Advertisement

ಮಂಗಳೂರಿಗೂ ಬರಲಿ ದ್ರವ್ಯ ನಿರೋಧಕ ಪೈಂಟಿಂಗ್‌

11:26 AM Jun 02, 2019 | Sriram |

ಇಂದು ನಮ್ಮಲ್ಲಿ ಗಲ್ಲಿ ಗಲ್ಲಿಗಳಲ್ಲಿ ಮೋದಿಯವರ ಕನಸಿನ ಸ್ವಚ್ಛ ಭಾರತದ ಕಲ್ಪನೆಗೆ ಬಲ ತುಂಬುವ ಕೆಲಸಗಳು ನಿತ್ಯ ನಿರಂತರವಾಗಿ ನಡೆಯುತ್ತಲೇ ಇವೆ. ಇದು ಕೇವಲ ಮೋದಿಯವರ ಕರ್ತವ್ಯವಲ್ಲ , ನಮ್ಮ ಕರ್ತವ್ಯವೂ ಎಂದುಕೊಂಡು ಮುಂಜಾನೆ ಎದ್ದು ಪೊರಕೆ ಹಿಡಿದು ಊರನ್ನು ಸ್ವಚ್ಛವಾಗಿಡಲು ಅನೇಕ ಸಂಘಟನೆಗಳು ಶ್ರಮಿಸುತ್ತಿವೆ. ಒಂದು ಹಂತದಲ್ಲಿ ಈ ಯೋಜನೆ ಜಾಗೃತಗೊಂಡರೂ ಆದರೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ.

Advertisement

ನಗರದಲ್ಲಿನ ಸುಂದರ ಗೋಡೆಗಳಲ್ಲಿ ಭಿತ್ತಿ ಪತ್ರಗಳನ್ನು ಹಚ್ಚುವುದು, ಸಿಕ್ಕ ಸಿಕ್ಕ ಗೋಡೆಗಳಲ್ಲಿ ಉಗುಳುವುದು, ಜನನಿಬಿಡ ಪ್ರದೇಶ ಎಂದು ಗೊತ್ತಿದ್ದರೂ ಮೂತ್ರ ವಿಸರ್ಜನೆ ಮಾಡುವುದು ಇಂತಹ ಅನಾಗರಿಕ ವರ್ತನೆಗಳು ನಮ್ಮಲ್ಲಿ ಇಂದಿಗೂ ಕಾಣುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಮೇಲೆ ಹೇಳಿರುವುದರಲ್ಲಿ ತಮ್ಮ ದೇಹ ಬಾಧೆಯನ್ನು ಶೌಚಾಲಯಗಳಲ್ಲಿ ವಿಸರ್ಜಿಸದೆ ನಗರದ ಗೋಡೆಗಳನ್ನೇ ಆಶ್ರಯಿಸುವವರಿಗೆ ಜರ್ಮನ್‌ ದೇಶ ಪರಿಹಾರ ಕಂಡುಕೊಂಡಿದೆ ಅದು ಹೇಗೆ ಅಂತೀರಾ…

ದ್ರವ್ಯ ನಿರೋಧಕ ಪೈಂಟಿಂಗ್‌
‘don’t pee wall we pee back’ ಇಂತಹದ್ದೊಂದು ಗೋಡೆ ಬರಹಗಳು ಜರ್ಮನ್‌ನ ಹಮ್‌ಬರ್ಗ್‌ ನಗರಗಳಲ್ಲಿ ಕಾಣಸಿಗುತ್ತದೆ.

ಹೌದು, ರಾತ್ರಿ ಹೊತ್ತು ನಗರಗಳಲ್ಲಿ ಕುಡಿದು ಅಮಲೇರಿದವರಿಗೆ ನಗರದ ಎಲ್ಲಾ ಕಡೆಯೂ ಶೌಚಾಲಯದಂತೆ ಕಾಣುತ್ತದೆ. ಇಂತವರಿಗಾಗಿ ಇಲ್ಲಿನ ನಗರದ ಆಡಳಿತ ಮಂಡಳಿಗಳು ಪರಿಹಾರ ಸೂತ್ರವಾಗಿ ಹೊರ ತಂದ ವಿನೂತನ ಪ್ರಯತ್ನವೇ ದ್ರವ್ಯ ನಿರೋಧಕ ಪೈಂಟಿಂಗ್‌. ಯಾವ ಯಾವ ಪ್ರದೇಶಗಳಲ್ಲಿ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದಿದೆಯೋ ಅವುಗಳನ್ನು ಗುರುತಿಸಿ ಅಲ್ಲಿನ ಗೋಡೆಗಳಿಗೆ ವಾಟರ್‌ ಪ್ರೂಪ್‌ ಪೈಂಟಿಂಗ್‌ ಹಾಕುವುದಾಗಿದೆ. ಈ ಪೈಂಟ್ ವಿಶೇಷತೆ ಏನೆಂದರೆ ಇವುಗಳು ನೀರುಗಳನ್ನು ಹಿಡಿದಿಟ್ಟುಕೊಳ್ಳದೆ ಹಿಂದಕ್ಕೆ ತಳ್ಳಲ್ಪಡುವುದರಿಂದ ವಿಸರ್ಜಿಸುವವನ ಕಾಲುಗಳು ಗಲೀಜು ಆಗುತ್ತದೆ. ಇದರಿಂದಾಗಿ ಗೋಡೆಗಳನ್ನು ಕಂಡು ದೇಹಬಾಧೆ ತೀರಿಸುವವರಿಗೆ ಶೌಚಾಲಯಕ್ಕೆ ಹೋಗುವಂತಹ ಅನಿವಾರ್ಯ ಪರಿಸ್ಥಿತಿ ಇದು ತಂದೊಡ್ಡುತ್ತದೆ.

ಮಂಗಳೂರಿಗೂ ಬರಲಿ
ಭಾರತದ ಪ್ರತಿಯೊಂದು ರಾಜ್ಯಗಳ ಗೋಡೆ, ಖಾಲಿ ಜಾಗಗಳದ್ದೂ ಇದೇ ಪರಿಸ್ಥಿತಿ. ಒಂದು ಕಡೆಯಿಂದ ಸ್ವಚ್ಛತೆ ಮಾಡಿಕೊಂಡು ಬಂದಂತೆ ಇನ್ನೊಂದೆಡೆಯಿಂದ ಮತ್ತೆ ಗಲೀಜು ಮಾಡುವ ಜನರು ನಮ್ಮ ನಡುವೆ ಇದ್ದಾರೆ. ಸ್ವಚ್ಛ ಭಾರತದ ಯೋಜನೆಗೆ ಇದೊಂದು ಉತ್ತಮ ಉಪಾಯ. ಮಂಗಳೂರು ಕೂಡ ಇದರ ಹೊರತಾಗಿಲ್ಲ. ನಗರದ ಸೌಂದರ್ಯ ಹಾಳುಗೆಡವದಂತೆ ನೋಡಿಕೊಳ್ಳಲು ಈ ಪರಿಹಾರ ಸೂತ್ರವನ್ನು ಮಂಗಳೂರು ನಗರದ ಪ್ರಮುಖ ಕಡೆಗಳಲ್ಲಿ ಪ್ರಯೋಗಕ್ಕೆ ತಂದರೆ ನಗರದ ಸ್ವಚ್ಛತೆ ಯಶಸ್ವಿಯಾಗಬಹುದೇನೋ. ನಗರದ ಆಡಳಿತ ಮಂಡಳಿ ಹೊರತು ಪಡಿಸಿ ಮಂಗಳೂರನ್ನು ಅಂದವಾಗಿಡಲು ಶ್ರಮಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳು ಈ ಉಪಾಯವನ್ನು ಅನುಸರಿಸಿದರೇ ಮಂಗಳೂರು ಸ್ವಚ್ಛ ಮಂಗಳೂರು ಆಗಲು ಬಹಳ ಸಮಯ ಬೇಕಾಗಿಲ್ಲ ಅಲ್ಲವೇ.

Advertisement

-ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next