ಗಜೇಂದ್ರಗಡ: ಸ್ವಚ್ಛ ಹಾಗೂ ಸುಂದರ ಪಟ್ಟಣವನ್ನಾಗಿಸಲು ಈಗಾಗಲೇ ಪುರಸಭೆ ಶ್ರಮಿಸುತ್ತಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಅತಿ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಛತೆ ಕಾಪಾಡುವುದರಿಂದ ಡೆಂಘೀ, ಚಿಕೂನ್‌ಗುನ್ಯಾ ರೋಗ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಾಧಿಕಾರಿ ಹನಮಂತಮ್ಮ ನಾಯಕ್ ಹೇಳಿದರು.
ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 5ರಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ತಾಲೂಕು ಮಟ್ಟದ ಡೆಂಘೀ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ. ಮೊದಲು ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈಗಾಗಲೇ ಪುರಸಭೆಯಿಂದ ಹಲವಾರು ಜಾಗೃತಿ ಕಾರ್ಯಕ್ರಮ ಮಾಡುವುದಲ್ಲದೇ ಕಸ ಸಂಗ್ರಹಿಸಲು ಬುಟ್ಟಿಗಳನ್ನೂ ವಿತರಿಸಲಾಗಿದೆ. ಅಲ್ಲದೇ ರಸ್ತೆ ಮೇಲೆ ಕಸ ಚೆಲ್ಲುವವರಿಗೆ ದಂಡ ಸಹ ವಿಧಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್. ಸುರೇಶ ಮಾತನಾಡಿ, ಡೆಂಘೀ ಚಿಕೂನ್‌ಗುನ್ಯಾ ರೋಗಗಳು ಬರದಂತೆ ಮುನ್ನೆಚ್ಚರಿಕೆ ವಹಿಸಲು, ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿದರು.
ಇದಕ್ಕೂ ಮುನ್ನ ಜಾಗೃತಿ ಜಾಥಾ ನಡೆಯಿತು. ಪುರಸಭೆ ಸದಸ್ಯರಾದ ರಾಜು ಸಾಂಗ್ಲಿಕಾರ, ರುಪೇಶ ರಾಠೊಡ, ಯಮನಪ್ಪ ತಿರಕೋಜಿ, ಸುಭಾಷ ಮ್ಯಾಗೇರಿ, ಮುದಿಯಪ್ಪ ಮುದೋಳ, ಮೂಕಪ್ಪ ನಿಡಗುಂದಿ ಕೌಸರಬಾನು ಹುನಗುಂದ, ಮುಖ್ಯ ಶಿಕ್ಷಕಿ ಎಸ್.ಡಿ ಸವದತ್ತಿ, ಸುಕನ್ಯ ಹೊಗರಿ, ನಾಗರಾಜ ಮಾಳಗಿಮನಿ, ಶಂಕರ ಶಿವಶಿಂಪಗೇರ, ರಾಘವೇಂದ್ರ ಮಂತಾ, ಬಿ.ಆರ್. ಪಾಟೀಲ, ಬಿಆರ್. ಮಣ್ಣೆರಿ, ಎಂ.ಬಿ. ಗಡ್ಡಿ, ಸುನಿಲ್ ಹಬೀಬ, ಮಂಜು ವರಗಾ, ಪ್ರವೀಣ ರಾಠೊಡ, ರಾಜೇಶ ಪಾಟೀಲ, ಮಹೇಶ ಹಿರೇಮಠ ಪಡಿಯಪ್ಪ ಹಳಗೇರಿ ಇದ್ದರು.