲ ಬ್ರೇಕ್‌ ಹಾಕಲು ಸರಕಾರ ಮುಂದಾಗಿದೆ.

1 ವರ್ಷದಲ್ಲಿ 189 ಪ್ರಕರಣ
2022-23ರಲ್ಲಿ ಕಾಡಿಗೆ ಹಾನಿಯಾಗಿರುವ 189 ಪ್ರಕರಣಗಳು ದಾಖಲಾಗಿವೆ. 404.16 ಹೆಕ್ಟೇರ್‌ ಪ್ರದೇಶಗಳಿಗೆ ಹಾನಿಯಾಗಿವೆ. ರಾಜ್ಯದಲ್ಲಿ ರುವ 43,382 ಚ.ಕೀ.ಮೀ. ಅರಣ್ಯ ಪ್ರದೇಶಗಳಲ್ಲಿ 10,892 ಚ.ಕೀ.ಮೀ. ವಿಸ್ತೀರ್ಣ ರಕ್ಷಿತ ಪ್ರದೇಶವಾಗಿರುತ್ತದೆ. ಈ ಪೈಕಿ 5 ರಾಷ್ಟ್ರೀಯ ಉದ್ಯಾನವನ, 36 ಅಭಯಾರಣ್ಯ, 17 ಸಂರಕ್ಷಿತ ಮೀಸಲು ಹಾಗೂ 1 ಸಮುದಾಯ ಮೀಸಲು ಪ್ರದೇಶವೆಂದು ಘೋಷಿಸಲಾಗಿದೆ. ಭಾರತದ ಶೇ.25ರಷ್ಟು ಆನೆ ಸಂತತಿ ಹಾಗೂ ಶೇ.18ರಷ್ಟು ಹುಲಿ ಸಂತತಿ ಹೊಂದಿದೆ. ಶೇ.54ರಷ್ಟು ಅರಣ್ಯಗಳು ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿವೆ. ರಾಜ್ಯದ ಶೇ.25 ಅರಣ್ಯ ಪ್ರದೇಶ ವನ್ಯಜೀವಿ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ.

ಟಿಂಬರ್‌ ಮಾಫಿಯಾದಂತಹ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರಕಾರದ ಮಟ್ಟದಲ್ಲಿ ಹಲವು ಅಧಿಕಾರಿಗಳ ಜತೆಗೆ ಸಭೆ ನಡೆಸಲಾಗಿದೆ. ಅರಣ್ಯ ಇಲಾಖೆಯು ಇನ್ನಷ್ಟು ಕಾರ್ಯಾಚರಣೆ ನಡೆಸಿ ಇಂತಹ ಅಕ್ರಮ ತಡೆಗಟ್ಟಲು ಪಣ ತೊಡಲಿದೆ.
-ಜಾವೇದ್‌ ಅಖ್ತರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next