Advertisement

ನಿದ್ದೆಯಿಲ್ಲದೆ ಬಿಬಿಎಂಪಿಯಿಂದ ಸಮರೋಪಾದಿ ಕಾರ್ಯಾಚರಣೆ

10:07 AM Oct 15, 2017 | Team Udayavani |

ಬೆಂಗಳೂರು: ಶುಕ್ರವಾರ ಸುರಿದ ಧಾರಾಕಾರ ಮಳೆಯಿಂದ ತೀವ್ರ ತೊಂದರೆ ಒಳಗಾಗಿರುವ ಪ್ರದೇಶಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮಳೆಯಿಂದಾಗಿ ಸುಮಾರು ನೂರಾರು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರು ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದಲೇ ನಿವಾಸಿಗಳಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ತಿಂಡಿ-ಊಟದ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಸುರಕ್ಷತಾ ದೃಷ್ಟಿಯಿಂದ 2 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಉಳಿದುಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಮೇಯರ್‌ ಸಂಪತ್‌ರಾಜ್‌, ಸ್ಥಳೀಯ ಪಾಲಿಕೆ ಸದಸ್ಯ ಎಂ.ಶಿವರಾಜ್‌ ಹಾಗೂ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಪಾಲಿಕೆ ಅಧಿಕಾರಿಗಳು ಶುಕ್ರವಾರ ರಾತ್ರಿಯಿಂದ ನಿರಂತರವಾಗಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಸಾರ್ವಜನಿಕರ ಸುರಕ್ಷತೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ.

ಸುರಕ್ಷಿತ ಸ್ಥಳಕ್ಕೆ ರವಾನೆ: ಕುರುಬರಹಳ್ಳಿಯಲ್ಲಿ ಶನಿವಾರವೂ ಮಳೆ ಮುಂದುವರಿಯುವ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಈ ಭಾಗದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ. ಕುರುಬರಹಳ್ಳಿ ಮಂಜುಶ್ರೀ ಕಲ್ಯಾಣ ಮಂಟಪ, ಕಿರ್ಲೋಸ್ಕರ್‌ ಬಡಾವಣೆ ಯೋಗ ಕೇಂದ್ರದಲ್ಲಿ ನಿವಾಸಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು ಚಾಪೆ ಹಾಗೂ ಹೊದಿಕೆ ನೀಡಲಾಗಿದೆ.

ನಿರಂತರ ಕಾಮಗಾರಿ: ಶನಿವಾರ ಬೆಳಗ್ಗೆಯಿಂದಲೇ ರಾಜಕಾಲುವೆ ದುರಸ್ತಿಯನ್ನು ಪಾಲಿಕೆ ಅಧಿಕಾರಿಗಳು ಕೈಗೆತ್ತಿಕೊಂಡಿದ್ದಾರೆ. 1.45 ಕೋಟಿ ವೆಚ್ಚದಲ್ಲಿ 120 ಮೀಟರ್‌ ಕಾಲುವೆ ತಡೆಗೋಡೆ ನಿರ್ಮಿಸುವ ಯೋಜನೆಗೆ ಟೆಂಡರ್‌ ಪ್ರಕ್ರಿಯೆ ಮುಗಿದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಶನಿವಾರ ಬೆಳಗ್ಗೆಯಿಂದ ರಾತ್ರಿವರೆಗೆ ಕಾಲುವೆಯನ್ನು ಸ್ವತ್ಛಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದರು.

ನಾಳೆ ಪರಿಹಾರ ವಿತರಣೆ: ಮೃತರ ಕುಟುಂಬಗಳಿಗೆ ಶೀಘ್ರ ಪರಿಹಾರ ವಿತರಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಆದೇಶಿಸಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ಮೃತರ ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಲು ಪಾಲಿಕೆ ಅಧಿಕಾರಿಗಳು ಅಗತ್ಯ ಸಿದ್ಧತೆ ನಡೆಸಿದ್ದಾರೆ. ಭಾನುವಾರ ಬ್ಯಾಂಕ್‌ ರಜೆ ದಿನವಾದ ಹಿನ್ನೆಲೆಯಲ್ಲಿ ಸೋಮವಾರ ಪರಿಹಾರ ನೀಡಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.

Advertisement

ಕಾಲುವೆಯಲ್ಲಿ ಬೈಕ್‌, ಆಟೋ: ಕುರುಬರಹಳ್ಳಿ 19ನೇ ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡಲಾಗಿದ್ದ ಆಟೋ ಹಾಗೂ ಬೈಕ್‌ ಶುಕ್ರವಾರ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಎನ್‌ಡಿಆರ್‌ಫ್, ಎಸ್‌ಡಿಆರ್‌ಫ್ಹಾ ಗೂ ಪೌರರಕ್ಷಾ ಸಿಬ್ಬಂದಿ ಪರಿಶೀಲನೆ ನಡೆಸುವ ವೇಳೆ ಪತ್ತೆಯಾಗಿದ್ದು, ಸಂಪೂಣವಾಗಿ ಜಖಂಗೊಂಡಿದ್ದು, ಮಾಲಿಕರಾದ ವಿನಾಯಕ ಹಾಗೂ ಗುರುಬಸವ ಅವರಿಗೆ ವಾಹನಗಳನ್ನು ನೀಡಿದ್ದಾರೆ.

ಮುಂಜಾಗ್ರತಾ ಕ್ರಮ: ಶುಕ್ರವಾರ ರಾಜಕಾಲುವೆ ಉಕ್ಕಿ ಹರಿದ ಭಾಗದಲ್ಲಿ ಬಿಬಿಎಂಪಿ ವತಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮಳೆ ನೀರು ವಸತಿ ಪ್ರದೇಶಗಳಿಗೆ ನುಗ್ಗದಂತೆ ಮರಳಿನ ಮೂಟೆಗಳು ಹಾಗೂ ಕಾಲುವೆಯಲ್ಲಿನ ಕಟ್ಟಡ ಅವಶೇಶಗಳನ್ನು ಅಡ್ಡಲಾಗಿ ಹಾಕಲಾಗಿದೆ.

ನಿವಾಸಿಗಳಿಗೆ ಪರಿಹಾರ: ಮನೆಗಳಿಗೆ ನೀರು ನುಗ್ಗಿದರಿಂದ ಮನೆಯಲ್ಲಿ ದಿನಸಿ ಇತರೆ ಗೃಹ ಉಪಯೋಗಿ ವಸ್ತುಗಳಿಗೆ ಹಾನಿಯಾಗಿರುವ ಮನೆಗಳನ್ನು ಪಟ್ಟಿ ಮಾಡಿ ಅವರಿಗೆ 2 ರಿಂದ 5 ಸಾವಿರ ಪರಿಹಾರ ನೀಡಲು ಪಾಲಿಕೆ ಅಧಿಕಾರಿಗಳು
ತೀರ್ಮಾನಿಸಿದ್ದಾರೆ.

ಹೆಚ್ಚುವರಿ 100 ಸಿಬ್ಬಂದಿ: ನೀರಿನಲ್ಲಿ ಕೊಚ್ಚಿ ಹೋಗಿರುವ ತಾಯಿ-ಮಗಳು ಶನಿವಾರ ಪತ್ತೆಯಾಗದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 100 ಸಿಬ್ಬಂದಿಯನ್ನು ನೇಮಿಸಿಕೊಂಡು ಶೋಧ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಈಗಾಗಲೇ ಒಟ್ಟಾರೆಯಲ್ಲಿ 150 ಸಿಬ್ಬಂದಿ ರಕ್ಷಣಾ ಹಾಗೂ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

ಮೆಡಿಕಲ್‌ ಕ್ಯಾಂಪ್‌: ರಾಜಕಾಲುವೆ ಕೊಳಚೆ ನೀರು ಬಡಾವಣೆ ಹಾಗೂ ಮನೆಗಳಿಗೆ ನುಗ್ಗಿದರ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಬಿಬಿಎಂಪಿ ಅಧಿಕಾರಿಗಳು, ಪಾಲಿಕೆಯ ವೈದ್ಯರು , ಶುಶ್ರೂಷಕರಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಭಾನುವಾರದಿಂದ ಆರಂಭಿಸಲಿದ್ದಾರೆ. 

ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೂಡಲೇ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅಗತ್ಯ ಅನುದಾನ ನೀಡುವುದಾಗಿ ತಿಳಿಸಲಾಗಿದೆ. ಇದರೊಂದಿಗೆ ನೀರು ಹರಿಯಲು ತೊಂದರೆಯಾಗಿರುವ ಪ್ರದೇಶಗಳಲ್ಲಿನ ರಾಜಕಾಲುವೆ ಒತ್ತುವರಿಯನ್ನು ತೆರವುಗೊಳಿಸು ವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕೆ.ಜೆ.ಜಾರ್ಜ್‌, ನಗರಾಭಿವೃದ್ಧಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next