Advertisement

ರಾಜ್ಯದಲ್ಲಿ ಡ್ರಗ್ಸ್‌ ವಿರೋಧಿ ನೀತಿ ಜಾರಿ ಶೀಘ್ರ : ಗೃಹ ಸಚಿವ ಬೊಮ್ಮಾಯಿ

01:05 AM Mar 19, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ಮಾದಕ ಪದಾರ್ಥಗಳ ದಂಧೆಗೆ ಕಡಿವಾಣ ಹಾಕಲು ಮತ್ತು ಈ ಪಿಡುಗಿನಿಂದ ಸಮಾಜವನ್ನು ಮುಕ್ತಗೊಳಿಸಲು ಸಮಗ್ರವಾದ “ಡ್ರಗ್ಸ್‌ ವಿರೋಧಿ ನೀತಿ’ ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ನೀತಿ ಕರಡು ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಸದನದಲ್ಲಿ ಮಂಡಿಸಲಾಗುವುದು. ಕೇಂದ್ರ ಸರಕಾರದ “ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ’ (ಎನ್‌ಡಿಪಿಎಸ್‌)ಯ ನಿಯಮಗಳಲ್ಲಿ ಬದಲಾವಣೆ ತರಲು ರಾಜ್ಯ ಸರಕಾರಕ್ಕೆ ಅಧಿಕಾರವಿದ್ದು, ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನಪರಿಷತ್ತಿನಲ್ಲಿ ಪ್ರಶ್ನೋತ್ತರ ಅವಧಿ ವೇಳೆ ಬಿಜೆಪಿಯ ಮಹಾಂತೇಶ್‌ ಕವಟಗಿಮಠ ಪ್ರಶ್ನೆಗೆ ಬೊಮ್ಮಾಯಿ ಅವರು ಉತ್ತರಿಸಿದರು.

ರಾಜ್ಯದಲ್ಲಿ 2018ರಿಂದ 2021ರ ಮಾ. 10ರ ತನಕ 7,943 ಮಾದಕ ವಸ್ತು ಪ್ರಕರಣಗಳು ದಾಖಲಾಗಿದ್ದು, 10,566 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪಿಡುಗನ್ನು ಸಮಾಜದಿಂದ ಕಿತ್ತು ಹಾಕಬೇಕು. ಈ ನಿಟ್ಟಿನಲ್ಲಿ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರು ನಗರ ಸಹಿತ ಎಲ್ಲ ಜಿಲ್ಲೆಗಳಲ್ಲಿ ನಾರ್ಕೋಟಿಕ್‌ ಸೆಲ್‌ಗ‌ಳನ್ನು ಸ್ಥಾಪಿಸಲಾಗಿದೆ. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಬೆಳಗಾವಿ, ಬೀದರ್‌, ಕಲಬುರಗಿಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಈ ಪಿಡುಗು ನಿವಾರಣೆಗೆ ಗೃಹ ಇಲಾಖೆಯ ಜತೆಗೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಕೈಜೋಡಿಸಬೇಕು. ಈ ಕುರಿತು ಹಲವು ಸಭೆಗಳನ್ನು ನಡೆಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಪ್ರಕರಣಗಳನ್ನು ಬೆಳಕಿಗೆ ತರಲು ಮಾಧ್ಯಮಗಳ ಪಾತ್ರವೂ ಮುಖ್ಯವಾಗಿದೆ. ಮಾಧ್ಯಮದವರ ಜತೆ ಸೇರಿ ಗೃಹ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಗೃಹ ಸಚಿವರು ವಿವರಿಸಿದರು.

ಹುಕ್ಕಾ ಪಾರ್ಲರ್‌ ನಿಷೇಧ
ಹುಕ್ಕಾ ಪಾರ್ಲರ್‌ ನಡೆಸಲು ಬಿಬಿಎಂಪಿ ಲೈಸೆನ್ಸ್‌ ಕೊಡುತ್ತದೆ. ಅಲ್ಲಿ ಮಾದಕ ಪದಾರ್ಥಗಳ ಬಳಕೆಯಾಗು ವುದು ತಿಳಿದುಬಂದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಹುಕ್ಕಾ ಪಾರ್ಲರ್‌ಗಳ ನಿಷೇಧಕ್ಕೆ ವಿರೋಧವೂ ಇದೆ. ಆದರೆ ಇದನ್ನು ಲಕ್ಷಿಸದೆ ಹುಕ್ಕಾ ಪಾರ್ಲರ್‌ ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.

Advertisement

ಎನ್‌ಡಿಪಿಎಸ್‌ ಕಾಯ್ದೆಯಲ್ಲಿ ಎರಡು ಪ್ರಮುಖ ಅಂಶಗಳಿವೆ. ಜತೆಗೆ ಇದು ಬಲಿಷ್ಠವಾದ ಕಾಯ್ದೆ. ಬಹಳ ಯೋಚಿಸಿ, ಕಾನೂನು ಸಲಹೆಗಳನ್ನು ಪಡೆದು ಜಾರಿಗೆ ತರಲಾಗಿದೆ. ಹೀಗಾಗಿ ಈ ಕಾಯ್ದೆಯಲ್ಲಿ ಬದಲಾವಣೆ ತರುವ ಅಗತ್ಯವಿಲ್ಲ.

– ಎಸ್‌.ಟಿ. ರಮೇಶ್‌, ನಿವೃತ್ತ ಡಿಜಿಪಿ

ಎನ್‌ಡಿಪಿಎಸ್‌ ಕಾಯ್ದೆಯನ್ನು ಸರಿಯಾಗಿ ಜಾರಿ ಮಾಡಿದರೆ ಈ ಕಾಯ್ದೆ ಮೂಲಕವೇ ಡ್ರಗ್ಸ್‌ ಜಾಲವನ್ನು ತಡೆಯಬಹುದು. ನನ್ನ ಪ್ರಕಾರ ಎನ್‌ಡಿಪಿಎಸ್‌ ಕಾಯ್ದೆ ಬಲಿಷ್ಠವಾಗಿದೆ. ಬೇರೆ ನೀತಿ, ಕಾನೂನು ಅಗತ್ಯವಿಲ್ಲ. ಆದರೆ ಹೊಸ ನೀತಿಯಿಂದ ಇನ್ನಷ್ಟು ಸುಧಾರಣೆ ಸಾಧ್ಯವಾದರೆ ಒಳ್ಳೆಯದು.

– ರೇವಣ್ಣ ಸಿದ್ದಯ್ಯ, ನಿವೃತ್ತ ಡಿಜಿಪಿ

Advertisement

Udayavani is now on Telegram. Click here to join our channel and stay updated with the latest news.

Next