ನವದೆಹಲಿ/ಗೌಹಾತಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಅಸ್ಸಾಂ ರಾಜ್ಯದ ಗೌಹಾತಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು ಹಿಂಸಾರೂಪ ತಾಳಿದ ಕಾರಣ ಈ ಭಾಗಗಳಲ್ಲಿ ಸ್ಥಗಿತಗೊಳಿಸಲಾಗಿದ್ದ ಮೊಬೈಲ್ ನೆಟ್ ವರ್ಕ್ ಸೇವೆಗಳು ಹತ್ತು ದಿನಗಳ ಬಳಿಕ ಇಂದು ಪುನರ್ ಚಾಲನೆ ಪಡೆದುಕೊಂಡಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾರೂಪ ತಾಳಿದ ಕಾರಣದಿಂದ ಮುಚ್ಚಲ್ಪಟ್ಟಿದ್ದ ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಇಂದು ತೆರೆಯಲಾಗಿದೆ.
ಸಿಎಎ ಪ್ರತಿಭಟನೆಯ ಮುಖ್ಯಾಂಶಗಳು:
– ನೋಯ್ಡಾ ಮತ್ತು ಗಾಝಿಯಾಬಾದ್ ಪ್ರದೇಶಗಳಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಯವರೆಗೆ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
– ಅಸ್ಸಾಂ ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವರಿಗೆ ಅನುಕೂಲವಾಗುವಂತೆ ಪಶ್ಚಿಮಬಂಗಾಲದ ಹೌರಾ ಜಿಲ್ಲೆಯ ಸಾಂತ್ರಗಾಚಿಯಿಂದ ಅಸ್ಸಾಂನ ಸಿಲ್ಚಾರ್ ಗೆ ವಿಶೇಷ ರೈಲೊಂದನ್ನು (ರೈಲು ಸಂಖ್ಯೆ. 08960) ಹೊರಡಿಸಲಾಗಿದೆ.
– ಪೌರತ್ವ ಕಾಯ್ದೆ ವಿರೋಧಿ ಸಂಬಂಧಿತವಾಗಿ ಅಸ್ಸಾಂನಲ್ಲಿ ನಡೆದ ಗಲಭೆಯಲ್ಲಿ ಯಾರ ಕೈವಾಡವಿದೆ ಎಂಬುದನ್ನು ಕಂಡುಕೊಳ್ಳಲು ಎಸ್.ಐ.ಟಿ ತನಿಖೆಗೆ ಅಸ್ಸಾಂ ಮುಖ್ಯಮಂತ್ರಿ ಆದೇಶಿಸಿದ್ದಾರೆ.
– ನಾಗ್ಪುರದಲ್ಲಿ ಇಂದು ಮಧ್ಯಾಹ್ನ 02 ಗಂಟೆಗೆ ಇಲ್ಲಿನ ಚಿಟ್ನಿಸ್ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.